ಹೂಳು: ಆಯಾ ತಿಂಗಳಲ್ಲೇ ಹಣ

7

ಹೂಳು: ಆಯಾ ತಿಂಗಳಲ್ಲೇ ಹಣ

Published:
Updated:
ಹೂಳು: ಆಯಾ ತಿಂಗಳಲ್ಲೇ ಹಣ

ಬೆಂಗಳೂರು: ವಾರ್ಡ್ ವ್ಯಾಪ್ತಿಯಲ್ಲಿ ನಡೆಯುವ ಹೂಳು ತೆಗೆಯುವ (ಸಿಲ್ಟ್ ಮತ್ತು ಟ್ರ್ಯಾಕ್ಟರ್ ಯೋಜನೆ) ಕಾಮಗಾರಿಗೆ ಆಯಾ ತಿಂಗಳಲ್ಲೇ ಗುತ್ತಿಗೆ ಮೊತ್ತ ಪಾವತಿಸಲು ಬುಧವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಕಳೆದ ಕೆಲವು ವರ್ಷಗಳಿಂದ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಕಾಮಗಾರಿ ಪರಿಶೀಲಿಸಿ 15 ದಿನಗಳಲ್ಲಿ ಪಾವತಿ ಮಾಡಬೇಕು ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಆಯುಕ್ತರಿಗೆ ಸೂಚನೆ ನೀಡಿದರು.

ಮಧ್ಯಾಹ್ನ 12ಕ್ಕೆ ಸಭೆ ಆರಂಭ ಆಗುತ್ತಿದ್ದಂತೆಯೇ ಎದ್ದುನಿಂತ ಕಾಂಗ್ರೆಸ್ ಸದಸ್ಯರು ಸಿಲ್ಟ್ ಮತ್ತು ಟ್ರ್ಯಾಕ್ಟರ್ ಯೋಜನೆ ಬಾಕಿ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳದ ಹೊರತು ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.`ವಾರ್ಡ್ ಮಟ್ಟದಲ್ಲಿ ನಡೆಯುವ ಈ ಸಣ್ಣ ಕೆಲಸವನ್ನು ಅನಗತ್ಯವಾಗಿ ಅಕ್ರಮ ಹೂಳು ಕಾಮಗಾರಿ ಜೊತೆಗೆ ತಳಕು ಹಾಕಲಾಗಿದ್ದು, ಬಡ ಗುತ್ತಿಗೆದಾರರಿಗೆ ತೊಂದರೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಹನುಮಂತನಗರದ ಭಾಸ್ಕರ್ ಎನ್ನುವ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ದೂರಿದರು.ಈ ಮಧ್ಯೆ `ಕಾಂಗ್ರೆಸ್ ಮುಖಂಡರ ವಿರುದ್ಧ ಪತ್ರಿಕಾ ಗೋಷ್ಠಿ ನಡೆಸಿ ಆರೋಪ ಮಾಡಿದ ಬಿಜೆಪಿ ಸದಸ್ಯ ಎನ್.ಆರ್. ರಮೇಶ, ಇಂತಹ ವಿವರ ನೀಡಲು ಬಬಿಎಂಪಿ ಕಚೇರಿ ಬಳಸಿಕೊಂಡಿದ್ದೇಕೆ' ಎಂದು ಆರ್. ಸಂಪತ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಸದನದ ಬಾವಿಗೆ ಧಾವಿಸಿ ಧರಣಿ ಕುಳಿತರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಗದ್ದಲದ ನಡುವೆ ಮೇಯರ್ ಸಭೆಯನ್ನು ಮೂರು ಗಂಟೆ ಕಾಲ ಮುಂದೂಡಿದರು. ಮಧ್ಯಾಹ್ನ 3 ಗಂಟೆಗೆ ಪುನಃ ಸಭೆ ಆರಂಭವಾದಾಗ ಸಿಲ್ಟ್ ಮತ್ತು ಟ್ರ್ಯಾಕ್ಟರ್ ಯೋಜನೆ ಮತ್ತೆ ಪ್ರತಿಧ್ವನಿಸಿತು. ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, ಕಾಂಗ್ರೆಸ್‌ನ ಉದಯಶಂಕರ್ ಮತ್ತಿತರರು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.`ಸರ್ಕಾರಕ್ಕೆ ಸಲ್ಲಿಕೆಯಾದ ಮಹಾಲೆಕ್ಕಪಾಲರ (ಸಿಎಜಿ) ವರದಿಯಲ್ಲಿ ಹೂಳು ತೆಗೆಯುವ ಕಾಮಗಾರಿ ವ್ಯಾಪಕ ಅಕ್ರಮಗಳಿಂದ ಕೂಡಿದೆ ಎನ್ನುವ ಆಪಾದನೆ ಮಾಡಲಾಗಿದೆ. ಒಂದೆಡೆ ಹೈಕೋರ್ಟ್‌ನಲ್ಲೂ ಈ ವಿಷಯದ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಇನ್ನೊಂದೆಡೆ ಜಂಟಿ ಸದನ ಸಮಿತಿ ಮುಂದೆಯೂ ಈ ವಿಚಾರ ಇದೆ. ಎರಡೂ ಕಡೆಗಳಿಂದ ಸ್ಪಷ್ಟ ನಿರ್ದೇಶನ ಬರುವವರೆಗೆ ಯಾವುದೇ ಆತುರದ ಕ್ರಮ ಕೈಗೊಳ್ಳುವುದು ಉಚಿತವಲ್ಲ' ಎಂದು ಆಯುಕ್ತರು ಹೇಳಿದರು.`ವಲಯವೊಂದದಲ್ಲಿ ಹೂಳು ತೆಗೆಯಲು  ರೂ.20 ಕೋಟಿ ಬಿಲ್ ಹಾಕಲಾಗಿದೆ. ಅವುಗಳೆಲ್ಲ ಸುಳ್ಳು ಬಿಲ್‌ಗಳಾಗಿದ್ದು, ಯಾವುದೇ ಕೆಲಸ ನಡೆದಿಲ್ಲ. ಅಂದಾಜು ಪತ್ರಿಕೆ ತಯಾರಿಸದೆ ಬೇಕಾಬಿಟ್ಟಿ ಹಣ ಪಾವತಿ ಮಾಡಲಾಗಿದೆ ಎಂಬ ಅಭಿಪ್ರಾಯ ವರದಿಯಲ್ಲಿದೆ. ಆದ್ದರಿಂದಲೇ ಎಚ್ಚರಿಕೆ ಹೆಜ್ಜೆ ಇಡುವುದು ಒಳಿತು' ಎಂದು ಪ್ರತಿಪಾದಿಸಿದರು.`ಅಕ್ರಮ ಕಾಮಗಾರಿಗೂ ಚರಂಡಿ ಹೂಳು ತೆಗೆಯುವುದಕ್ಕೂ ಸಂಬಂಧ ಕಲ್ಪಿಸುವುದು ಉಚಿತವಲ್ಲ. ಗುತ್ತಿಗೆದಾರರು ತಮ್ಮ ಆಸ್ತಿಯನ್ನು ಒತ್ತೆಯಿಟ್ಟು ಜೀವನ ಸಾಗಿಸುತ್ತಿದ್ದು, ವರ್ಷಗಳಿಂದ ಉಳಿಸಿಕೊಂಡಿರುವ ಬಾಕಿ ಹಣವನ್ನು ಪಾವತಿ ಮಾಡಬೇಕು' ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.ನೂತನ ಸದಸ್ಯರ ಪ್ರಮಾಣ ವಚನ

ಬೆಂಗಳೂರು:
ಬಿಬಿಎಂಪಿಗೆ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಐವರು ಸದಸ್ಯರು ಬುಧವಾರ ನಡೆದ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವರಿಗೂ ಮೇಯರ್ ಡಿ. ವೆಂಕಟೇಶಮೂರ್ತಿ ಪ್ರಮಾಣ ವಚನ ಬೋಧಿಸಿದರು.ಅಕ್ಕಿಪೇಟೆಯ ಗೌರಮ್ಮ, ದೊಮ್ಮಲೂರಿನ ಸಿ. ನಾಗರಾಜ್, ವಿದ್ಯಾರಣ್ಯಪುರದ ಕೆ. ಪ್ರಕಾಶ್, ಎಚ್‌ಬಿಆರ್ ಲೇಔಟ್‌ನ ಲತಾ ಮಲ್ಯ ಮತ್ತು ಚೆನ್ನಕೇಶವನಗರದ ಎಸ್.ಶ್ರೀನಿವಾಸ್ ನಾಮನಿರ್ದೇಶನಗೊಂಡ ಸದಸ್ಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry