ಭಾನುವಾರ, ಮೇ 22, 2022
22 °C

ಹೂಡಿಕೆ ಒಪ್ಪಂದಗಳ ಜಾರಿಗೆ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭ ಹೂಡಿಕೆ ಒಪ್ಪಂದಗಳ ಅನುಷ್ಠಾನಕ್ಕೆ ಸಾಲದ ನೆರವಿನ ಒಪ್ಪಂದಗಳಿಗೂ ವೇದಿಕೆಯಾಯಿತು. ಸಮಾವೇಶದಲ್ಲಿ ಆಗಿರುವ ಒಪ್ಪಂದಗಳ ಅನುಷ್ಠಾನಕ್ಕಾಗಿ ಮೂರು ಲಕ್ಷ ಕೋಟಿ ರೂಪಾಯಿ ಅವಧಿ ಸಾಲ ನೀಡುವುದಾಗಿ ವೇದಿಕೆಯಲ್ಲೇ ವಿವಿಧ ಬ್ಯಾಂಕ್‌ಗಳು ರಾಜ್ಯ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದವು.ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಸಂಜೆ ಜಾಗತಿಕ ಹೂಡಿಕೆದಾರರ ಸಮಾವೇಶ-2012ರ ಸಮಾರೋಪ ಸಮಾರಂಭ ನಡೆಯಿತು. ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರೊಂದಿಗೆ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು ಸಾಲ ಒದಗಿಸುವ ಭರವಸೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅತ್ಯಧಿಕ ಅಂದರೆ, 50,000 ಕೋಟಿ ರೂಪಾಯಿ ಸಾಲ ಒದಗಿಸುವ ಭರವಸೆ ನೀಡಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ತಲಾ ರೂ 10,000 ಕೋಟಿ ರೂಪಾಯಿ ಸಾಲ ಒದಗಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. ಉಳಿದಂತೆ ಸೆಂಟ್ರಲ್ ಬ್ಯಾಂಕ್, ಆಂಧ್ರಾ ಬ್ಯಾಂಕ್, ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳೂ ಹೂಡಿಕೆದಾರರಿಗೆ ಅವಧಿ ಸಾಲ ಮಂಜೂರು ಮಾಡುವ ಅಭಯ ನೀಡಿವೆ.ಜಪಾನ್ ಮೂಲದ ಬ್ಯಾಂಕ್ ಆಫ್ ಟೋಕಿಯೊ ಮಿತ್ಸುಬಿಷಿ ಇಂಡಿಯಾ ಕೂಡ ರಾಜ್ಯದಲ್ಲಿ ಹೂಡಿಕೆ ಮಾಡುವವರಿಗೆ ಸಾಲ ಒದಗಿಸಲು ಆಸಕ್ತಿ ತೋರಿದೆ. ಖಾಸಗಿ ಸ್ವಾಮ್ಯದ ಕೋಟಕ್ ಮಹಿಂದ್ರಾ ಬ್ಯಾಂಕ್ ಕೂಡ ಸಾಲದ ಭರವಸೆ ನೀಡಿದೆ. ಈ ಎಲ್ಲ ಮೂಲಗಳಿಂದಲೂ ಹೂಡಿಕೆದಾರರಿಗೆ ಮೂರು ಲಕ್ಷ ಕೋಟಿ ರೂಪಾಯಿ ಸಾಲ ದೊರೆಯುವ ಭರವಸೆ ಸಮಾರೋಪ ಸಮಾರಂಭದ ವೇದಿಕೆಯಲ್ಲೇ ಲಭ್ಯವಾಯಿತು.`ನೇರವಾಗಿ ಸಂಪರ್ಕಿಸಿ~: ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಹೂಡಿಕೆದಾರರ ಸಮಾವೇಶಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ನನಗೆ ಸಂತಸವಾಗಿದೆ. ನಮ್ಮ ನಿರೀಕ್ಷೆಯನ್ನೂ ಮೀರಿ ಒಪ್ಪಂದಗಳಾಗಿವೆ. ರಾಜ್ಯದಲ್ಲಿನ ಹೂಡಿಕೆ ಅವಕಾಶಗಳನ್ನು ಅವಲೋಕಿಸಿರುವ ಜಪಾನ್ ನಿಯೋಗ ರಾಜ್ಯದ ಸುವರ್ಣ ಕೈಗಾರಿಕಾ ಕಾರಿಡಾರ್, ಪ್ರವಾಸೋದ್ಯಮ ಕಾರಿಡಾರ್‌ಗಳಲ್ಲಿ ಹೂಡಿಕೆಗೆ ಒಲವು ತೋರಿದೆ~ ಎಂದರು. `ಹೂಡಿಕೆದಾರರಿಗೆ ಸಂಪೂರ್ಣ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ಯಾವುದೇ ಹೂಡಿಕೆದಾರರಿಗೆ ಸಮಸ್ಯೆ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಹೂಡಿಕೆ ಒಪ್ಪಂದಗಳ ಅನುಷ್ಠಾನ ಕುರಿತು ಕಾಲಕಾಲಕ್ಕೆ ನಾನೇ ಪರಿಶೀಲನೆ ನಡೆಸುತ್ತೇನೆ. ಯಾರಿಗೂ ಈ ಬಗ್ಗೆ ಅನುಮಾನ ಬೇಡ~ ಎಂದು ಭರವಸೆ ನೀಡಿದರು.ಸರ್ಕಾರಕ್ಕೆ ಸಾಮರ್ಥ್ಯವಿದೆ: ಸಮಾವೇಶದಲ್ಲಿನ ಬೆಳವಣಿಗೆಗಳ ಕುರಿತು ವರದಿ ಮಂಡಿಸಿದ ಎಸ್.ವಿ.ರಂಗನಾಥ್ ಮಾತನಾಡಿ, `ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ ಒದಗಿಸುವ ಆರ್ಥಿಕ ಶಕ್ತಿ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಶಂಕೆ ಬೇಡ. ಅತಿಹೆಚ್ಚಿನ ಸ್ವತಂತ್ರ ಆದಾಯದ ಮೂಲಗಳನ್ನು ಹೊಂದಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದು. ಪ್ರತಿವರ್ಷವೂ ದೊಡ್ಡ ಪ್ರಮಾಣದ ಹಣವನ್ನು ಉಳಿಸಿ, ಅದನ್ನು ಆಸ್ತಿ ನಿರ್ಮಾಣಕ್ಕೆ ತೊಡಗಿಸಲಾಗುತ್ತಿದೆ~ ಎಂದರು.

 

`ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ನಿಗಾ ಇಡಲು `ಮೂಲಸೌಕರ್ಯ ಮಂಡಳಿ~ ಅಸ್ತಿತ್ವಕ್ಕೆ ತರುವ ಯೋಚನೆ ಇದೆ. ಈ ಸಂಬಂಧ ಹೊಸ ಮಸೂದೆಯೊಂದನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ. ಹೂಡಿಕೆ ಒಪ್ಪಂದಗಳ ಜಾರಿಗೆ ಅಗತ್ಯವಿರುವ ಕ್ರಮ ಕೈಗೊಳ್ಳುವುದನ್ನೂ `ಸಕಾಲ~ ಯೋಜನೆ ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ~ ಎಂದು ತಿಳಿಸಿದರು.ಬಾಷ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ವಿ.ವಿಶ್ವನಾಥನ್, ನಾರಾಯಣ ಹೃದಯಾಲದ ಮುಖ್ಯಸ್ಥ ಡಾ.ದೇವಿಪ್ರಸಾದ್ ಶೆಟ್ಟಿ, ವಿಜಯಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉಪೇಂದ್ರ ಕಾಮತ್, ಭೋರುಕಾ ಪವರ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅಗರವಾಲ್, ಕೆನರಾ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್, ಜೆ.ಕೆ. ಟೈರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ ಮತ್ತಿತರರು ಹೂಡಿಕೆದಾರರಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ಲಾಘಿಸಿದರು. ಹುಡ್ಕೊ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.