ಹುಲಿ ಸೋಲಿಸಿದ ಹುಳಿಯಾರ್ ನಾಯಿ

7

ಹುಲಿ ಸೋಲಿಸಿದ ಹುಳಿಯಾರ್ ನಾಯಿ

Published:
Updated:
ಹುಲಿ ಸೋಲಿಸಿದ ಹುಳಿಯಾರ್ ನಾಯಿ

ನಾಯಿಯೇ ಹುಲಿಯನ್ನು ಸೋಲಿಸಿದ ಊರಿನ ಕತೆ ಇದು. ಹುಳಿಯಾರು ಎಂದರೆ ಹುಲಿಯನ್ನೇ ನಾಯಿಯೊಂದು ಸೋಲಿಸಿದ ಊರು ಎಂಬ ಮಾತು ಜನಜನಿತವಾಗಿದೆ.ಬ್ರಿಟಿಷ್ ಆಡಳಿತದಲ್ಲಿ ಹುಳಿಯಾರು ತಾಲ್ಲೂಕು ಕೇಂದ್ರವಾಗಿತ್ತು. ಈಗ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸೇರಿದ್ದು, ಹೋಬಳಿಯಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಗಮನ ಸೆಳೆಯುತ್ತಿದೆ.ಹುಳಿಯಾರು ಅಂದಿನ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪಟ್ಟಣವಾಗಿತ್ತು. ವ್ಯಾಪಾರ, ಸಾಂಸ್ಕೃತಿಕ ಇತಿಹಾಸಗಳ ಕೇಂದ್ರವಾಯೂ ಗಮನ ಸೆಳೆದಿತ್ತು. ಇತಿಹಾಸದ ಪುಟಗಳಲ್ಲಿ ತಾಲ್ಲೂಕು ಕೇಂದ್ರವಾಗಿ ಮಿಂಚಿ ಈಗ ತುಮಕೂರು ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆಂಗಿನ ಸೀಮೆಯೆಂಬ ಖ್ಯಾತಿಯೂ ಇದಕ್ಕಿದೆ.ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ 1880ರಿಂದ 1902 ಮಾರ್ಚ್ 31ರ ವರೆಗೆ ತಾಲ್ಲೂಕು ಕೇಂದ್ರವಾಗಿತ್ತು. 1882ರಲ್ಲಿ ಬ್ರಿಟಿಷ್ ಮಾದರಿಯಲ್ಲಿ ಕಟ್ಟಿರುವ ಕಟ್ಟಡ (ಪಟ್ಟಣದ ಹೃದಯ ಭಾಗದಲ್ಲಿರುವ ಈಗಿನ ಮಾಧ್ಯಮಿಕ ಹಿರಿಯ ಪ್ರಾಥಮಿಕ ಪಾಠಶಾಲೆ) ಅಂದು ತಾಲ್ಲೂಕು ಕಚೇರಿಯಾಗಿತ್ತು. ಸುಮಾರು 140 ವರ್ಷಗಳ ಇತಿಹಾಸವಿರುವ ಕಟ್ಟಡ ಇಂದಿಗೂ ಉಳಿದಿದೆ. 1920ರಲ್ಲಿ ಈ ಕಟ್ಟಡದಲ್ಲಿ ಸರ್ಕಾರಿ ಶಾಲೆ ಆರಂಭವಾಯಿತು.ಚೋಳರ ಕಾಲದ ಮಲ್ಲೇಶ್ವರ ಹಾಗೂ ರಂಗನಾಥಸ್ವಾಮಿ ದೇವಾಲಯಗಳು ಗತ ಕಾಲದ ವೈಭವವನ್ನು ಜ್ಞಾಪಿಸುತ್ತವೆ. ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಚೋಳರ ಕಾಲದ ಹಳೆಗನ್ನಡ ಲಿಪಿಯ ಶಾಸನಗಳು ದೇಗುಲದ ಇತಿಹಾಸ ಹೇಳುತ್ತವೆ. ಕೆಂಚಮ್ಮನ ಕಥೆಯ ಜನಪದ ಕಾವ್ಯ ಇಲ್ಲಿಯೆ ಉದಯಿಸಿದ್ದು ಇಂದಿಗೂ ಅವುಗಳ ಕುರುಹುಗಳನ್ನು ಕಾಣಬಹುದಾಗಿದೆ.ಇದೇ ಊರಿನ ಚೆನ್ನಮ್ಮ ಎಂಬಾಕೆಯನ್ನು ಜಾನಕಲ್ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು. ಗರ್ಭವತಿಯಾಗಿ ಊರಿಗೆ ಬರುತ್ತಿರುವಾಗ ಹುಳಿಯಾರು ಕೆರೆಗೆ ಬರುವ ಹಳ್ಳ ರಭಸವಾಗಿ ಹರಿಯುತ್ತಿರುತ್ತದೆ. ದಾರಿ ಬಿಟ್ಟರೆ ನನ್ನ ಮಗುವಿನ ಸಮೇತ ಬಂದು ಪೂಜೆ ನೆರವೇರಿಸುತ್ತೇನೆ ಎಂದು ಚನ್ನಮ್ಮ ಗಂಗಾಮಾತೆಯಲ್ಲಿ ಪ್ರಾರ್ಥಿಸುತ್ತಾಳೆ. ಆಗ ರಭಸವಾಗಿ ಹರಿಯುತ್ತಿದ್ದ ಹಳ್ಳ ಇಬ್ಭಾಗವಾಗಿ ದಾರಿಯಾಗುತ್ತದೆ. ಆದರೆ ವಚನ ಪಾಲಿಸುವುದಿಲ್ಲ. ಮತ್ತೆ ಮಗಳು ಕೆಂಚಮ್ಮನನ್ನು ತವರುಮನೆಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾಳೆ. ಒಮ್ಮೆ ಗಂಗಾಮಾತೆ ಕೆಂಚಮ್ಮನಿಗೆ ತನ್ನ ತಾಯಿ ನೀಡಿದ್ದ ಮಾತನ್ನು ಜ್ಞಾಪಿಸುತ್ತಾಳೆ. ಕೊನೆಗೆ ತಾಯಿ ನೀಡಿದ್ದ ಮಾತಿಗೆ ಮಗಳು ಕೆಂಚಮ್ಮನೆ ಕೆರೆಗೆ ಹಾರವಾಗುವ ಕಥೆ ಜನಪದ ಕಾವ್ಯವಾಗಿದೆ.ಗಂಡ, ಗಂಡನ ಮನೆ, ತವರು ಮನೆಯವರನ್ನು ಒಪ್ಪಿಸಿ ಕೆಂಚಮ್ಮ ಕೆರೆಗೆ ಹಾರವಾದಳು ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕವಾಗಿ ಕೆರೆಯ ಏರಿ ಒಂದು ಮೂಲೆಯಲ್ಲಿ ಕೆಂಚಮ್ಮನ ತೋಪು ಎಂದು ಕರೆಯಲಾಗುವ ಹುಣುಸೆ ಮರಗಳ ಬೀಡು ಈಗಲೂ ಇದೆ. ಕೆಂಚಮ್ಮನ ದೇವಸ್ಥಾನವೂ ಇದೆ. ಊರೊಳಗೆ ಮತ್ತೊಂದು ಕೆಂಚಮ್ಮನ ದೇವಸ್ಥಾನವೂ ಇದೆ.70ರ ದಶಕದಲ್ಲಿ ಒಮ್ಮೆ ಪಟ್ಟಣ ಪಂಚಾಯಿತಿಯಾಗಿತ್ತು. ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲಿದ್ದು ತೆಂಗಿನಕಾಯಿ, ಕೊಬ್ಬರಿ, ಹೆಸರುಕಾಳು ಸೇರಿದಂತೆ ಇತರ ದವಸ ಧಾನ್ಯಗಳ ವಹಿವಾಟು ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry