ಸೋಮವಾರ, ಏಪ್ರಿಲ್ 12, 2021
29 °C

ಹುಲಿ ಪೀಳಿಗೆ ಮುಂದುವರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿ ಮರಿ ಗರ್ಜನೆ ಹೇಗಿರುತ್ತದೋ ನೋಡೋಣ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಕೇಳಿಸಿದ್ದು ವಂಧಿಮಾಗಧರ ಉಘೇ ಉಘೇ ಅಷ್ಟೇ. ಹುಲಿ ಮರಿ ನಾಪತ್ತೆಯಾಗಿತ್ತು. ಆಗ ಬರ್ತಾರೆ ಈಗ ಬರ್ತಾರೆ ಎನ್ನುವ ಆಶ್ವಾಸನೆಗಳು ಹುಸಿ ಮೋಡಗಳಂತಿದ್ದವು.ದಿವಂಗತ ಪ್ರಭಾಕರ್ `ಟೈಗರ್~ ಎಂದೇ ಅಭಿಮಾನಿ ವಲಯದಲ್ಲಿ ಪ್ರಸಿದ್ಧರು. ಅಪ್ಪ ಹುಲಿಯಾದ ಮೇಲೆ ಮಗ `ಮರಿ ಹುಲಿ~ ಅಲ್ಲವೇ. ಈ ತರ್ಕವನ್ನು ಜೊತೆಗಿಟ್ಟುಕೊಂಡು ನಿರ್ದೇಶಕ ಪಿ.ಎನ್. ಸತ್ಯಾ `ಮರಿ ಟೈಗರ್~ ಚಿತ್ರ ನಿರ್ದೇಶಿಸುತ್ತಿದ್ದಾರೆ. ಮುಹೂರ್ತ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಮಾತುಗಳಲ್ಲಿ ಹುಲಿ ಪರಂಪರೆ ಮುಂದುವರೆಸುತ್ತಿರುವ ಬಗ್ಗೆ ಹೆಮ್ಮೆ ಇದ್ದಂತಿತ್ತು. ರಮೇಶ್ ಕಶ್ಯಪ್ ಚಿತ್ರದ ನಿರ್ಮಾಪಕರು.`ಮೆಜೆಸ್ಟಿಕ್~ ಚಿತ್ರ ದರ್ಶನ್ ಅವರಿಗೆ ಲೈಫು ನೀಡಿತು. ದರ್ಶನ್ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಈಗ ಮತ್ತೊಬ್ಬ ಹಿರಿಯ ಖಳ-ನಾಯಕ ಪ್ರಭಾಕರ್ ಅವರ ಪುತ್ರನ ಚಿತ್ರ ನಿರ್ದೇಶಿಸುತ್ತಿರುವೆ ಎಂದರು ಸತ್ಯಾ. `ಮರಿ ಟೈಗರ್~ ಮೂಲಕ ವಿನೋದ್ ಪ್ರಭಾಕರ್‌ಗೆ ಬ್ರೇಕ್ ದೊರೆಯುವ ನಿರೀಕ್ಷೆ ಅವರ ಮಾತುಗಳಲ್ಲಿತ್ತು.ಕೌಟುಂಬಿಕ ಕಥೆಗಳನ್ನು ಬರೆಯುವುದರಲ್ಲಿ ಪಳಗಿರುವ ಅಜಯ್‌ಕುಮಾರ್ `ಮರಿ ಟೈಗರ್~ಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಮೂರು ವರ್ಷಗಳ ಅಂತರದ ನಂತರ ಅಜಯ್ ಅವರ ಕಥೆಯೊಂದು ಸಿನಿಮಾ ಆಗುತ್ತಿದೆ.ಅಪ್ಪನನ್ನು ನೆನಪಿಸುವ ಫೈಟ್ ಮಾಡುವುದರಲ್ಲಿ ವಿನೋದ್ ಹೆಸರುವಾಸಿ. ಆ ಇಮೇಜ್‌ಗೆ ತಕ್ಕಂತೆ ಆರು ಸಾಹಸ ದೃಶ್ಯಗಳು ಹಾಗೂ ಇನ್ನರ್ಧ ಡಜನ್ ಗೀತೆಗಳು ಚಿತ್ರದಲ್ಲಿ ಇರಲಿವೆಯಂತೆ. ಚಿತ್ರದ ಮೂರನೇ ಒಂದು ಭಾಗದಷ್ಟು ಶೂಟಿಂಗ್ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡ ಪರಿಸರದಲ್ಲಿ ನಡೆಯಲಿದೆಯಂತೆ.`ಚಿಂಗಾರಿ~ಯ ತೇಜು ಹುಲಿಮರಿಗೆ ನಾಯಕಿ. `ಹಾಡುಗಳಿಗಷ್ಟೇ ಸೀಮಿತವಾದ ಪಾತ್ರ ತಮ್ಮದಲ್ಲ. ಅಭಿನಯಕ್ಕೂ ಸಾಕಷ್ಟು ಅವಕಾಶವಿದೆ~ ಎಂದು ಸಮಾಧಾನ ಮಾಡಿಕೊಂಡ ತೇಜಮ್ಮ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.