ಹೂಡಿಕೆ ಆಕರ್ಷಿಸಲು ಹೊಸ ಜವಳಿ ನೀತಿ

7
ಗುಜರಾತ್‌ನಿಂದಲೂ ಪ್ರೇರಣೆ

ಹೂಡಿಕೆ ಆಕರ್ಷಿಸಲು ಹೊಸ ಜವಳಿ ನೀತಿ

Published:
Updated:

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಹೊಸ ಜವಳಿ ನೀತಿ ಸಿದ್ಧಗೊಂಡಿದ್ದು, ಸಚಿವ ಸಂಪುಟ ಸಭೆಯ ಒಪ್ಪಿಗೆ ಸಿಕ್ಕ ನಂತರ ಅದರ ಅನುಷ್ಠಾನ ಆಗಲಿದೆ ಎಂದು ಜವಳಿ ಸಚಿವ ಬಾಬುರಾವ್ ಚಿಂಚನಸೂರ ಗುರುವಾರ ಇಲ್ಲಿ ಹೇಳಿದರು.2013–2018ರ ಅವಧಿಗೆ ಈ ನೀತಿ ರೂಪಿಸಲಾ ಗುತ್ತಿದೆ. ಇದರಿಂದ ಸುಮಾರು ಐದು ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಹಲವು ಕಡೆ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.ಗುಜರಾತ್‌ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಜವಳಿ ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ನೋಡಿಯೇ ಹೊಸ ನೀತಿ ರೂಪಿಸಲಾಗಿದೆ. ಸಿದ್ದ ಉಡುಪು ಕಾರ್ಖಾನೆಗಳಿಗೆ ವಿದ್ಯುತ್‌ ಸೇರಿದಂತೆ ಹಲವು ರೀತಿಯ ಸಬ್ಸಿಡಿಗಳನ್ನು ನೀಡುತ್ತಿದ್ದು, ಅವುಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.ಕಳೆದ ಐದು ವರ್ಷಗಳಲ್ಲಿ ರೂ.5,500 ಕೋಟಿ ಬಂಡವಾಳ ಜವಳಿ ಕ್ಷೇತ್ರಕ್ಕೆ ಹರಿದುಬಂದಿದೆ. ಇದರಿಂದ 2.5 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಹೇಳಿದರು.ಉಣ್ಣೆ ನೇಕಾರರಿಗೆ ಮನೆ ನಿರ್ಮಾಣ ಮತ್ತು ಉದ್ಯಮಕ್ಕೆ ಬೇಕಾಗುವ ಸಲಕರಣೆಗಳ ಖರೀದಿಗಾಗಿ ರೂ.27 ಕೋಟಿ ಮೀಸಲು ಇಡಲಾಗಿದೆ. ಇದನ್ನು ಸಾಲದ ರೂಪದಲ್ಲಿ ಅರ್ಹರಿಗೆ ನೀಡಲಾಗುವುದು ಎಂದು ಹೇಳಿದರು.ಮಗ್ಗಗಳ ಸ್ಥಳಾಂತರ

ಬೆಂಗಳೂರು ಸೇರಿದಂತೆ ಇತರ ನಗರ ಪ್ರದೇಶಗಳಲ್ಲಿನ ವಿದ್ಯುತ್‌ ಮಗ್ಗಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಅವುಗಳನ್ನು ನಗರದ ಹೊರ ಭಾಗಗಳಿಗೆ ಸ್ಥಳಾಂತರ ಮಾಡಲು ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 10 ಸಾವಿರ ಮಗ್ಗಗಳು ಇದ್ದು, ಅವುಗಳ ಸ್ಥಳಾಂತರಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿ ಜಾಗ ಮೀಸಲು ಇಡಲಾಗಿದೆ. ಕೆಲವರು ಸ್ಥಳಾಂತರ ಮಾಡಿದ್ದರೆ ಇನ್ನೂ ಕೆಲವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಸಚಿವ ಚಿಂಚನಸೂರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry