ಸೋಮವಾರ, ಏಪ್ರಿಲ್ 12, 2021
25 °C

ಹುಲ್ಲು ತಿಂದ ಹುಲಿ (ಚಿತ್ರ: ಏಕ್ ಥಾ ಟೈಗರ್ (ಹಿಂದಿ)

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನಿರ್ಮಾಪಕ: ಆದಿತ್ಯ ಚೋಪ್ರಾ

ನಿರ್ದೇಶಕ: ಕಬೀರ್ ಖಾನ್

ತಾರಾಗಣ: ಸಲ್ಮಾನ್ ಖಾನ್, ಕತ್ರಿನಾ ಕೈಫ್, ರಣವೀರ್ ಶೋರಿ, ಗಿರೀಶ್ ಕಾರ್ನಾಡ್, ರೋಶನ್ ಸೇಥ್, ಗವಿ ಚಾಹಲ್ ಮತ್ತಿತರರು.

ಗೂಢಚಾರಿಕೆ ಮತ್ತು ಪ್ರೀತಿ ಎಂಬ ವೈರುಧ್ಯ ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಕಬೀರ್ ಖಾನ್ ಮನರಂಜನೆಯ ಸವಿಯನ್ನು ಬಡಿಸಿದ್ದಾರೆ. ಕಬೀರ್ ಖಾನ್ `ಕಾಬೂಲ್ ಎಕ್ಸ್‌ಪ್ರೆಸ್~ ಮತ್ತು `ನ್ಯೂಯಾರ್ಕ್~ ಚಿತ್ರಗಳ ಬಳಿಕ ಯಶ್ ಚೋಪ್ರಾ ಬ್ಯಾನರ್‌ನಲ್ಲಿ ನಿರ್ದೇಶಿಸಿರುವ ಮೂರನೇ ಚಿತ್ರ `ಏಕ್ ಥಾ ಟೈಗರ್~.

 

ಅವರ ಹಿಂದಿನ ಎರಡು ಚಿತ್ರಗಳಲ್ಲಿಯೂ ಗೂಢಚಾರಿಕೆ ಹಾಗೂ ದೇಶಗಳ ನಡುವಿನ ಸಂಬಂಧದ ಸೂಕ್ಷ್ಮ ವಿಚಾರಗಳ ಎಳೆಗಳಿದ್ದವು. `ಏಕ್ ಥಾ ಟೈಗರ್~ ಹಲವು ಕಾರಣಕ್ಕೆ ಆ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ.ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಸಲ್ಮಾನ್ ಖಾನ್ ವೃತ್ತಿ ಬದುಕಿನಲ್ಲಿಯೂ ಇದು ವಿಭಿನ್ನ ಸಿನಿಮಾ. ದೇಹಪ್ರದರ್ಶನದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿರುವ ಅವರಿಗೆ ಈ ಚಿತ್ರದಲ್ಲಿ ನಟನೆಯನ್ನೂ ಪ್ರದರ್ಶಿಸಬೇಕಾದ ಅನಿವಾರ್ಯ ಸನ್ನಿವೇಶಗಳಿವೆ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.ಭಾರತೀಯ `ರಾ~ ಗೂಢಚಾರ ಪ್ರೇಮಪಾಶಕ್ಕೆ ಬೀಳುವ ಕಥೆಯಿದು. 12 ವರ್ಷ ಒಂದು ರಜೆಯನ್ನೂ ಪಡೆಯದೆ, ದೇಶ ವಿದೇಶದಲ್ಲಿ ಬೇಹುಗಾರಿಕೆ ಮಾಡುವ `ಟೈಗರ್~ಗೆ ಸಾಹಸದ ಮಾರ್ಗವೆಂದರೆ ಅಚ್ಚುಮೆಚ್ಚು. ಪ್ರೀತಿಯ ವಿಷಯದಲ್ಲಿ ತೆರೆ ಮೇಲಿನ ಚಿತ್ರಣ ಸಲ್ಮಾನ್‌ರ ಬದುಕಿಗೆ ತದ್ವಿರುದ್ಧ! ಗಟ್ಟಿಮನಸ್ಸಿನ ಟೈಗರ್‌ಗೆ ಪ್ರೀತಿ ಮೂಡುವುದು ಐಎಸ್‌ಐ ಗೂಢಚಾರಿಣಿ ಜೊತೆ.ಅಲ್ಲಿಂದ ಮುಂದೆ ಇಬ್ಬರದೂ ಮ್ಯಾರಥಾನ್ ಓಟ! ಅವರನ್ನು ಹಿಡಿಯಲು `ರಾ~ ಮತ್ತು ಐಎಸ್‌ಐ~ನ ಮಂದಿ ಒಂದಾಗಿ ಪ್ರಯತ್ನಿಸುವಾಗ ಚಿತ್ರದ ಓಟ ದಿಕ್ಕುತಪ್ಪುತ್ತದೆ. ಹಲವೆಡೆ ಅಸಂಬದ್ಧ ಎನಿಸುವ ದೃಶ್ಯಗಳ ನಡುವೆ ಗೂಢಚಾರಿಕೆ ಹಾಗೂ ಪ್ರೀತಿಯನ್ನು ಬೆಸೆಯುವ ಬಗೆ ಗಮನಸೆಳೆಯುತ್ತದೆ.ಸಲ್ಮಾನ್ ಆ್ಯಕ್ಷನ್‌ನಲ್ಲಿ ಮೋಡಿ ಮಾಡುತ್ತಾರೆ. ಕತ್ರಿನಾ ಕೂಡ ಸಾಹಸದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಇಬ್ಬರ ಪ್ರೇಮಕ್ಕೆ ತುಸು ಭಾವನಾತ್ಮಕ ಸ್ಪರ್ಶ ನೀಡಿದ್ದರೆ `ಟೈಗರ್ ಎಂಬುವವನಿದ್ದ~ ಎಂಬ ಕಥೆಗೆ ಅರ್ಥ ದಕ್ಕುತ್ತಿತ್ತು.

 

ಒಂದು ಹಂತದಲ್ಲಿ ತೀವ್ರ ಕುತೂಹಲದ ಕಥನದಂತೆ ತೋರುವ ಚಿತ್ರ ಕೊನೆಯಲ್ಲಿ ಗಾಳಿಹೋದ ಬಲೂನು. ಸಲ್ಮಾನ್‌ರನ್ನು ವಿಜೃಂಭಿಸುವ ಭರದಲ್ಲಿ ಕಬೀರ್ ಖಾನ್ ಹಾಸ್ಯಾಸ್ಪದ ಸಂಗತಿಗಳನ್ನು ಸೃಷ್ಟಿಸಿದ್ದಾರೆ.ಸಲ್ಮಾನ್-ಕತ್ರಿನಾ ಜೋಡಿ ನಡುವಿನ ಕೆಮಿಸ್ಟ್ರಿ ನವಿರಾಗಿ ವ್ಯಕ್ತವಾಗಿದೆ. ಗಿರೀಶ್ ಕಾರ್ನಾಡ್ ಅಭಿನಯದಲ್ಲಿ ಸಹಜ ಗಾಂಭೀರ್ಯವಿದೆ. ಅವರ ಎದುರು ಸಲ್ಮಾನ್ ತೀರಾ ಮಂಕಾಗಿ ಕಾಣುತ್ತಾರೆ. ರಣವೀರ್ ಶೋರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

 

ಅಸೀಮ್ ಮಿಶ್ರಾ ಛಾಯಾಗ್ರಹಣ ಸನ್ನಿವೇಶಗಳಲ್ಲಿ ಅಲ್ಲಲ್ಲಿ ಎದುರಾಗುವ ವೈಫಲ್ಯಗಳನ್ನು ಮರೆಮಾಚಿಸುವಷ್ಟು ಸುಂದರವಾಗಿದೆ. ಸೊಹೇಲ್ ಸೇನ್ ಜೊತೆಗೆ ಸಾಜಿದ್-ವಾಜಿದ್ ಅತಿಥಿ ಸಂಗೀತ ನಿರ್ದೇಶನ ನೀಡಿರುವುದು ವಿಶೇಷ.

 

ಚಿತ್ರವಿಡೀ ಟೈಗರ್ ಘರ್ಜನೆಯಿದ್ದರೂ ಹಾಡುಗಳಲ್ಲಿ ಮಾಧುರ್ಯವಿದೆ.ಲೋಪದೋಷಗಳಿದ್ದರೂ ಸಲ್ಮಾನ್‌ರ ಹಿಂದಿನ ಚಿತ್ರಗಳಂತೆ `ಏಕ್ ಥಾ ಟೈಗರ್~ ಮನರಂಜನೆ ನೀಡುವಲ್ಲಿ ಮೋಸಮಾಡುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.