ಹೂಳಿನ ಸಮಸ್ಯೆ: ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತ

7

ಹೂಳಿನ ಸಮಸ್ಯೆ: ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತ

Published:
Updated:
ಹೂಳಿನ ಸಮಸ್ಯೆ: ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತ

ಕಾರವಾರ: ಜಟ್ಟಿಯಲ್ಲಿ ಹೂಳು ತುಂಬಿದ್ದರಿಂದ ಸರಕು ಸಾಗಣೆ ಹಡಗುಗಳ ಆಗಮನ ನಿರ್ಗಮನ ಸಮಸ್ಯೆ ಎದುರಿಸುತ್ತಿರುವ ಇಲ್ಲಿಯ ಬೈತಖೋಲ್ ಅಲಿಗದ್ದಾದಲ್ಲಿರುವ ವಾಣಿಜ್ಯ ಬಂದರು ಈಗ ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಟಗ್ (ಹಡಗು ಎಳೆದು ತರುವ ಬೋಟ್) ಬಾಡಿಗೆ ಪಾವತಿಸದೆ ಇರುವ ಹಿನ್ನೆಲೆಯಲ್ಲಿ ಟಗ್‌ನ ಸೇವೆ ಸ್ಥಗಿತಗೊಂಡಿದೆ.

ಟಗ್ ಸೇವೆ ಸ್ಥಗಿತಗೊಂಡಿದ್ದರಿಂದ ಬಂದರಿನೊಳಗೆ ವಹಿವಾಟು ಸ್ಥಗಿತಗೊಂಡಿದ್ದು ಬಿಕೋ ಎನ್ನುತ್ತಿದೆ. ಸರಕು ಸಾಗಣೆ ಹಡಗು ಕಾರವಾರ ಬಂದರಿನ ಸರಹದ್ದಿಗೆ ಬಂದ ನಂತರ ಹಡಗನ್ನು ಬಂದರಿಗೆ ಎಳೆದು ತರಲು ಹಾಗೂ ಹಡಗು ತಿರುವು ಪಡೆಯಲು ಟಗ್‌ನ ಅವಶ್ಯಕತೆ ಇದೆ. ಈ ಕಾರಣಕ್ಕಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಬಾಡಿಗೆ ಆಧಾರದ ಮೇಲೆ ಟಗ್ ಸೇವೆ ಪಡೆದುಕೊಂಡಿದೆ.

ಕಾರವಾರ ವಾಣಿಜ್ಯ ಬಂದರಿಗೆ ಮುಂಬೈನ ಆರ್.ಆರ್. ಶಿಪ್ಪಿಂಗ್ ದಿನಕ್ಕೆ ರೂ. 81 ಸಾವಿರ ಬಾಡಿಗೆ ಆಧಾರದ ಮೇಲೆ ಟಗ್ ಸೇವೆ ಒದಗಿಸುತ್ತಿದೆ. ಟಗ್ ಬಾಡಿಗೆ ಪಡೆದುಕೊಂಡ ಹಿನ್ನೆಲೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಆರ್. ಆರ್. ಶಿಪ್ಪಿಂಗ್‌ಗೆ ಎರಡು ತಿಂಗಳ ಬಾಡಿಗೆ ಒಟ್ಟು ರೂ. 3.58 ಕೋಟಿ ಹಣ ಪಾವತಿ ಮಾಡಬೇಕಾಗಿದೆ.

ಬಾಡಿಗೆ ಪಾವತಿ ಆಗದೇ ಇರುವ ಹಿನ್ನೆಲೆಯಲ್ಲಿ ಆರ್.ಆರ್.ಶಿಪ್ಪಿಂಗ್ ಬಂದರು ಇಲಾಖೆ ನೀಡುತ್ತಿರುವ ಸೇವೆಯನ್ನು ನಿಲ್ಲಿಸಿದೆ. ಬಾಡಿಗೆ ಪಡೆವ ಕುರಿತು ಆರ್.ಆರ್.ಶಿಪ್ಪಿಂಗ್ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ಬಂದರು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿತ್ತು. ಆದರೆ ಅಧಿಕಾರಿಗಳು ಸೂಕ್ತ ಉತ್ತರ ನೀಡದೇ ಇರುವುದರಿಂದ ಟಗ್ ಸೇವೆ ನಿಲ್ಲಿಸಲು ಶಿಪ್ಪಿಂಗ್ ನಿರ್ಧರಿಸಿದೆ. ಟಗ್ ಸೇವೆ ನಿಂತಿದ್ದರಿಂದ ಕಾರವಾರ ವಾಣಿಜ್ಯ ಬಂದರಿನಲ್ಲಿ ಹಡಗುಗಳ ಆಗಮನ ನಿಂತಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ. ಟಗ್‌ನ ಬಾಡಿಗೆ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ ಬಂದರಿನಲ್ಲಿ  ವಹಿವಾಟು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಬಂದರು ಬಳಕೆದಾರರ ಸಂಘ ಸರಕಾರವನ್ನು ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry