ಹೂಡಿಕೆದಾರರ ಸಮಾವೇಶ ವಿರೋಧಿಸಿ

7

ಹೂಡಿಕೆದಾರರ ಸಮಾವೇಶ ವಿರೋಧಿಸಿ

Published:
Updated:
ಹೂಡಿಕೆದಾರರ ಸಮಾವೇಶ ವಿರೋಧಿಸಿ

ಕೋಲಾರ: ಕಳೆದ ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ವಶಪಡಿಸಿಕೊಳ್ಳಲಾಗಿರುವ ಭೂಮಿಯನ್ನೇ ಇನ್ನೂ ಸಮರ್ಪಕವಾಗಿ ಬಳಸದ ಸರ್ಕಾರ ಈಗ ಮತ್ತೊಂದು ಸಮಾವೇಶವನ್ನು ನಡೆಸಲು ಹೊರಟಿರುವುದನ್ನು ರೈತರ ಸಮುದಾಯ ವಿರೋಧಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚಾಮರಾಜ ಮಾಲಿಪಾಟೀಲ ಸಲಹೆ ನೀಡಿದರು.ಸೇನೆಯ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಬೇಕಾದ ಮೂಲಸೌಕರ್ಯ ನೀಡದ ಸರ್ಕಾರ, ಬಂಡವಾಳದಾರರಿಗೆ ಕೆಂಪು ಹಾಸು ಹಾಸಿ ರೈತರ ಭೂಮಿಯ ಜೊತೆಗೆ ಎಲ್ಲ ಸೌಕರ್ಯವನ್ನೂ ಉಚಿತವಾಗಿ ನೀಡುತ್ತಿದೆ. ಇಂಥ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯದ 123 ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ರೈತರಿಗೆ ಬೆಳೆ ಕೈ ಸೇರಿಲ್ಲ. ಅವರು ಸಾಲ ತೀರಿಸುವುದು ಹೇಗೆ? ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಗಾಲವನ್ನು ರೈತರ ಹಿತದೃಷ್ಟಿಯಿಂದ ನೋಡುತ್ತಿಲ್ಲ. ಬದಲಿಗೆ ರೆಸಾರ್ಟ್‌ಗಳಲ್ಲಿ ಕುಳಿತು ತಮ್ಮ ಅಧಿಕಾರದ ಕುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನಗಳೇ ಎಲ್ಲೆಡೆ ನಡೆಯುತ್ತಿವೆ. ಪರಿಣಾಮವಾಗಿ ಬರಗಾಲ ಪರಿಹಾರ ರೈತರಿಗೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕಿರುವ ರೈತರ ತಪ್ಪೇನೂ ಇಲ್ಲ. ಹೀಗಾಗಿ ಅವರಿಗೆ ನೀಡಿರುವ ಬೆಳೆ ಸಾಲವನ್ನು ಪೂರ್ಣ ಮನ್ನಾ ಮಾಡಬೇಕು. ಸರ್ಕಾರವೇ ಹೊಣೆ ಹೊತ್ತು ಉಚಿತವಾಗಿ ಬೀಜ ವಿತರಿಸಬೇಕು. ಅರ್ಧ ಬೆಲೆಗೆ ಗೊಬ್ಬರ ನೀಡಬೇಕು ಎಂದು ಆಗ್ರಹಿಸಿದರು.ಕೃಷಿ ಚಟುವಟಿಕೆ ದುಸ್ತರವಾಗಿದೆ. 1990ರಲ್ಲಿ ವಿಶ್ವ ವಾಣಿಜ್ಯ ಕೇಂದ್ರದೊಡನೆ ಒಪ್ಪಂದ ಆದ ಬಳಿಕ ರೈತರ ಸ್ಥಿತಿ ಹೀನಾಯವಾಗಿದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮೊದಲಾದ ಸಾಮಗ್ರಿಗಳ ಬೆಲೆ ಗಗನಕ್ಕೇರಿವೆ. 2 ವರ್ಷದಲ್ಲಿ 10 ಬಾರಿ ರಸಗೊಬ್ಬರದ ಬೆಲೆಯಲ್ಲಿ ಹೆಚ್ಚಿಸಲಾಗಿದೆ. ಕೃಷಿಯ ಉತ್ಪಾದನಾ ವೆಚ್ಚಕ್ಕೂ ರೈತರಿಗೆ ದೊರಕುವ ಪ್ರತಿಫಲಕ್ಕೂ ತಾಳೆಯಾಗುತ್ತಿಲ್ಲ ಎಂದು ವಿಷಾದಿಸಿದರು.ಸಭೆ: ಕಳೆದ ತಿಂಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಮುಖ್ಯಮಂತ್ರಿಗಳು ಜೂ 16ರಂದು ರೈತ ಮುಖಂಡರ ಸಭೆಯನ್ನು ನಿಗದಿ ಮಾಡಿದ್ದಾರೆ. ಅಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಆಗ್ರಹಿಸುತ್ತೇವೆ. ಅವರು ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.ಮುಂಚೂಣಿಯಲ್ಲಿರುವ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಇದುವರೆಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಈ ಮೂರೂ ಪಕ್ಷವನ್ನು ರೈತರು ತಿರಸ್ಕರಿಸಬೇಕು. ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.ಕೋಲಾರವೂ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವ ಪರಮಶಿವಯ್ಯ ವರದಿಯನ್ನು ಕೂಡಲೇ ಸರ್ಕಾರ ಜಾರಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವ ಯಾವುದೇ ಹೋರಾಟಕ್ಕೆ ಸೇನೆಯ ಬೆಂಬಲ ಸದಾ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.ಬಡಗಲಪುರ ನಾಗೇಂದ್ರ, ಪಚ್ಚೆ ನಂಜುಂಡಸ್ವಾಮಿ ಮಾತನಾಡಿದರು. ಬಿ.ಪಿ.ರಾಮಸ್ವಾಮಿ, ರಾಮು, ಭೀಮೇಶ್ವರರಾವ್, ಮುನಿರಾಜು, ನಾರಾಯಣಗೌಡ, ನೀಲಕಂಠಪುರ ಮುನೇಗೌಡ ವೇದಿಕೆಯಲ್ಲಿದ್ದರು.ಸೇನೆಯ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಸ್ವಾಗತಿಸಿದರು. ವಿಶ್ವನಾಥ ನಿರೂಪಿಸಿದರು. ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ತಂಡದವರು ರೈತ ಗೀತೆಗಳನ್ನು ಪ್ರಸ್ತುತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry