ಹುಲಿ ಬಾಯಲ್ಲಿ ಸಿಕ್ಕ ಬದುಕು

7

ಹುಲಿ ಬಾಯಲ್ಲಿ ಸಿಕ್ಕ ಬದುಕು

Published:
Updated:
ಹುಲಿ ಬಾಯಲ್ಲಿ ಸಿಕ್ಕ ಬದುಕು

ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲೆತಲಾಂತರದಿಂದಲೂ ಅರಣ್ಯ, ಗುಡ್ಡಗಾಡು ಪ್ರದೇಶಗಳಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಆದಿವಾಸಿಗಳು ಆಧುನಿಕ ಪ್ರಪಂಚದ ಬದುಕಿನಲ್ಲಿ ನೆಮ್ಮದಿ ಕಳೆದುಕೊಂಡಿರುವುದು ಸತ್ಯ. ಇವರ ಪರವಾಗಿ ನಡೆಯುತ್ತಿದ್ದ ಹೋರಾಟಗಳು ಕಾವು ಕಳೆದುಕೊಂಡಿವೆ. ಅವುಗಳದ್ದು ಈಗ ಅರಣ್ಯರೋದನ.ಪ್ರಮುಖವಾಗಿ ಗೌಡ್ಲು, ಮಲೆಕುಡಿಯ, ಮೇದ, ಹಸಲರು, ದ.ಕ.ಮರಾಠಿ ನಾಯಕರು, ವಾಲ್ಮೀಕಿ, ನಾಯಕ, ಹಕ್ಕಿ-ಪಿಕ್ಕಿ ಜನಾಂಗ ಜಿಲ್ಲೆಯಲ್ಲಿ ಆದಿವಾಸಿಗಳೆನಿಸಿಕೊಂಡಿದ್ದಾರೆ. ಕೊಪ್ಪ, ಶೃಂಗೇರಿ ಹಾಗೂ ಮೂಡಿಗೆರೆ ಭಾಗದಲ್ಲಿ ಗೌಡ್ಲು ಸಮುದಾಯ ಹೆಚ್ಚಿದೆ. ತರೀಕೆರೆ ತಾಲ್ಲೂಕಿನಲ್ಲಿ ಮೇದ, ವಾಲ್ಮೀಕಿ, ನಾಯಕರು, ಕಡೂರು ತಾಲ್ಲೂಕಿನಲ್ಲಿ ನಾಯಕ ಹಕ್ಕಿ-ಪಿಕ್ಕಿ ಜನಾಂಗದವರು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮೇದ, ಹಸಲರು, ಹಕ್ಕಿ-ಪಿಕ್ಕಿ, ನಾಯಕ ಹಾಗೂ ವಾಲ್ಮೀಕಿ ಕುಟುಂಬಗಳು ಇವೆ. ಗೌಡ್ಲು, ಹಸಲರು, ಮೇದ ಸಮುದಾಯದವರು ಬಹುತೇಕ ಅರಣ್ಯ ಪ್ರದೇಶದಲ್ಲೇ ಇದ್ದಾರೆ. ಕಳೆದ ಬಾರಿಯ ಜನಗಣತಿಯಲ್ಲಿ 41,019 ಮಂದಿ ಆದಿವಾಸಿಗಳು ಜಿಲ್ಲೆಯಲ್ಲಿದ್ದಾರೆ. 2011ರ ಜನಗಣತಿಯಲ್ಲಿ ಇವರ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿನ ಹೆಚ್ಚಳ ಆಗಿದೆ.ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲ್ಲೂಕಿನ ಗಿರಿಜನ ಪ್ರದೇಶಗಳಲ್ಲಿ ನಕ್ಸಲ್‌ಪರ ಅನುಕಂಪ ಹೊಂದಿದ್ದಾರೆ ಎನ್ನುವ ಶಂಕೆಯಿಂದ ಇವರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಆರೋಪ ಇದೆ. ಇದರಿಂದಾಗಿ ಪೊಲೀಸರಿಗೆ ಹೆದರಿ ಕೆಲ ಯುವಕರು ಮನೆ ತೊರೆದವರು ಇಂದಿಗೂ ವಾಪಸ್ ಮರಳಿಲ್ಲ. ಇನ್ನೂ ಅರಣ್ಯವನ್ನೇ ಅವಲಂಬಿಸಿ ಬದುಕು ಕಂಡುಕೊಂಡಿದ್ದವರಿಗೆ ಅರಣ್ಯ ಕಾಯ್ದೆಯೂ ಮುಳುವಾಗಿ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿದೆ.ಶೃಂಗೇರಿ ತಾಲ್ಲೂಕಿನ ತಾರೊಳ್ಳಿಕೊಡಿಗೆ ಮತ್ತು ಬೆಳಗೊಳಕೊಡಿಗೆಯಲ್ಲಿ ಕಳೆದ ವರ್ಷ ಐವರು ಹಾಗೂ ಕಳಸ ವ್ಯಾಪ್ತಿಯಲ್ಲಿ ಮೂವರು ಅಸುನೀಗಿದರು. ಪೌಷ್ಟಿಕ ಆಹಾರದ ಕೊರತೆಯೋ ಅಥವಾ ಇಲಿ ಜ್ವರವೋ..ನಿಖರ ಕಾರಣ ಇಂದಿಗೂ ತಿಳಿದಿಲ್ಲ. ಆರೋಗ್ಯ ಕವಚ 108 ಸೇವೆ ಇದ್ದರೂ ರಸ್ತೆಗಳೇ ಇಲ್ಲದೆ ಕಾಲುದಾರಿಯಲ್ಲಿ ಹೋಗಿ ಸೇರಬೇಕಾದ ಕೊಡಿಗೆಗಳಿಗೆ (ಹಾಡಿ) ಆರೋಗ್ಯ ಸೇವೆ ದೂರವೇ ಉಳಿದಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಗಿರಿಜನ ಅಭಿವೃದ್ಧಿ ಯೋಜನೆಯಡಿ ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಈ ಶಾಲೆಗಳನ್ನು ಗಿರಿಜನರು ಇರುವಲ್ಲೇ ಆರಂಭಿಸಬೇಕೆನ್ನುವ ಮೂಲ ಉದ್ದೇಶ ಮೆಣಸಿನಹಾಡ್ಯ ಹೊರತುಪಡಿಸಿ ಜಿಲ್ಲೆಯಲ್ಲಿ ಇತರ ಕಡೆ ಎಲ್ಲಿಯೂ ಈಡೇರಿಲ್ಲ. ವರ್ಷಕ್ಕೊಂದು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಶೃಂಗೇರಿ ತಾಲ್ಲೂಕಿನ ಹುಲುಗಾರು ಬೈಲಿನಲ್ಲಿದ್ದ ಏಕೈಕ ಸರ್ಕಾರಿ ಶಾಲೆಯೂ ಬಾಗಿಲು ಮುಚ್ಚಿದೆ.`ಗಿರಿಜನರ ವಾಸ್ತವ ಪರಿಸ್ಥಿತಿ ಹುಲಿಬಾಯಿಗೆ ಸಿಕ್ಕಂತಿದೆ. ಯಾರೂ ಏನನ್ನೂ ಕೇಳುವಂತಿಲ್ಲ. ಸಂಘಟನೆಯೂ ಇಲ್ಲದಂತಾಗಿದೆ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದವರಿಗೂ ಕಿರುಕುಳ ನೀಡಿ ಜೈಲಿಗೆ ದಬ್ಬಿದರು. ಮೆಣಸಿನಹಾಡ್ಯದ ಎನ್‌ಕೌಂಟರ್‌ನಲ್ಲಿ ತಂದೆ-ತಾಯಿ ಕಳೆದುಕೊಂಡ ರಾಮೇಗೌಡ್ಲು ಮಕ್ಕಳು ಅನಾಥರಾಗಿದ್ದಾರೆ. ಅವರ ಬದುಕು ದಿಕ್ಕಾಪಾಲಾಗಿದೆ. ಇದೊಂದು ಸಣ್ಣ ನಿದರ್ಶನ.ಇಂತಹ ಹಲವು ನಿದರ್ಶನಗಳಿವೆ. ಪರಂಪರಾಗತವಾಗಿ ಅರಣ್ಯದಲ್ಲಿ ಬದುಕುತ್ತಿದ್ದು, ಕೃಷಿ ಮಾಡುತ್ತಿದ್ದವರಿಗೂ ಫಾರಂ ನಂ 53ರಡಿ ಸಾಗುವಳಿ ಪತ್ರ ಸಿಕ್ಕಿಲ್ಲ~ ಎಂದು ವಿಷಾದಿಸುತ್ತಾರೆ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷ ಕಲ್ಕುಳಿ ವಿಠ್ಠಲ ಹೆಗ್ಡೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಯೋಜನೆಗೆ ಸೇರಿಸಿ ಅಲ್ಲಿನ ನಿವಾಸಿಗಳು ತಾವಾಗೇ ಬಿಟ್ಟು ಹೋಗುವಂತೆ ಮಾಡುತ್ತಿದ್ದಾರೆ. ಇಂತಹ ಚಿತ್ರ ಹಿಂಸೆಯಲ್ಲಿ ಬದುಕುವುದಕ್ಕಿಂತ `ಕೊಟ್ಟಷ್ಟನ್ನು ಪಡೆದುಕೊಂಡು ದೂರ ಹೋದರೆ ಸಾಕು~ ಎನ್ನುವ ಸ್ಥಿತಿಗೆ ಅವರನ್ನು ನೂಕುತ್ತಿದ್ದಾರೆ. ಕಂದಾಯ ಭೂಮಿಗೂ ಅರಣ್ಯ ಹಕ್ಕು ಕಾಯ್ದೆಯಡಿ ಕೆಲವರಿಗೆ ಸಾಗುವಳಿ ಪತ್ರ ನೀಡಿ, ಭೂಮಿಯನ್ನು ಪರಭಾರೆ ಮಾಡದಂತಹ ಕಾನೂನಿನ ಸುಳಿಗೆ ಸಿಲುಕಿಸುತ್ತಿದ್ದಾರೆ ಎನ್ನುವುದು ಅವರ ಅಸಮಾಧಾನದ ನುಡಿ. ಚಿಕ್ಕಮಗಳೂರು ತಾಲ್ಲೂಕಿನ ಮಣಬೂರು ಹಾಡಿಯಲ್ಲಿ ಆಗಸ್ಟ್ 9ರಂದು ನಡೆದ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒಕ್ಕೊರಲ ಮನವಿ ಮಾಡಿ, ಅವುಗಳ ಈಡೇರಿಕೆಗೆ 31ರ ಗಡುವು ನೀಡಿದೆ. ಅಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ಪ್ರಜಾಸತ್ತಾತ್ಮಕವಾದ ನಿರ್ಣಾಯಕ ಹೋರಾಟಕ್ಕೆ ಧುಮುಕುವುದಾಗಿ ಎಚ್ಚರಿಕೆ ನೀಡಿದೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry