ಹುಲಿ ಸಫಾರಿ : ಪ್ರತಿಷ್ಠೆ ಬೇಡ

7

ಹುಲಿ ಸಫಾರಿ : ಪ್ರತಿಷ್ಠೆ ಬೇಡ

Published:
Updated:

ರಾಜ್ಯದ ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಿಲ್ಲಿಸುವಂತೆ ಅರಣ್ಯ ಸಚಿವರು ಏಕಾಏಕಿ ಸೂಚನೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ವಿಚಿತ್ರ ನಿರ್ಧಾರದಿಂದ ಅರಣ್ಯ ಇಲಾಖೆ ಹಾಗೂ ಸಚಿವರ ನಡುವೆ ಸಂವಹನದ ಕೊರತೆ ಇರುವುದು ಬಯಲಾಗಿದೆಯಲ್ಲದೆ ಈ ಶೀತಲ ಸಮರಕ್ಕೆ ಪ್ರವಾಸೋದ್ಯಮ ಬಲಿಯಾಗಿದೆ. ಹುಲಿ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇಲೆ ಜುಲೈ 24ರಿಂದಲೇ ಸ್ಥಗಿತಗೊಂಡಿದ್ದ ಸಫಾರಿ ಅಕ್ಟೋಬರ್ 17ರಿಂದ ಮತ್ತೆ ಆರಂಭವಾಗಿತ್ತು. ಇದಾದ ಎರಡೇ ದಿನಗಳಲ್ಲಿ ಮತ್ತೆ ಸಫಾರಿ ನಿಲ್ಲುವಂತಾಗಿರುವುದರ ಔಚಿತ್ಯ ಸಮರ್ಥನೀಯವಾಗಿಲ್ಲ.ಸಫಾರಿ ಪುನರಾರಂಭವಾಗಿರುವ ಬಗ್ಗೆ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸಚಿವರ ಬಳಿ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಇಲಾಖೆಯ ಅಧಿಕಾರಿಗಳು ತಮಗೆ ಮಾಹಿತಿ ನೀಡದೆ ಸಫಾರಿ ಆರಂಭಕ್ಕೆ ಅನುಮತಿ ನೀಡಿರುವ ಬಗ್ಗೆ ಬೇಸರಗೊಂಡು  ಅರಣ್ಯ ಇಲಾಖೆಯ ಮೇಲೆ ಈ ರೀತಿಯ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ.ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವರ ನಡುವಿನ ತಿಕ್ಕಾಟದಿಂದಾಗಿ ಪರಿಸರ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡುವುದು ಸರಿಯಲ್ಲ.ಮೈಸೂರು ದಸರಾ ಸಂದರ್ಭದಲ್ಲಿ ದೇಶ ವಿದೇಶದಿಂದ ಆಗಮಿಸುವ ಪ್ರವಾಸಿಗರು ಬಂಡೀಪುರ ಹಾಗೂ ನಾಗರಹೊಳೆಗೆ ತೆರಳಿ ಮುಕ್ತ ಪರಿಸರದಲ್ಲಿ ವನ್ಯಜೀವಿಗಳನ್ನು ನೋಡುವ ಅವಕಾಶವಿತ್ತು.

 

ಸಚಿವರ ಹಟಮಾರಿ ಧೋರಣೆಯಿಂದಾಗಿ ಪ್ರವಾಸಿಗರು ಅಂತಹ ಅವಕಾಶದಿಂದ ವಂಚಿತರಾಗಿದ್ದಾರೆ. ಸುಪ್ರೀಂಕೋರ್ಟ್ ನಿರ್ಧಾರದ ಮೇರೆಗೆ ಆಡಳಿತ ವ್ಯವಸ್ಥೆ ತನ್ನ ಕಾರ್ಯವನ್ನು ನಿರ್ವಹಿಸಿರುವುದು ಸ್ಪಷ್ಟ. ಆದರೆ ಸಚಿವರು ಈ ಕ್ರಮವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿ ಕೊಂಡಿರುವುದು ಸರಿಯಲ್ಲ.  ನ್ಯಾಯಾಲಯದ ಸೂಚನೆ ಪಾಲನೆಯಾಗುತ್ತಿರುವ ವಿಚಾರದಲ್ಲಿ ನನಗೆ ತೃಪ್ತಿಯಾದರೆ ಮಾತ್ರ ಮತ್ತೆ ಸಫಾರಿ ಆರಂಭಿಸಲು ಸೂಚಿಸುತ್ತೇನೆ ಎಂದು ಸಚಿವರೇ ಹೇಳಿದ್ದಾರೆ.  ಸುಪ್ರೀಂ ಕೋರ್ಟ್ ಆದೇಶ ಬಂದ ಕೂಡಲೇ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಬಹುದಿತ್ತು.ವಿಷಯವೇ ಗಮನಕ್ಕೆ ಬಂದಿಲ್ಲ ಎನ್ನುವುದು ಅದೇ ಖಾತೆ ಹೊಂದಿರುವ ಸಚಿವರಿಗೆ ಶೋಭೆ ತರುವಂತಹ ಮಾತಲ್ಲ. ಪರಿಸರ ಪ್ರವಾಸೋದ್ಯಮಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೆಲ ನಿಯಮಗಳನ್ನು ಸೂಚಿಸಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪರಿಸರ ಪ್ರವಾಸೋದ್ಯಮ ಲಂಗುಲಗಾಮಿಲ್ಲದೆ ನಡೆಯುತ್ತಿಲ್ಲ.

 

ರಾಜ್ಯದ ಐದು ಹುಲಿ ಅಭಯಾರಣ್ಯಗಳ ಪ್ರವಾಸೋದ್ಯಮ ವಲಯದಲ್ಲಿ ನಿಯಮಗಳನ್ನು ಸರಿಯಾಗಿಯೇ ಪಾಲಿಸಲಾಗುತ್ತಿದೆ. ಸಫಾರಿ ನಿಲ್ಲಿಸಿ ನ್ಯಾಯಾಲಯದ ಸೂಚನೆಯನ್ನು ಪರಿಶೀಲಿಸುವ ಬದಲು, ಸಫಾರಿ ನಡೆಯುತ್ತಿದ್ದಂತೆ ಬದಲಾವಣೆಯಿದ್ದರೆಸೂಚಿಸಬಹುದಿತ್ತು. ಇಂತಹ ನಿರ್ಧಾರಗಳಿಂದ ಪರಿಸರ ಪ್ರವಾಸೋದ್ಯಮದ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry