ಗುರುವಾರ , ಮೇ 19, 2022
24 °C

ಹೂತಿಟ್ಟ ಶವ ಹೊರಕ್ಕೆ: ಮರಣೋತ್ತರ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ಕೊಲೆ ಮಾಡಿ ಜಮೀನಿನಲ್ಲಿ ಹೂತುಹಾಕಿ ಜೋಳದ ಬೆಳೆ ಬೆಳೆದಿದ್ದ ದ್ಯಾವಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆಯಲಾಯಿತು.ಕೊಲೆಯಾದ ವ್ಯಕ್ತಿ ಕುಮಾರ (35) ಧರಿಸಿದ್ದ ಬಟ್ಟೆ ಚಿಂದಿಯಾಗಿದ್ದವು. ಆತ ಧರಿಸಿದ್ದ ಬೂಟುಗಳು ಶವದ ಜೊತೆಯಲ್ಲಿ ಪತ್ತೆಯಾಗಿವೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಕೆಲವು ಭಾಗದಲ್ಲಿ ಹುಳು ಮಾಂಸವನ್ನು ತಿಂದು ಹಾಕಿದ್ದು, ಮೂಳೆಗಳು ಮಾತ್ರ ದೊರಕಿವೆ. ಶವ ಹೊರತೆಗೆಯುವ ಸಂದರ್ಭದಲ್ಲಿ ಕೊಲೆ ಆರೋಪಿ ಹರೀಶನನ್ನು ಪೊಲೀಸ್ ಪಹರೆಯಲ್ಲಿ ಸ್ಥಳಕ್ಕೆ ಕರೆತರಲಾಗಿತ್ತು. ಭೂಮಿಯಿಂದ ಹೊರತೆಗೆದ ಶವ ವೀಕ್ಷಿಸಲು ಸಾವಿರಾರು ಜನರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದ್ದರು.ಹಾಸನದಿಂದ ಆಗಮಿಸಿದ್ದ ವಿಶೇಷ ತಜ್ಞ ವೈದ್ಯ ಡಾ.ಶಿವಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಶವದ ಕೆಲವು ಭಾಗಗಳನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸ ಲಾಯಿತು.ಕೊಲೆಯಾದ ವ್ಯಕ್ತಿಯ ಪತ್ನಿ ರಾಧಾ ಎರಡು ದಿನದ ಹಿಂದೆ ಬೇಲೂರು ನ್ಯಾಯಾಲಯದ ಮುಂದೆ ವಿಷ ಸೇವಿಸಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಳು. ರಾಧಾ ಕೊಲೆ ಆರೋಪಿ ಹರೀಶನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಹೀಗಾಗಿ ಹರೀಶ ನೊಂದಿಗೆ ರಾಧಾ ಸಹ ಕೊಲೆ ಆರೋಪದಲ್ಲಿ ಶಾಮಿಲಾಗಿರಬಹುದು. ಮುಂದಿನ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿದೆ.ಉಪ ವಿಭಾಗಾಧಿಕಾರಿ ಪಲ್ಲವಿ ಅಕುರಾತಿ, ಎಸ್‌ಪಿ ಅಮಿತ್ ಸಿಂಗ್, ಹೆಚ್ಚುವರಿ ಎಸ್‌ಪಿ ಪ್ರಭಾಕರ್, ಡಿವೈಎಸ್‌ಪಿ ಜೆ.ಕೆ.ರಶ್ಮಿ, ಸಿಪಿಐ ಬಿ.ಕೆ.ಮಂಜಯ್ಯ, ಪಿಎಸ್‌ಐ ರವಿಕುಮಾರ್ ಮತ್ತಿತರ ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದ್ದು, ಶವ ಹೊರತೆಗೆಸುವ  ಪ್ರಕ್ರಿಯೆ ನಡೆಸಿತು.ಆಟೊ ಮಗುಚಿ 10 ಮಂದಿಗೆ ಗಾಯ

ಹಳೇಬೀಡು: ನರಸೀಪುರದಿಂದ ಹಳೇಬೀಡಿಗೆ ಆಗಮಿಸುತ್ತಿದ್ದ ಅಟೋರಿಕ್ಷಾ ಮಗುಚಿ ಬಿದ್ದು 10 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಪಟ್ಟಣದಲ್ಲಿ  ನಡೆಯಿತು.ಗಾಯಗೊಂಡವರನ್ನು ಹಳೇಬೀಡು ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಒಬ್ಬರು ವೈದ್ಯರು ಮಾತ್ರ ಕಾರ್ಯನಿರ್ವಹಿಸು ತ್ತಿರುವುದರಿಂದ ಪ್ರಾಥಮಿಕ ಚಿಕಿತ್ಸೆ ನಡೆಸುವುದಕ್ಕೂ ತೊಂದರೆಯಾಯಿತು. ಗಾಯಗೊಂಡವರನ್ನು ತಕ್ಷಣ ಅಂಬುಲೆನ್ಸ್‌ನಲ್ಲಿ ಹಾಸನ ಆಸ್ಪತ್ರೆಗೆ ರವಾನಿಸಲಾಯಿತು.ವೈದ್ಯರ ಕೊರತೆಯಿಂದ ಹಳೇಬೀಡು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ರೋಗಿಗೂ ಚಿಕಿತ್ಸೆ ದೊರಕುವುದು ಮರೀಚಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.