ಹೂಡಿಕೆಗೆ ಆಸಕ್ತಿ: ಭೂಮಿಯದ್ದೇ ಸಮಸ್ಯೆ
ಮಂಡ್ಯ: ವಿಶ್ವ ಬಂಡವಾಳ ಹೂಡಿಕೆದಾರರ ಎರಡನೇ ಸಮಾವೇಶದಲ್ಲಿ ಜಿಲ್ಲೆಗೆ ಮೊದಲ ಸಮಾವೇಶಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಬಂಡವಾಳ ಹರಿದು ಬಂದಿದೆ. ಆದರೆ, ಹೂಡಿಕೆದಾರರ ಕೈಗಾರಿಕೆಗಳಿಗೆ ಭೂಮಿ ಒದಗಿಸುವುದೇ ಕಷ್ಟವಾಗಿದೆ.
2010ರಲ್ಲಿ ನಡೆದಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಐವರು ಹೂಡಿಕೆದಾರರು 479 ಕೋಟಿ ರೂಪಾಯಿ ಬಂಡವಾಳ ಹೂಡಲು ಒಪ್ಪಂಡ ಮಾಡಿ ಕೊಂಡಿದ್ದರು. 2012ರಲ್ಲಿ ನಡೆದ ಎರಡನೇ ಸಮಾವೇಶದಲ್ಲಿ 14 ಕೈಗಾರಿಕೆಗಳಿಂದ 2,430 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ.
2010ರಲ್ಲಿ ಒಪ್ಪಂದ ಮಾಡಿಕೊಂಡಿದದ ಐದು ಕಂಪೆನಿಗಳ ಪೈಕಿ ಎರಡು ಕಂಪೆನಿಗಳಾದ ಆರ್-ಕೆಮ್ ಹಾಗೂ ವೆಲ್ಸ್ಪನ್ ಕಾರ್ಪ್ ಕಾರ್ಯಾರಂಭಿಸಿವೆ. ಪ್ರೈಮ್ ಸ್ಟೋನ್ ಸೇರಿದಂತೆ ಉಳಿದ ಕೈಗಾರಿಕೆಗಳ ಆರಂಭಿಸುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ.
2012ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಫೆವರಿಚ್ ಷುಗರ್ಸ್ ಪ್ರೈವೇಟ್ ಲಿಮಿಟೆಡ್ನವರು 450 ಕೋಟಿ ರೂ, ನಾಗಮಂಗಲ ತಾಲ್ಲೂಕಿನಲ್ಲಿ ಪ್ರೇಮ್ ಷುಗರ್ಸ್ ಆಂಡ್ ಕೆಮಿಕಲ್ಸ್ ಕಾರ್ಪೋರೇಶನ್ ಲಿಮಿಟೆಡ್ನವರು 450 ಕೋಟಿ ರೂಪಾಯಿ, ಮಂಡ್ಯದಲ್ಲಿ ಇಂಡಿಯಾ ಸಿಮೆಂಟ್ಸ್/ ಕೋರಮಂಡಲ್ ಷುಗರ್ಸ್ನವರು 200 ಕೋಟಿ ರೂಪಾಯಿ ಹೂಡಲು ಮುಂದೆ ಬಂದಿದ್ದಾರೆ.
ಮಂಡ್ಯದಲ್ಲಿ ತರುಣ್ ಇಂಡಸ್ಟ್ರೀಸ್ನವರು 10 ಕೋಟಿ ರೂಪಾಯಿ, ಅಪರಮಿತಾ ಪಾವರ್ ಪ್ರೈವೇಟ್ ಲಿಮಿಟೆಡ್ನವರು 19 ಕೋಟಿ ರೂಪಾಯಿ, ರಿಮಾನ್ಸ್ ಇನ್ಫ್ರಾಟೆಕ್ ಲಿಮಿಟೆಡ್ನವರು 200 ಕೋಟಿ, ಬೆಗ್ಗ್ರುಯನ್ ಪ್ರಾಪರಟೀಸ್ ಲಿಮಿಟೆಡ್ನವರು 991 ಕೋಟಿ, ಸಿದ್ದಾರ್ಥ ರೆಸಾರ್ಟ್ಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ನವರು 30 ಕೋಟಿ, ಯುಗಯಾತ್ರಿ ಥೀಮ್ ಪಾರ್ಕ್ಸ್ನವರು 60 ಕೋಟಿ ರೂ. ಸೇರಿದಂತೆ ವಿವಿಧ ಉದ್ಯಮಿಗಳು ಹಣ ಹೂಡಲು ಮುಂದೆ ಬಂದಿದ್ದಾರೆ.
ಈ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ಚಟುವಟಿಕೆಗಳು ತೀವ್ರಗೊಳ್ಳಲಿವೆಯಲ್ಲದೇ, ನಿರುದ್ಯೋಗಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗವಕಾಶಗಳು ಲಭ್ಯವಾಗಲಿವೆ ಎನ್ನುತ್ತಾರೆ ಕೈಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿಗಳು.
ಜಿಲ್ಲೆಯಲ್ಲಿ ಸೋಮನಹಳ್ಳಿ, ತೂಬಿನಕೆರೆ, ಹನಗನಹಳ್ಳಿ ಸೇರಿದಂತೆ ಐದು ಕಡೆಗಳಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಈ ಪ್ರದೇಶಗಳು ಕೈಗಾರಿಕೆಗಳಿಂದ ಭರ್ತಿಯಾಗಿದ್ದು, ಹೊಸದಾಗಿ ಆಗಮಿಸುವ ಕೈಗಾರಿಕೆಗಳಿಗೆ ಸ್ಥಳಾವಕಾಶವಿಲ್ಲ ಎನ್ನುತ್ತಾರೆ ಅವರು.
ಹೊಸದಾಗಿ ಜಿಲ್ಲೆಯಲ್ಲಿ ಹೂಡಿಕೆ ಮಾಡಲಿರುವ ಕೈಗಾರಿಕೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ಕೈಗಾರಿಕಾ ಇಲಾಖೆಯ ಜಿಲ್ಲಾ ಕಚೇರಿಗೆ ಕಳುಹಿಸಿಕೊಟ್ಟಿದೆ. ಕೆಲವರು ಈಗಾಗಲೇ ಕೈಗಾರಿಕಾ ಸ್ಥಳ ನಿಗದಿ ಮಾಡಿಕೊಂಡಿದ್ದರೆ, ಇನ್ನು ಕೆಲವರು ಇನ್ನು ಮೇಲಷ್ಟೇ ನಿಗದಿ ಮಾಡಕೊಳ್ಳಬೇಕಿದೆ.
ಕೈಗಾರಿಕೆಗಳ ಸ್ವರೂಪ, ಲಭ್ಯವಾಗುವ ಉದ್ಯೋಗವಕಾಶ, ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಭೂಮಿ, ಒದಗಿಸಬೇಕಾದ ಇನ್ನಿತರ ಸೌಲಭ್ಯಗಳ ಕುರಿತು ಚರ್ಚಿಸಲು ನ.19 ರಂದು ಮಂಡ್ಯದಲ್ಲಿ ಹೂಡಿಕೆದಾರರ ಸಭೆ ಕರೆಯಲಾಗಿದೆ.
ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗಿರುವ ಭೂಮಿಯನ್ನು ವಶ ಪಡಿಸಿಕೊಳ್ಳುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಮಂಡ್ಯ ಹಾಗೂ ಶ್ರೀರಂಗಪಟ್ಟಣ ಸುತ್ತ-ಮುತ್ತಲು ಭೂಮಿ ವಶಪಡಿಸಿಕೊಳ್ಳುವುದಕ್ಕೆ ರೈತರಿಂದ ತೀವ್ರ ವಿರೋಧವಿದೆ.
ಬಂಡವಾಳ ಹೂಡಿಕೆದಾರರಿಗೆ ಭೂಮಿ ಕೊಡುವುದನ್ನು ವಿರೋಧಿಸುತ್ತಿವೆ. ಈಗಾಗಲೇ ಭೂಮಿ ಕಳೆದುಕೊಂಡಿರುವ ರೈತರು ಗುಳೆ ಹೋಗುತ್ತಿದ್ದಾರೆ. ಕೃಷಿ ಜಮೀನು ಕಡಿಮೆ ಯಾಗುತ್ತಿದೆ. ಭೂಮಿ ವಶಪಡಿಸಿಕೊಳ್ಳಲು ಮುಂದಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.