ಶನಿವಾರ, ಮೇ 28, 2022
31 °C

ಹೂಡಿಕೆದಾರರ ಸಮಾವೇಶದಿಂದ ಭಾರಿ ಉದ್ಯಮ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: `ಅಭಿವೃದ್ಧಿಯ ದೃಷ್ಟಿಯಲ್ಲಿ ಕಾಸರಗೋಡು ಅನಂತ ಸಾಧ್ಯತೆಯಿರುವ ಜಿಲ್ಲೆಯಾಗಿದೆ. ಇಲ್ಲಿನ ಅಭಿವೃದ್ಧಿಗೆ ಸ್ಥಳದ ಕೊರತೆಯಿಲ್ಲ. ಜಿಲ್ಲೆಯನ್ನು ಸರಿಯಾದ ದಿಶೆಯಲ್ಲಿ ಮಾರುಕಟ್ಟೆಯನ್ನಾಗಿ ರೂಪಿ ಸಲು ಸಾಧ್ಯವಾಗಿಲ್ಲ. ಹೂಡಿಕೆ ಸಮಾವೇಶ ಏರ್ಪಡಿಸಿ ಅನಿವಾಸಿ ಭಾರತೀಯರ ಬಂಡವಾಳವನ್ನು ಬಳಸಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ನಾಂದಿ ಹಾಡಬೇಕು~ ಎಂದು ಕೆಪಿಸಿಸಿ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಕರೆ ನೀಡಿದರು.ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ವಿಚಾರಸಂಕಿರಣವನ್ನು ನಗರಸಭಾ ಸಮ್ಮೇಳನಾ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. `ವಿಚಾರಸಂಕಿರಣದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ನಾಯಕರು ಭಾಗವಹಿಸದಿದ್ದರೂ ಜಿಲ್ಲೆಯ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಲು ಸರ್ಕಾರ ನೇಮಿಸಿದ ಪಿ.ಪ್ರಭಾಕರನ್ ಆಯೋಗದ ಜತೆ ಸಹಕರಿಸಬೇಕು~ ಎಂದು ಮನವಿ ಮಾಡಿದರು.ಪರಿಸರ ಸ್ನೇಹಿ ಉದ್ಯಮಕ್ಕೆ ಆದ್ಯತೆ:
12ನೇ ಪಂಚವಾರ್ಷಿಕ ಯೋಜನೆಯಡಿ ಕಾಸರಗೋಡಿಗೆ ಸಿಗಬೇಕಾದ ಯೋಜನೆಗಳು ನ್ಯಾಯೋಚಿತವಾಗಿ ಲಭ್ಯವಾಗಬೇಕು. ಮಂಗಳೂರು ವಿಮಾನ ನಿಲ್ದಾಣ, ಬಂದರು, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಮೊದಲಾದ ಸೌಲಭ್ಯಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಪರಿಸರ ಸ್ನೇಹಿ ಉದ್ಯಮಗಳಿಗೆ ಆದ್ಯತೆ ನೀಡಲಾಗುವುದು. ಇದನ್ನು ಸದುಪಯೋಗಪಡಿಸಿ ಯುವ ತಲೆಮಾರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವ ಕಾಲ ಒದಗಿಬಂದಿದೆ ಎಂದರು.ಸಂಚಾರಿ ತ್ರಿವೇಣಿ ಸ್ಟೋರ್: ಕಾಸರಗೋಡಿಗೆ ಪ್ರಥಮ ಕೊಡುಗೆಯಾಗಿ 20 ದಿನಗಳೊಳಗೆ `ಕನ್ಸ್ಯೂಮರ್‌ಫೆಡ್~ನ ಸಂಚಾರಿ ತ್ರಿವೇಣಿ ಸ್ಟೋರ್ ಆರಂಭಿಸಲಾಗುವುದು. ರಾಜ್ಯದಲ್ಲಿ 1 ಸಾವಿರ `ನನ್ಮ~ ಸ್ಟೋರ್ ತೆರೆದು, ಇವುಗಳ ಮೂಲಕ ನ್ಯಾಯ ಬೆಲೆಗೆ ಆಹಾರ ಸಾಮಗ್ರಿವಿತರಿಸಲಾಗುವುದು ಎಂದರು.

 ಎಂಡೋಸಲ್ಫಾನ್ ಬಾಧಿತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದ್ದು, ಮಾನವಹಕ್ಕು ಆಯೋಗದ ಶಿಫಾರಸಿನಂತೆ ಸರ್ಕಾರದ ಪರಿಹಾರ ನೀಡಲಾಗುವುದು. ತೋಟಗಾರಿಕಾ ನಿಗಮ ರೂ.27ಕೋಟಿ ಮೊತ್ತ ಪರಿಹಾರ ನೀಡಲು ಸನ್ನದ್ಧವಾಗಿದೆ ಎಂದರು.ಅಡಿಕೆ ಬೆಲೆ ಕುಸಿಯದು: ಕೇಂದ್ರ ಸರ್ಕಾರದ ಆಮದು ನೀತಿಯಿಂದ ಅಡಿಕೆ ಬೆಲೆ ಕುಸಿಯುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೇಂದ್ರ ವಾಣಿಜ್ಯ ಸಚಿವರ ಜತೆ ಮಾತುಕತೆ ನಡೆಸಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದರು.ಕೇಂದ್ರೀಯ ವಿಶ್ವವಿದ್ಯಾನಿಲಯದ ಕಟ್ಟಡ ನಿರ್ಮಾಣ ಶಿಲಾನ್ಯಾಸ ಕಾರ್ಯವನ್ನು ಕೇಂದ್ರ ಸಚಿವ ಕಬಿಲ್ ಸಿಬಲ್ ಜು.21ರಂದು ನೆರವೇರಿಸಲು ಸಮ್ಮತಿಸಿದ್ದಾರೆ. ಎಚ್‌ಎಎಲ್‌ನ  ಉದ್ಘಾಟನೆಯೂ ಶೀಘ್ರದ ಲ್ಲಿಯೇ ನಡೆಯಲಿದೆ. ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿ ಆಗಸ್ಟ್‌ನಲ್ಲಿ ನಡೆಯಲಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯದಡಿ ವೈದ್ಯಕೀಯ ಕಾಲೇಜು ನಿರ್ಮಿಸುವ ಪ್ರಸ್ತಾವ ಇಲ್ಲ. ಆದ್ದರಿಂದ ಇದನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲಾಗುತ್ತಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದವರು ಸ್ಪಷ್ಟಪಡಿಸಿದರು.ಪರಿಣಾಮಕಾರಿ ಯೋಜನೆ ಅಗತ್ಯ: ಅಧ್ಯಕ್ಷತೆ ವಹಿಸಿದ ಡಿಸಿಸಿ ಅಧ್ಯಕ್ಷ ಕೆ.ವೆಳುತ್ತಂಬು ಮಾತನಾಡಿ, `ರಾಜ್ಯದಲ್ಲಿ ಪರ್ಯಾಯವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಸರಗೋಡನ್ನು ಕಡೆಗಣಿಸಿದೆ. ಸರ್ಕಾರಿ ಕಚೇರಿಗಳಿದ್ದರೆ ಸಾಲದು; ಅಧಿಕಾರಿಗಳು ಪ್ರಾಮಾಣಿರಾಗಿ ದುಡಿಯಬೇಕು. ಕಾಸರಗೋಡಿನಲ್ಲಿ ಹುದ್ದೆ ಲಭಿಸಿ ತೆಂಕಣ ಜಿಲ್ಲೆಯತ್ತ ವರ್ಗಾವಣೆಯಾಗಿ ಹೋಗುವ ನೌಕರರ ಮನೋಭಾವ ಬದಲಾಗಬೇಕು. ಈ ಜಿಲ್ಲೆಗೆ ಹಣ ವಿನಿಯೋಗಿಸುವ ಪರಿಣಾಮಕಾರಿ ಯೋಜನೆ ರೂಪಿಸುವ ಅಗತ್ಯವಿದೆ~ ಎಂದು ಹೇಳಿದರು.ಶಾಸಕರಾದ ಎನ್.ಎ.ನೆಲ್ಲಿಕುಂಜೆ, ಪಿ.ಬಿ.ಅಬ್ದುಲ್ ರಸಾಕ್, ಕೆಪಿಸಿಸಿ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯನ್, ಕಾಂಗ್ರೆಸ್ ನಾಯಕರಾದ ಗಂಗಾಧರನ್ ನಾಯರ್, ಸಿ.ಕೆ.ಶ್ರೀಧರನ್, ಎಂ.ಸಿ.ಜೋಸ್, ನಾರಾಯಣ ಕುಟ್ಟಿ, ಮಧುಸೂದನನ್ ನಾಯರ್, ಕೆ.ಭಾಸ್ಕರನ್, ಎ.ಸುಬ್ಬಯ್ಯ ರೈ, ಪ್ರಭಾಕರ ಚೌಟ, ಎಂ. ಮುರಳೀಧರ್, ಅಶ್ರಫ್‌ಅಲಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ನೀಲಕಂಠನ್ ಇದ್ದರು.ಮಲೆನಾಡು ಹೆದ್ದಾರಿಗೆ ಶ್ರಮಿಸಿದ ಜೋಸೆಫ್ ಕನಕಮುಟ್ಟಂ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ಸೇತರ ನಾಯಕರನ್ನು ಆಮಂತ್ರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದ್ದರೂ ಯಾರೂ ಭಾಗವಹಿಸಲಿಲ್ಲ. ಸಂಘಟಕರು ಆಮಂತ್ರಣ ಪತ್ರವನ್ನೇ ಮುದ್ರಿಸಿರಲಿಲ್ಲ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.