ಹುಲಿ ಅಭಯಾರಣ್ಯ ಸಂರಕ್ಷಣೆಗೆ ಹೊಸ ಸೂತ್ರ: ಪ್ರವಾಸೋದ್ಯಮಕ್ಕೆ ಒಪ್ಪಿಗೆ

6

ಹುಲಿ ಅಭಯಾರಣ್ಯ ಸಂರಕ್ಷಣೆಗೆ ಹೊಸ ಸೂತ್ರ: ಪ್ರವಾಸೋದ್ಯಮಕ್ಕೆ ಒಪ್ಪಿಗೆ

Published:
Updated:
ಹುಲಿ ಅಭಯಾರಣ್ಯ ಸಂರಕ್ಷಣೆಗೆ ಹೊಸ ಸೂತ್ರ: ಪ್ರವಾಸೋದ್ಯಮಕ್ಕೆ ಒಪ್ಪಿಗೆ

ನವದೆಹಲಿ (ಪಿಟಿಐ): ಅಳಿವಿನ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಂಗಳವಾರ ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಿದೆ.ಹೀಗಾಗಿ ದೇಶದಾದ್ಯಂತ ಎರಡೂವರೆ ತಿಂಗಳಿನಿಂದ ಹುಲಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನಗಳ ಹೃದಯಭಾಗದಲ್ಲಿ ಸ್ಥಗಿತಗೊಂಡಿದ್ದ ಪ್ರವಾಸಿ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿವೆ.ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಹಾಗೂ ಸ್ವತಂತ್ರಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಹುಲಿ ಅಭಯಾರಣ್ಯಗಳ ಹೃದಯ ಭಾಗದಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ನಿಷೇಧ ಹೇರಿ ಜುಲೈ 24ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿತು.ಆದರೆ, ಇದೇ ಸಂದರ್ಭದಲ್ಲಿ ನ್ಯಾಯಪೀಠ, ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ತಾನು ಊರ್ಜಿತಗೊಳಿಸುತ್ತಲೂ ಇಲ್ಲ ಅಥವಾ ಅನೂರ್ಜಿತಗೊಳಿಸುತ್ತಲೂ ಇಲ್ಲ ಎಂದು ಸ್ಪಷ್ಟಪಡಿಸಿತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಕ್ಟೋಬರ್ 15ರಂದು ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳ ಅನ್ವಯ ಮಾತ್ರ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯಬೇಕು ಎಂದೂ ನ್ಯಾಯಮೂರ್ತಿ ಪಟ್ನಾಯಕ್ ಆದೇಶಿಸಿದರು.ಹುಲಿ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಆರು ತಿಂಗಳ ಒಳಗಾಗಿ ವಿಸ್ತ್ರತ ಯೋಜನೆಯೊಂದನ್ನು ಸಿದ್ಧಪಡಿಸಿ ಹುಲಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದೂ ಕೋರ್ಟ್ ಸೂಚಿಸಿತು.ದೇಶದಾದ್ಯಂತ 41 ಹುಲಿ ಅಭಯಾರಣ್ಯಗಳಿಗೆ ಅನ್ವಯವಾಗುವಂತೆ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಗಮನಕ್ಕೆ ತಂದರು. ಆನಂತರ ಕೋರ್ಟ್ ಈ ಹಿಂದೆ ತಾನು ನೀಡಿದ್ದ ನಿಷೇಧ ರದ್ದುಗೊಳಿಸಿ ಈ ನಿರ್ದೇಶನ ನೀಡಿತು.ಅಕ್ಟೋಬರ್ 9ರ ವಿಚಾರಣೆಯ ಸಂದರ್ಭದಲ್ಲಿ ಒಂದು ವಾರದೊಳಗೆ ಹುಲಿ ಸಂರಕ್ಷಣೆಗಾಗಿ ಮಾರ್ಗದರ್ಶಿ ಸೂತ್ರ ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.ಇದಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಹೋರಾಟಗಾರ ಅಜಯ್ ದುಬೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಜುಲೈ 24ರಂದು ಹುಲಿ ಮೀಸಲು ಅರಣ್ಯಗಳಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿ ಕೋರ್ಟ್ ಆದೇಶ ನೀಡಿತ್ತು.

ಮಾರ್ಗದರ್ಶಿ ಸೂತ್ರದಲ್ಲಿ ಏನಿದೆ?

-ಹುಲಿ ಸಂತತಿಯನ್ನು ಸಂರಕ್ಷಿಸಲು ಅಭಯಾರಣ್ಯಗಳಲ್ಲಿ ಪ್ರವಾಸಿಗಳಿಗೆ ಮತ್ತಷ್ಟು ಮೂಲಸೌಲಭ್ಯ ಕಲ್ಪಿಸಬಾರದು.-ಹುಲಿಗಳ ಚಟುವಟಿಕೆ ಹೆಚ್ಚಾಗಿ ಇರುವ ಅಭಯಾರಣ್ಯಗಳ ಹೃದಯಭಾಗದ ಶೇ 20ರಷ್ಟು ಭಾಗವನ್ನು ಮಾತ್ರ ಪ್ರವಾಸಿ ಚಟುವಟಿಕೆಗೆ ಬಳಸಿಕೊಳ್ಳಬಹುದು. ಈ ಭಾಗದಲ್ಲಿ ನಿಯಂತ್ರಿತವಾಗಿ ಕಡಿಮೆ ಸಂಖ್ಯೆಯ ಪ್ರವಾಸಿಗಳಿಗೆ ಅವಕಾಶ ಮಾಡಿಕೊಡಬಹುದು.-ಅರಣ್ಯದ ಹೃದಯಭಾಗದಲ್ಲಿ ವನ್ಯಜೀವಿ ಪ್ರವಾಸೋದ್ಯಮಕ್ಕಾಗಿ ಬಳಸಲಾಗುತ್ತಿರುವ ಶಾಶ್ವತ ಕಟ್ಟಡಗಳನ್ನು ಹಂತಮ ಹಂತವಾಗಿ ಕಾಲಮಿತಿಯಲ್ಲಿ ತೆರವುಗೊಳಿಸಬೇಕು.-ಸಫಾರಿ ವಾಹನಗಳು ಎಲ್ಲ ರೀತಿಯ ವನ್ಯಜೀವಿಗಳಿಂದ 20 ಮೀಟರ್ ದೂರದಲ್ಲಿ ಇರಬೇಕು ಹಾಗೂ ಅವುಗಳಿಗೆ ಯಾವುದೇ ರೀತಿಯ ತಿಂಡಿ, ತಿನಿಸು ನೀಡಬಾರದು.-1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಎಲ್ಲ ರಾಜ್ಯಗಳೂ ಹುಲಿ ಅಭಯಾರಣ್ಯಗಳ ಹೃದಯಭಾಗ ಹಾಗೂ ಹೊರವಲಯಗಳನ್ನು(ಬಫರ್ ಜೋನ್) ಅಧಿಸೂಚನೆ ಮೂಲಕ ಗುರುತಿಸಬೇಕು.-ಪ್ರಸ್ತುತ ದೇಶದಲ್ಲಿ 1,700 ಹುಲಿಗಳು ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry