ಭಾನುವಾರ, ಡಿಸೆಂಬರ್ 15, 2019
23 °C

ಹೂಬನದಲ್ಲಿ ಸುಳಿದಾಡಿದ ಲಕ್ಷ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂಬನದಲ್ಲಿ ಸುಳಿದಾಡಿದ ಲಕ್ಷ ಜನ

ಬೆಂಗಳೂರು: ತೋಟಗಾರಿಕೆ ಇಲಾಖೆಯು ಗಣರಾಜ್ಯೋತ್ಸವದ ಅಂಗವಾಗಿ ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ವಿಶೇಷ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ರಜೆ ದಿನವಾದ ಭಾನುವಾರ ಜನಸಾಗರವೇ ಹರಿದು ಬಂದಿತು. ಕಿಕ್ಕಿರಿದ ಜನಸಂದಣಿಯಿಂದ ಉದ್ಯಾನ ತುಂಬಿ ತುಳುಕಿತು.ಸುಮಾರು 1.03 ಲಕ್ಷ ಮಂದಿ ಭಾನುವಾರ ಉದ್ಯಾನಕ್ಕೆ ಭೇಟಿ ನೀಡಿದ್ದರು. ಇದು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲಿ ಇದುವರೆಗಿನ ದಾಖಲೆ ಎನ್ನಬಹುದು.  ಫಲಪುಷ್ಪ ಪ್ರದರ್ಶನ ಆರಂಭವಾದ ಮೊದಲ ದಿನ (ಜ. 20) 15 ಸಾವಿರ ಮಂದಿ ಭೇಟಿ ಕೊಟ್ಟರೆ, ಎರಡನೇ ದಿನ 35 ಸಾವಿರ ಮಂದಿ ಪ್ರದರ್ಶನ ವೀಕ್ಷಿಸಿದರು. ಭಾನುವಾರ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನ ಲಾಲ್‌ಬಾಗ್‌ನತ್ತ ಹೆಜ್ಜೆ ಹಾಕಿದ್ದು ಕಂಡು ಬಂದಿತು. ಸುಮಾರು 4.30ರ ವೇಳೆಗೆ 56 ಸಾವಿರ ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದರು. ಮುಕ್ತಾಯದ ವೇಳೆಗೆ ಈ ಸಂಖ್ಯೆ 1.03 ಲಕ್ಷಕ್ಕೇರಿತು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಂ. ಜಗದೀಶ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ಪ್ರಮುಖ ಆಕರ್ಷಣೆಯಾಗಿರುವ ಗಾಜಿನ ಮನೆ ಸುತ್ತಮುತ್ತ ಹೆಜ್ಜೆಯಿಡಲು ಕೂಡ ಜಾಗವಿರಲಿಲ್ಲ. ಗಾಜಿನಮನೆಯ ಎಡ ಭಾಗದಲ್ಲಿ ಸುಮಾರು 300 ಮೀಟರ್ ಹಾಗೂ ಬಲಗಡೆ ಅರ್ಧ ಕಿ.ಮೀ.ವರೆಗೆ ಜನ `ಕ್ಯೂ~ನಲ್ಲಿ ನಿಂತು ಸಸ್ಯರಾಶಿಯ ಸೊಬಗನ್ನು ಕಣ್ತುಂಬಿಕೊಂಡರು.ವಾಹನ ಸಂಚಾರ ಅಸ್ತವ್ಯಸ್ತ: ವಿಶೇಷ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಸಿದ್ದಾಪುರ ರಸ್ತೆ, ಕೆ.ಎಚ್. ರಸ್ತೆ ಸೇರಿದಂತೆ ಲಾಲ್‌ಬಾಗ್ ಸುತ್ತಮುತ್ತಲಿನ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಇನ್ನು ಕೆ.ಎಚ್. ರಸ್ತೆ ಹಾಗೂ ಸಿದ್ದಾಪುರ ರಸ್ತೆ ಕಡೆಯಿಂದ ಬರುವಂತಹ ವಾಹನಗಳಿಗೆ ಉದ್ಯಾನದೊಳಗೆ ಪ್ರತ್ಯೇಕ ಕಡೆಗಳಲ್ಲಿ ಕಲ್ಪಿಸಲಾಗಿದ್ದ ವಾಹನ ನಿಲುಗಡೆ ಜಾಗ ಭರ್ತಿಯಾಗಿತ್ತು. ಪರಿಣಾಮ, ಪಾರ್ಕಿಂಗ್ ಜಾಗದಲ್ಲಿ ಸ್ಥಳಾವಕಾಶ ಲಭ್ಯವಾಗುವವರೆಗೆ ಯಾವುದೇ ವಾಹನಗಳನ್ನು ಒಳಗೆ ಬಿಡುತ್ತಿರಲಿಲ್ಲ. ಇದರಿಂದಾಗಿ ಬಹಳಷ್ಟು ಜನ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಪರದಾಡುವಂತಾಯಿತು. ಅಲ್ಲದೆ, ಲಾಲ್‌ಬಾಗ್ ಪ್ರವೇಶ ದ್ವಾರಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೂ ತೀವ್ರ ತೊಂದರೆಯಾಯಿತು.ಹೂಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಆಕರ್ಷಣೆಯಾಗಿರುವ, ಲಕ್ಷಾಂತರ ಹೂಗಳಿಂದ ಅಲಂಕೃತವಾದ ಬೌದ್ಧ ಸ್ತೂಪದ ಹೂಗಳನ್ನು ಸೋಮವಾರ ಸಂಜೆ ಬದಲಿಸಲಾಗುತ್ತಿದೆ. `ಹೂ ನದಿ~ಯ ಹೂಗಳನ್ನು ಗಣರಾಜ್ಯೋತ್ಸವದ ಮುನ್ನಾ ದಿನವಾದ ಬುಧವಾರ ಬದಲಿಸಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.ಪರಿಸರ ಸ್ನೇಹಿ ವಾಹನಗಳ ಸೌಲಭ್ಯ: ಇನ್ನು, ಉದ್ಯಾನದಲ್ಲಿ ಓಡಾಡಲು ಸಾಧ್ಯವಾಗದೆ ವಾಹನಗಳಲ್ಲಿ ಸಂಚರಿಸಲಿರುವ ಜನರ ಅನುಕೂಲಕ್ಕಾಗಿ 12 ಆಸನಗಳ ಮೂರು `ಪರಿಸರ ಸ್ನೇಹಿ~ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ. ಒಬ್ಬರಿಗೆ 100 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಹಿರಿಯರು ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಪ್ರತ್ಯೇಕ ವಾಹನವೊಂದನ್ನು ಮೀಸಲಿಡಲಾಗಿದೆ. ಇದರ ಟಿಕೆಟ್ ದರ 50 ರೂಪಾಯಿ.

ಈ ಬಾರಿಯ ಫಲಪುಷ್ಪ ಪ್ರದರ್ಶನವು ಮೈಸೂರು ಉದ್ಯಾನ ಕಲಾ ಸಂಘದ ನೂರನೇ ಪ್ರದರ್ಶನ.ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘವು ಅತ್ಯಂತ ಆಕರ್ಷಕ ಹಾಗೂ ವೈಭವಯುತವಾಗಿ ಪ್ರದರ್ಶನ ಏರ್ಪಡಿಸಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಜನ ಉದ್ಯಾನಕ್ಕೆ ಲಗ್ಗೆಯಿಡುತ್ತಿದ್ದಾರೆ. ಜ. 29ರವರೆಗೆ ಪ್ರದರ್ಶನ ನಡೆಯಲಿದೆ. ಬಗೆ ಬಗೆಯ ಆಕರ್ಷಕ ಹೂಗಳಿಗೆ ಮನಸೋಲುತ್ತಿರುವ ಜನತೆ, ಪುಷ್ಪರಾಶಿಯ ಸೊಬಗಿಗೆ ಮಾರು ಹೋಗುತ್ತಿದ್ದಾರೆ.ಗಣರಾಜ್ಯೋತ್ಸವ ದಿನ (ಜ. 26) ಹಾಗೂ ಫಲಪುಷ್ಪ ಪ್ರದರ್ಶನದ ಕೊನೇ ದಿನ (ಜ. 29) ಕೂಡ ಒಂದು ಲಕ್ಷಕ್ಕಿಂತಲೂ ಅಧಿಕ ಜನರು ಉದ್ಯಾನಕ್ಕೆ ಭೇಟಿ ನೀಡಬಹುದು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.ಭಾನುವಾರ ಸಂಜೆ ಲಾಲ್‌ಬಾಗ್‌ನ `ವಾದ್ಯ ರಂಗ~ದಲ್ಲಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಗಾಯಕರಾದ ವೈ.ಕೆ. ಮುದ್ದುಕೃಷ್ಣ, ರತ್ನಮಾಲಾ ಪ್ರಕಾಶ್, ಕಿಕ್ಕೇರಿ ಕೃಷ್ಣಮೂರ್ತಿ, ಅರ್ಚನಾ ಉಡುಪ ಮತ್ತಿತರರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

 

ಪ್ರತಿಕ್ರಿಯಿಸಿ (+)