ಸೋಮವಾರ, ಅಕ್ಟೋಬರ್ 21, 2019
26 °C

ಹುಲ್ಲುಸಂಗ್ರಹ ತಾಣವಾದ ಶೌಚಾಲಯ

Published:
Updated:

ಹಿರಿಯೂರು: ಮಕ್ಕಳು- ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗಿ ಮುಜುಗರ ಅನುಭವಿಸಬಾರದು ಎಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿ ಹಣ ತೊಡಗಿಸಿ, ನಿರ್ಮಲ ಭಾರತ್ ಅಭಿಯಾನ ಯೋಜನೆಯಡಿ ಹಿರಿಯೂರಿನ ಆಜಾದ್‌ನಗರ ಬಡಾವಣೆಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಕಸಾಯಿಖಾನೆ ಮಾಲೀಕರ ಹುಲ್ಲು ಸಂಗ್ರಹಿಸುವ ಜಾಗವನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಗುರುವಾರ ಕರ್ನಾಟಕ ಸಮರಸೇನೆ ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷ ಎಂ.ಡಿ. ಆಜ್ಹಂ ಅವರು, ಸ್ಥಳಕ್ಕೆ ಸುದ್ದಿಗಾರರನ್ನು ಕರೆದೊಯ್ದು ಸಾರ್ವಜನಿಕ ಶೌಚಾಲಯ ದುರುಪಯೋಗ ಆಗುತ್ತಿರುವುದನ್ನು ಖುದ್ದು ತೋರಿಸಿದರು.ಬಡಾವಣೆಯಲ್ಲಿ ನಡೆಯುತ್ತಿರುವ ಕಸಾಯಿಖಾನೆಯಲ್ಲಿ ಕತ್ತರಿಸುವ ರಾಸುಗಳನ್ನು ವೈದ್ಯರಿಂದ ತಪಾಸಣೆ ಮಾಡಿಸುತ್ತಿಲ್ಲ. ಹಲವು ಸಾರಿ 2-3 ತಿಂಗಳು ಪ್ರಾಯದ ಹಸು, ಎಮ್ಮೆ, ಕೋಣದ ಮರಿಗಳನ್ನು ಕತ್ತರಿಸಿ ಮಾಂಸ ಮಾರಲಾಗುತ್ತಿದೆ.ಪ್ರಾಣಿಗಳನ್ನು ಕತ್ತರಿಸುವವರೆಗೆ ಸಾರ್ವಜನಿಕರಿಗೆಂದು ನಿರ್ಮಿಸಿರುವ ಶೌಚಾಲಯದಲ್ಲಿ ಹುಲ್ಲು ಹಾಕಿ ಬಿಡಲಾಗುತ್ತಿದೆ. ಕತ್ತರಿಸಿದ ದನಗಳ ಮೂಳೆಗಳನ್ನು ಶೌಚಾಲಯದ ಮೇಲ್ಛಾವಣಿಯ ಮೇಲೆ ಹಾಕಲಾಗಿದೆ.ಅಲ್ಲದೆ ಪ್ರಾಣಿಗಳ ಚರ್ಮ ಸುಲಿದು ಬಹಿರಂಗವಾಗಿ ನೇತು ಹಾಕುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಈ  ಬಗ್ಗೆ ಜಿಲ್ಲಾಧಿಕಾರಿ ಖುದ್ದಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಸಾರ್ವಜನಿಕ ಶೌಚಾಲಯವನ್ನು ಕಸಾಯಿಖಾನೆ ಮಾಲೀಕರ ಹಿಡಿತದಿಂದ ಬಿಡಿಸಿ, ಸಾರ್ವಜನಿಕರಿಗೆ ಮುಕ್ತ ಗೊಳಿಸಬೇಕು. ಮಾಂಸಾಹಾರಿಗಳಿಗೆ ವೈದ್ಯರು ದೃಢೀಕರಿಸಿದ ಮಾಂಸ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಎಳೆಯ ಪ್ರಾಣಿಗಳನ್ನು ವಧಿಸದಂತೆ, ರಾತ್ರಿ ವೇಳೆ ಮಾಂಸ ಕತ್ತರಿಸುವುದಕ್ಕೆ ನಿಷೇಧ ಹೇರಬೇಕು ಎಂದು ಆಜ್ಹಂ ಆಗ್ರಹಿಸಿದ್ದಾರೆ.

Post Comments (+)