ಬುಧವಾರ, ಜೂನ್ 16, 2021
23 °C

ಹುಸ್ಕೂರಿನ 10 ತೇರಿಗೆ ಎತ್ತುಗಳ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರೀಕರಣದ ಪ್ರಭಾವದಿಂದಾಗಿ ಸಾಂಪ್ರದಾಯಿಕ ಆಚರಣೆಗಳು ಕಡಿಮೆಯಾಗುತ್ತಿದ್ದರೂ ಸಹ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡ, ಬೆಂಗಳೂರಿನಿಂದ ಕೇವಲ 15 ಕಿ.ಮೀ ದೂರದ ಆನೇಕಲ್ ತಾಲ್ಲೂಕು ಹುಸ್ಕೂರು ಗ್ರಾಮದಲ್ಲಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಒಗ್ಗೂಡಿ ಮದ್ದೂರಮ್ಮನ ಜಾತ್ರೆಯನ್ನು ಪರಂಪರೆಯಂತೆ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.ಈ ಜಾತ್ರೆಯ ಮುಖ್ಯ ಆಕರ್ಷಣೆ ಎಂದರೆ ಕುರ್ಜುಗಳು (ತೇರುಗಳು). ಸಾಮಾನ್ಯವಾಗಿ ತೇರುಗಳನ್ನು ಜನರು ಎಳೆಯುವ ಪದ್ಧತಿ ಇದ್ದರೆ, ಇಲ್ಲಿ 60 ರಿಂದ 70 ಜೊತೆ ಎತ್ತುಗಳು ತೇರನ್ನು ಎಳೆಯುವುದು ಗಮನಾರ್ಹ.ದೇವಾಲಯಕ್ಕೆ ಸಂಬಂಧಿಸಿದ ಹೀಲಲಿಗೆ, ದೊಡ್ಡನಾಗಮಂಗಲ, ರಾಮಸಾಗರ, ಸಿಂಗೇನ ಅಗ್ರಹಾರ, ಕಗ್ಗಲೀಪುರ, ಸೂಲಕುಂಟೆ, ರಾಯಸಂದ್ರ, ಕೊಡತಿ, ಚೊಕ್ಕಸಂದ್ರ, ಹಾರೋಹಳ್ಳಿ ಗ್ರಾಮಗಳಿಂದ ತೇರುಗಳನ್ನು ಸಿದ್ಧಪಡಿಸಿಕೊಂಡು ಜಾತ್ರೆಗೆ ತರಲಾಗುತ್ತದೆ. ತೇರು ಕಟ್ಟಲು ಆಯಾ ಗ್ರಾಮದ  ಜನ ಕನಿಷ್ಠ ಎರಡು ವಾರ ತಯಾರಿ ಮಾಡುತ್ತಾರೆ.60 ರಿಂದ 90 ಅಡಿ ಎತ್ತರದವರೆಗೂ ಇರುವ ಈ ತೇರುಗಳನ್ನು ಗಟ್ಟಿಮುಟ್ಟಾದ ಮರಗಳನ್ನು ಬಳಸಿ ಕಟ್ಟಲಾಗುತ್ತದೆ. ಇವು 11 ರಿಂದ 18 ಅಂತಸ್ತಿನವರೆಗೂದಿರುತ್ತವೆ. ಈ ಸಲ ಹೀಲಲಿಗೆ ಗ್ರಾಮದ ಕುರ್ಜು 120 ಅಡಿ ಎತ್ತರವಿದೆ ಎಂದು ತೇರಿನ ಸಿದ್ಧತೆಯಲ್ಲಿ ತೊಡಗಿದ್ದ ಗ್ರಾಮದ ಚಂದ್ರಶೇಖರ್ ಹೇಳುತ್ತಾರೆ.ತೇರಿನ ವಿವಿಧ ಅಂಕಣಗಳಲ್ಲಿ ಕಟ್ಟಲಾಗುವ ಬಟ್ಟೆಗಳನ್ನು ವಿಶಿಷ್ಟವಾಗಿ ಸಿದ್ಧಪಡಿಸಲಾಗಿದೆ. ಈ ಕುರ್ಜುಗೆ 20 ಟನ್ ಮರವನ್ನು ಬಳಸಲಾಗಿದ್ದು, ಅಂದಾಜು 10ಲಕ್ಷ ರೂ. ವೆಚ್ಚಮಾಡಲಾಗಿದೆ ಎನ್ನುತ್ತಾರೆ.ವಿವಿಧ ಅಂಕಣಗಳಲ್ಲಿ ಕಟ್ಟಲಾಗುವ ಬಟ್ಟೆಗಳಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಪರಿಸರ ಸಂರಕ್ಷಣೆ, ಮಕ್ಕಳನ್ನು ಶಾಲೆಗಳನ್ನು ಕಳಿಸಿ ಎಂಬ ಸಾಮಾಜಿಕ ಸಂದೇಶ ಸಾರುವ ಘೋಷಣೆಗಳು ಹಾಗೂ ಚಿತ್ರಗಳು ಎದ್ದು ಕಾಣುತ್ತವೆ.ತೇರುಗಳನ್ನು 60 ರಿಂದ 70 ಜೊತೆ ಎತ್ತುಗಳು ಎಳೆದುಕೊಂಡು ಜಾತ್ರೆಯ ದಿನ ಹುಸ್ಕೂರಿಗೆ ಬರುವುದನ್ನು ನೋಡುವುದೇ ಆನಂದ.

 

ಹಳ್ಳ-ದಿಣ್ಣೆಗಳೆನ್ನದೆ ಹೊಲ-ಗದ್ದೆಗಳಲ್ಲಿಯೂ ಸಹ ಸಾಗಿ ಬರುವ ಈ ಎತ್ತರದ ತೇರುಗಳು ಅದ್ಭುತವೇ ಸರಿ. ಕೊಡತಿ, ಸೂಲಕುಂಟೆ ತೇರುಗಳು 10 ಕಿ.ಮೀ ದೂರ ಸಾಗಿ ಬಂದರೆ, ಹಾರೋಹಳ್ಳಿ, ಹೀಲಲಿಗೆ, ತೇರುಗಳು ಸುಮಾರು 7 ಕಿ.ಮೀ ದೂರ ಸಾಗಿ ಬರುತ್ತವೆ.ಪ್ರತಿ ಗ್ರಾಮದವರು ಮದ್ದೂರಮ್ಮ ದೇವಿಯ ಅಲಂಕೃತ ಮೂರ್ತಿಯನ್ನು ತೇರುಗಳಲ್ಲಿ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹುಸ್ಕೂರಿಗೆ ಆಗಮಿಸುತ್ತಾರೆ. ಈ ತೇರುಗಳ ಸಮ್ಮಿಲನದ ಸಂಭ್ರಮಕ್ಕೆ ಸಾಕ್ಷಿಯಾಗಲು ಸಹಸ್ರಾರು ಜನರು ಹುಸ್ಕೂರಿನಲ್ಲಿ ಜಮಾಯಿಸುತ್ತಾರೆ. ಈ ಎಲ್ಲ ಗ್ರಾಮಗಳ ಹತ್ತು ತೇರುಗಳ ಸಂಗಮವನ್ನು ನೋಡುವುದೇ ಒಂದು ಸಂಭ್ರಮ.ಐದು ದಿನಗಳ ಈ ಜಾತ್ರೆ ಶುಕ್ರವಾರ (ಮಾರ್ಚ್16) ಪ್ರಾರಂಭ. ಶನಿವಾರ (ಮಾರ್ಚ್ 17) ಎಲ್ಲಾ ಗ್ರಾಮಗಳ ತೇರುಗಳು ಹುಸ್ಕೂರಿನ ಮದ್ದೂರಮ್ಮ ದೇವಾಲಯದ ಆವರಣಕ್ಕೆ ಬರುತ್ತವೆ.

 

ಭಾನುವಾರ ಮಕ್ಕಳ ಸಿಡಿ, ಕರಗ ಹಾಗೂ 38 ದೇವರುಗಳ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಶನಿವಾರ ಬಂದ ತೇರುಗಳು ಮಂಗಳವಾರದವರೆಗೂ ಹುಸ್ಕೂರಿನಲ್ಲಿ ಇರುತ್ತವೆ. ನಂತರ ಸ್ವಗ್ರಾಮಗಳಿಗೆ ಹಿಂದಿರುಗುತ್ತವೆ.ದೇವಾಲಯದ ಹಿನ್ನೆಲೆ: ಹುಸ್ಕೂರು ಮದ್ದೂರಮ್ಮ ದೇವಾಲಯವು 11ನೇ ಶತಮಾನದ್ದು ಎನ್ನಲಾಗಿದೆ. ಮೈಸೂರು ಸಂಸ್ಥಾನದ ಹೈದರಾಲಿ, ಟಿಪ್ಪುಸುಲ್ತಾನ್ ಈ ದೇವಾಲಯದ ಭಕ್ತರಾಗಿದ್ದುದು ಒಂದು ವಿಶೇಷ. ಇವರುಗಳು ದೇವಿಗೆ ಮಾಡಿಸಿಕೊಟ್ಟ ಚಿನ್ನದ ಹಾಗೂ ವಜ್ರದ ಆಭರಣಗಳು ಇಂದಿಗೂ ತಾಲ್ಲೂಕಿನ ಖಜಾನೆಯಲ್ಲಿ ಭದ್ರವಾಗಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಾಪಣ್ಣ ಹೇಳುತ್ತಾರೆ.ಬೆಂಗಳೂರು- ಹೊಸೂರು ರಸ್ತೆಯಲ್ಲಿ 20 ಕಿ.ಮೀ ಸಾಗಿದರೆ ಹುಸ್ಕೂರು ಗೇಟ್ ಸಿಗುತ್ತದೆ. ಅಲ್ಲಿಂದ 2 ಕಿಮಿ ಒಳಗಿದೆ ಹುಸ್ಕೂರು. ಚಂದಾಪುರ ಅತ್ತಿಬೆಲೆ ಕಡೆಯ ಎಲ್ಲ ಬಸ್‌ಗಳು ಈ ಮಾರ್ಗದಲ್ಲಿಯೇ ಹಾದು ಹೋಗುತ್ತವೆ. ಅಲ್ಲಿ ಬರುವ ಶುಕ್ರವಾರದಿಂದ ಜಾತ್ರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.