ಹುಲಿ ದಾಳಿಗೆ ಆನೆ ಬಲಿ...!

7

ಹುಲಿ ದಾಳಿಗೆ ಆನೆ ಬಲಿ...!

Published:
Updated:

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಮದ್ದೂರು ಅರಣ್ಯ ವಲಯದ ಬಿದುರು ತಳಕಟ್ಟೆ ಪ್ರದೇಶದಲ್ಲಿ ಹುಲಿ ದಾಳಿಗೆ ಹೆಣ್ಣಾನೆ ಬಲಿಯಾಗಿದೆ.ಅಂದಾಜು 10 ವರ್ಷದ ಹೆಣ್ಣಾನೆ­ಯನ್ನು ಕೊಂದು, ಅದರ ತಲೆ ಹಾಗೂ ಪೃಷ್ಠ ಭಾಗದ ಮಾಂಸವನ್ನು ಹುಲಿ ತಿಂದುಹಾಕಿದೆ. ಪಶು ವೈದ್ಯ ನಾಗ­ರಾಜು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಸಾಮಾನ್ಯವಾಗಿ ಆನೆ ಮೇಲೆ ಸಿಂಹ ದಾಳಿ ಮಾಡುತ್ತದೆ. ಹುಲಿ ದಾಳಿ ನಡೆಸುವುದಿಲ್ಲ. ಇದೊಂದು ಅಪ­ರೂಪದ ಘಟನೆಯಾಗಿದೆ. ಕಳೆದ ಸೋಮ­ವಾರ ಈ ದಾಳಿ ನಡೆದಿರ­ಬಹುದು ಎಂದು ಅಂದಾಜಿಸಲಾಗಿದೆ ಎಂದು ಮದ್ದೂರು ವಲಯ ಅರಣ್ಯಾ­ಧಿಕಾರಿ ಕೆ. ಪರಮೇಶ್ ತಿಳಿಸಿದ್ದಾರೆ.ಹುಲಿ ದಾಳಿ: ಹಸು, ಕರು ಸಾವು

ಗೋಣಿಕೊಪ್ಪಲು:
ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮತ್ತು ಕರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದ ಘಟನೆ ಮಂಗಳವಾರ ರಾತ್ರಿ ಪೊನ್ನಂಪೇಟೆ ಸಮೀಪದ ಬೆಕ್ಕೆಸೊಡ್ಲೂರಿನಲ್ಲಿ ನಡೆದಿದೆ.

ಬೆಕ್ಕೆಸೊಡ್ಲೂರಿನ ಮಲ್ಲಮಾಡ ಕಿರಣ್ ಅವರ ಮನೆಯ ಪಕ್ಕದಲ್ಲೇ ಇರುವ ಕೊಟ್ಟಿಗೆಗೆ ನುಗ್ಗಿದ ಹುಲಿ  ಹಸು ಮತ್ತು ಕರುವಿನ ಕುತ್ತಿಗೆಗೆ ಕಚ್ಚಿ ಸಾಯಿಸಿದೆ. ಹಸುವಿನ ಪಾಲಕ ಕಿರಣ್ ಅವರ ಬೆಳಿಗ್ಗೆ ಕೊಟ್ಟಿಗೆಗೆ ತೆರಳಿದಾಗ ಘಟನೆ ಗೊತ್ತಾಗಿದೆ. ಹಾಲು ಕೊಡುತ್ತಿದ್ದ ಹಸು ಹಾಗೂ ಕರುವಿನ ಒಟ್ಟು ಮೌಲ್ಯ ₨ 50 ಸಾವಿರ ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ದಕ್ಷಿಣ ಕೊಡಗಿನ ಭಾಗದಲ್ಲಿ ಹುಲಿ ದಾಳಿ ಅತಿಯಾಗಿದ್ದು, ಕಳೆದ 15 ದಿನದ ಹಿಂದೆ ಹಸುಗಳ ಭದ್ರಗೋಳದಲ್ಲಿ ಜಾನುವಾರ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಬೋನಿಟ್ಟು ಸೆರೆಹಿಡಿದು ಬನ್ನೇರುಘಟ್ಟಕ್ಕೆ ಸಾಗಣೆ  ಮಾಡಲಾಗಿತ್ತು. ಇದಾಗಿ ಕೇವಲ ಒಂದು ವಾರ ಕಳೆಯುವ ಮುನ್ನವೇ ಮತ್ತೊಂದು ಹುಲಿ ಇದೇ ಭಾಗದಲ್ಲಿ ಕಾಣಿಸಿಕೊಂಡು ಮತ್ತೆ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಭಾಗದ ಜನತೆಯನ್ನು ಆತಂಕಕ್ಕೆ ದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry