ಶನಿವಾರ, ಏಪ್ರಿಲ್ 10, 2021
33 °C

ಹು-ಧಾ ಚತುಷ್ಪಥ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದ ಬೆಳವಣಿಗೆಗೆ ಹೆಚ್ಚಿನ ಹಣಕಾಸು ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಹುಬ್ಬಳ್ಳಿ ಹೊಸೂರಿನಿಂದ ಧಾರವಾಡದ ಜ್ಯುಬಿಲಿ ವೃತ್ತದವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ  ಕಾಮಗಾರಿಗೆ ಶನಿವಾರ ನಗರದ ಎಪಿಎಂಸಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವಳಿ ನಗರದ ಜನತೆ ನೆನಪಿಸುವಂತೆ ಕೆಲಸ ಮಾಡಿಸಿ ತೋರಿಸುವುದಾಗಿ ಹೇಳಿದರು.

ಚತುಷ್ಪಥ ಕಾಮಗಾರಿಯು 177.73 ಕೋಟಿ ರೂಪಾಯಿಯ ಯೋಜನೆಯಾಗಿದೆ. 19.07 ಕಿ.ಮೀ. ಉದ್ದದ ಈ ಚತುಷ್ಪಥದಲ್ಲಿ 13.75 ಕಿ.ಮೀ. ಉದ್ದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಮುಂಬರುವ ದಿನಗಳಲ್ಲಿ ಇದನ್ನು ಆರು ಪಥಗಳ ರಸ್ತೆಯನ್ನಾಗಿ ರೂಪಿಸಲು ಚಿಂತನೆ ನಡೆದಿದೆ ಎಂದರು.

ಈ ಬಜೆಟ್‌ನಲ್ಲಿ ಹುಬ್ಬಳ್ಳಿಯ ಕಿಮ್ಸ್‌ಗೆ ರೂ. 25 ಕೋಟಿ, ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ರೂ. 5 ಕೋಟಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ರೂ. 250 ಕೋಟಿ  ಒದಗಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) 500 ಹೊಸ ಬಸ್ ಒದಗಿಸಲಾಗುತ್ತಿದ್ದು, ಈಗಾಗಲೇ 440 ಬಸ್ಸುಗಳನ್ನು ನೀಡಲಾಗಿದೆ ಎಂದರು.

ಈ ಭಾಗದ ಜನರು ನೆನಪಿಡುವಂತೆ ಅದ್ದೂರಿಯಾಗಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇವೆ ಎಂದ ಅವರು, ಪ್ರತಿಯೊಬ್ಬರು ಕನಿಷ್ಠ ಒಂದು ದಿನವಾದರೂ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಚತುಷ್ಪಥ ಕಾಮಗಾರಿ ಆರಂಭಿಸಲು ಮಾಡಿದ ಪ್ರಯತ್ನ ಯಶಸ್ವಿಯಾಗಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

‘ರಾಜಕೀಯ ಬೇಡ’

ಕೇಂದ್ರ ಸರ್ಕಾರದ ಅನುದಾನ ಇರುವ ಈ ಕಾಮಗಾರಿಯ ಶಂಕುಸ್ಥಾಪನೆಗೆ ಕೇಂದ್ರ ಸಚಿವರನ್ನು ಆಹ್ವಾನಿಸಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಅವರು, ‘ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು. ಮುಂದಿನ ದಿನಗಳಲ್ಲಿ ಕೇಂದ್ರ ಮಂತ್ರಿಗಳನ್ನು ಕರೆಸೋಣ. ಅವರಿಂದ ರಾಜ್ಯದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ನೆರವು ಪಡೆದುಕೊಳ್ಳೋಣ’ ಎಂದರು.

ಈ ಹಿಂದೆ ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಅನುದಾನ ಹೊರತುಪಡಿಸಿ ಬೇರಾವುದೇ ವಿಶೇಷ ಅನುದಾನ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ದೊರೆಯುತ್ತಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಗಳಾದ ನಂತರ ನೂರು ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದರು. ಈಗ ಮತ್ತೆ ನೂರು ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದಾರೆ. ಉಳಿದ ಪಾಲಿಕೆಗಳಿಗಿಂತ ಹುಬ್ಬಳ್ಳಿ- ಧಾರವಾಡದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಈ ಅನುದಾನವನ್ನು ಇನ್ನೂರು ಕೋಟಿ ರೂಪಾಯಿಗೆ ಏರಿಸಬೇಕು ಎಂದು ಅವರು ಮನವಿ ಮಾಡಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ,  ‘ಬೆಂಗಳೂರಿನ ನಂತರ ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿ- ಧಾರವಾಡ. ಈ ಅವಳಿ ನಗರದ ನಡುವಿನ ರಸ್ತೆಯನ್ನು ಚತುಷ್ಪಥವನ್ನಾಗಿಸುವ ಬಹುದಿನಗಳ ಬೇಡಿಕೆ ಈಗ   ಈಡೇರುತ್ತಿದೆ’ ಎಂದರು.

ಧಾರವಾಡ- ಸವದತ್ತಿ ರಸ್ತೆಯನ್ನು ರೂ. 107 ಕೋಟಿಯಲ್ಲಿ  ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲಾಗಿದೆ. ರೂ. 268 ಕೋಟಿಯಲ್ಲಿ ನಿರ್ಮಿಸಲಾಗುತ್ತಿರುವ 43 ಕಿ.ಮೀ. ಉದ್ದದ  ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆ ಮುಗಿಯುವ ಹಂತಕ್ಕೆ ಬಂದಿದೆ. ಧಾರವಾಡ- ರಾಮನಗರ ನಡುವಿನ 61 ಕಿ.ಮೀ. ರಸ್ತೆಯನ್ನು ರೂ. 245 ಕೋಟಿಯಲ್ಲಿ ಅಭಿವೃಪದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಹುಬ್ಬಳ್ಳಿ- ಧಾರವಾಡ ರಸ್ತೆಯನ್ನು ಚತುಷ್ಪಥವಾಗಿಸುವ ಭರವಸೆಯನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಲಾಗಿತ್ತು. ಅದರನುಸಾರವಾಗಿ ಈಗ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಬೆಂಗಳೂರು- ಮುಂಬೈ ನಡುವಿನ ರಾಷ್ಟ್ರೀಯ ಹೆದ್ದಾರಿಗಳನ್ನು ಆರು ಪಥ ರಸ್ತೆಯನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಖಾಸಗಿಯವರ ಅಧೀನದಲ್ಲಿರುವ ಕಾರಣ ಹುಬ್ಬಳ್ಳಿ- ಧಾರವಾಡ ನಡುವಿನ ಬೈಪಾಸ್ ರಸ್ತೆ ಮಾತ್ರ ಹಾಗೇ ಉಳಿಯಲಿದೆ. ಈ ರಸ್ತೆಗೆ ಸಂಬಂಧಿಸಿದ ಕಂಪೆನಿ  ಮುಖ್ಯಸ್ಥರ ಜೊತೆ ಮುಖ್ಯಮಂತ್ರಿಗಳು ಮಾತನಾಡಿ, ಆರು ಪಥ ರಸ್ತೆಯನ್ನಾಗಿಸಲು ಯತ್ನಿಸಬೇಕು ಎಂದು ಜೋಶಿ ಮನವಿ ಮಾಡಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಸ್.ಎಂ. ಕೃಷ್ಣ ಆಶ್ವಾಸನೆ ನೀಡಿದರೂ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಮಾತ್ರ  ಚಾಲನೆ ದೊರೆತಿರಲಿಲ್ಲ ಎಂದು ಶಾಸಕ ಹಾಗೂ ಗಡಿನಾಡ     ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಜರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.