ಹುಷಾರ್, ವಿದ್ಯುತ್ ಕಾರ್..!

7

ಹುಷಾರ್, ವಿದ್ಯುತ್ ಕಾರ್..!

Published:
Updated:

ವಿದ್ಯುತ್ ಚಾಲಿತ ಕಾರುಗಳು ಪರಿಸರ ಸ್ನೇಹಿ ಎಂಬ ಸಾರ್ವತ್ರಿಕ ಅಭಿಪ್ರಾಯ ಇದೆ. ದಿನೇ ದಿನೇ ಏರುತ್ತಿರುವ ತಾಪಮಾನ, ಹದಗೆಡುತ್ತಿರುವ ವಾತಾವರಣವು ಮಾನವನ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳ ಹಿನ್ನೆಲೆಯಲ್ಲಿ ಹೈಬ್ರಿಡ್ ಕಾರುಗಳು ಮತ್ತು  ವಿದ್ಯುತ್ ಚಾಲಿತ ವಾಹನಗಳು ಪೆಟ್ರೋಲ್, ಡೀಸೆಲ್, ಅನಿಲ ಚಾಲಿತ ವಾಹನಗಳಿಗೆ ಪರ್ಯಾಯವಾಗಬಲ್ಲವು ಎಂಬ ಮಾತೂ ಇದೆ.ಆದರೆ, ಚೀನಾದಲ್ಲಿ ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದು ಬಲವಾಗಿ ಬೇರೂರಿರುವ ಈ ನಂಬಿಕೆಯನ್ನು ಪ್ರಶ್ನಿಸುವಂತೆ  ಮಾಡಿದೆ.  ವಿದ್ಯುತ್ ಚಾಲಿತ ವಾಹನಗಳೂ ಪೆಟ್ರೋಲ್-ಡೀಸೆಲ್ ಚಾಲಿತ ವಾಹನಗಳಂತೆ ಪರಿಸರ ಮಾಲಿನ್ಯದ ಜೊತೆಗೆ ಮನುಷ್ಯನ ಆರೋಗ್ಯಕ್ಕೂ ಹಾನಿಯುಂಟು ಮಾಡಬಹುದು ಎಂದು ಅಧ್ಯಯನದ ವರದಿ ತಿಳಿಸಿದೆ.ಅಮೆರಿಕದ ಟೆನೆಸ್ಸೆ ವಿಶ್ವವಿದ್ಯಾಲಯದ ಸಿವಿಲ್ ಮತ್ತು ಪರಿಸರ ಎಂಜಿನಿಯರಿಂಗ್‌ನ ಸಹಾಯಕ ಪ್ರೊಫೆಸರ್ ಕ್ರಿಸ್ ಚೆರ‌್ರಿ ಮತ್ತು ಪದವಿ ವಿದ್ಯಾರ್ಥಿ ಶುಗ್ವಾಂಗ್ ಜಿ ಎಂಬುವವರು ಚೀನಾದ 34 ನಗರಗಳಲ್ಲಿ ಈ ಅಧ್ಯಯನ ನಡೆಸಿದ್ದಾರೆ.  ಕುತೂಹಲಕಾರಿ ಸಂಗತಿ ಎಂದರೆ ವಿದ್ಯುತ್‌ಚಾಲಿತ ಕಾರುಗಳು ನೇರವಾಗಿ ಮಾಲಿನ್ಯವನ್ನುಂಟು ಮಾಡುವುದಿಲ್ಲ.  ಈ ವಾಹನಗಳಿಗಾಗಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಪರಿಸರಕ್ಕೆ ಹಾನಿ ಮಾಡುತ್ತವೆ!ಅಂದರೆ, ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವಿದ್ಯುತ್ ಚಾಲಿತ ವಾಹನಗಳು ಮಾಲಿನ್ಯ  ಸೃಷ್ಟಿ ಮಾಡುತ್ತವೆ. `ಪರಿಸರ ಸ್ನೇಹಿ~ ಎಂದು ಪರಿಗಣಿಸಲಾಗಿರುವ ಈ ವಾಹನಗಳಿಗಾಗಿ  ವಿದ್ಯುತ್ ಉತ್ಪಾದಿಸುವ ಘಟಕಗಳು ಅತಿ ಸೂಕ್ಷ್ಮ ಕಣಗಳನ್ನು ಭಾರಿ ಪ್ರಮಾಣದಲ್ಲಿ ಹೊರಸೂಸುತ್ತವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳಿಂತ ಹೆಚ್ಚು ಪ್ರಮಾಣದಲ್ಲಿ ಈ ಘಟಕಗಳು ಮಾಲಿನ್ಯಕ್ಕೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಸೂಕ್ಷ್ಮ ಕಣಗಳನ್ನು ವಾತಾವರಣಕ್ಕೆ ಬಿಡುತ್ತವೆ ಎಂಬುದು ಅಧ್ಯಯನಕಾರರ  ಅಂಬೋಣ.ಚೀನಾದಲ್ಲೇ ಏಕೆ?: ಚೆರ‌್ರಿ ಮತ್ತು ಅವರ ತಂಡ ಈ ಅಧ್ಯಯನಕ್ಕಾಗಿ ಚೀನಾವನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಒಂದು ಕಾರಣ ಇದೆ. ಚೀನಾದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚು ಜನಪ್ರಿಯತೆ ಪಡೆದಿದೆ. ಅಲ್ಲಿನ ಜನರು ವಿದ್ಯುತ್ ಚಾಲಿತ ಕಾರು ಮತ್ತು ಬೈಕುಗಳನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತಾರೆ. ಚೀನಾದಲ್ಲಿ ಪ್ರತಿಯೊಬ್ಬರು ಈ ಎರಡು ಪ್ರಕಾರಗಳಲ್ಲಿ ಒಂದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತಾರೆ.ಅಧ್ಯಯನಕಾರರು ಚೀನಾದ ಒಟ್ಟು ಐದು ವಿದ್ಯುತ್ ವಾಹನಗಳ ತಯಾರಿಕಾ ಕಂಪೆನಿಗಳನ್ನು ಗುರಿಯಾಗಿಸಿಕೊಂಡು ಅವುಗಳ ವಿದ್ಯುತ್ ಉತ್ಪಾದನಾ ಘಟಕಗಳು ಹೊರಸೂಸುವ ಸೂಕ್ಷ್ಮ ಕಣಗಳಿಂದ ಪರಿಸರಕ್ಕೆ ಆಗುವ ಹಾನಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ಕೂಲಂಕಷವಾಗಿಪರಿಶೀಲಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಕಾರುಗಳು, ಬಸ್, ವಿದ್ಯುತ್ ಕಾರು ಮತ್ತು ವಿದ್ಯುತ್‌ಚಾಲಿತ ಬೈಕುಗಳನ್ನು ಅವರು ಅಧ್ಯಯನಕ್ಕಾಗಿ ಬಳಸಿದ್ದಾರೆ. ಆ ಬಳಿಕ ಅವುಗಳು ಹೊರಸೂಸುವ ಮಾಲಿನ್ಯ ಕಾರಕ ವಸ್ತುಗಳ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ. ಇವುಗಳು ಪರಿಸರ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಹೋಲಿಸಿದ್ದಾರೆ.ಸಾಮಾನ್ಯವಾಗಿ ಚೀನಾದಲ್ಲಿ ಶೇ 85ರಷ್ಟು ವಿದ್ಯುತ್  ಪಳೆಯುಳಿಕೆ ಇಂಧನ ಮತ್ತು ಶೇ 90ರಷ್ಟು ವಿದ್ಯುತ್‌ನ್ನು ಕಲ್ಲಿದ್ದಲಿನಿಂದ ಉತ್ಪಾದಿಸಲಾಗುತ್ತಿದೆ. ಈ ಇಂಧನಗಳನ್ನು ಉರಿಸಿದಾಗ ಆಮ್ಲಗಳು, ರಾಸಾಯನಿಕಗಳು, ಲೋಹದ ಕಣಗಳು, ದೂಳಿನ ಕಣಗಳು ಬಿಡುಗಡೆಯಾಗುತ್ತವೆ. ವಿವಿಧ ರೂಪದಲ್ಲಿರುವ ಈ ಕಣಗಳು ವಾತಾವರಣಕ್ಕೆ ಸೇರಿ ಪರಿಸರದ ಸ್ವಚ್ಛತೆ  ಕೆಡಿಸುತ್ತದೆ.ಸೂಕ್ಷ್ಮ ಕಣಗಳ ಹೊರಸೂಸುವಿಕೆಯಿಂದ ಉಂಟಾಗುವ ವಾಯುಮಾಲಿನ್ಯ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಲ್ಲುದು ಎಂಬುನ್ನೂ ಅಧ್ಯಯನ ಕಂಡುಕೊಂಡಿದೆ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry