ಹೂಳೆತ್ತಲು ನಿಗಮ ಸಿದ್ಧತೆ; ನೀರು ಬಿಡಲು ರೈತರ ಆಗ್ರಹ

ಬುಧವಾರ, ಜೂಲೈ 24, 2019
24 °C

ಹೂಳೆತ್ತಲು ನಿಗಮ ಸಿದ್ಧತೆ; ನೀರು ಬಿಡಲು ರೈತರ ಆಗ್ರಹ

Published:
Updated:

ಮಂಡ್ಯ: ನಾಲೆಗಳ ಹೂಳೆತ್ತುವ ಹಾಗೂ ಜಂಗಲ್ ಕಟಿಂಗ್ ಮಾಡುವ ಕೆಲಸವನ್ನು ಕಾವೇರಿ ನೀರಾವರಿ ನಿಗಮ ಕೈಗೆತ್ತಿಕೊಂಡಿದೆ. ರೈತರು ನೀರು ಬಿಡಬೇಕು ಎಂದು ಆಗ್ರಹಿಸುತ್ತಿರುವಾಗಲೇ ಕಾಮಗಾರಿ ಕೈಗೆತ್ತಿಕೊಂಡಿರುವುದು ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಮುಂದಾದಂತಿದೆ.ನೀರು ಹರಿಸಬೇಕಾದ ಸಂದರ್ಭದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರ ಉದ್ದೇಶದ ಬಗೆಗೆ ರೈತ ಮುಖಂಡರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಹಣ ಪೋಲಾಗುವ ಆತಂಕವೂ ಅವರನ್ನು ಕಾಡುತ್ತಿದೆ.2012ರ ಡಿಸೆಂಬರ್ ಅಂತ್ಯಕ್ಕೆ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾಲೆಯಲ್ಲಿ ಜಂಗಲ್ ಕಟಿಂಗ್ ಹಾಗೂ ಹೂಳೆತ್ತುವ ಕಾಮಗಾರಿ ಆರಂಭಿಸಿದ್ದಾರೆ.ನಿಗಮದ ಕೃಷ್ಣರಾಜಸಾಗರ ವಿಭಾಗದ ವತಿಯಿಂದ 75 ಲಕ್ಷ ರೂ ವೆಚ್ಚದಲ್ಲಿ 47 ಕಾಮಗಾರಿಗಳಿಗೆ ಹಾಗೂ ವಿಶ್ವೇಶ್ವರಯ್ಯ ನಾಲಾ ವಿಭಾಗದ ವತಿಯಿಂದ 1.17 ಕೋಟಿ ರೂ ವೆಚ್ಚದಲ್ಲಿ 49 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಕಾಮಗಾರಿಗಳಿಗಾಗಿ ಜೂನ್14 ರಂದು ಟೆಂಡರ್ ಕರೆಯಲಾಗಿದ್ದು, ಜೂನ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಜೂನ್ 28 ರಂದು ಟೆಂಡರ್ ತೆರೆಯಲಾಗಿದ್ದು, ಬುಧವಾರವಷ್ಟೇ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು 21ರಿಂದ 30 ದಿನ ಕಾಲಾವಕಾಶ ನೀಡಲಾಗಿದೆ.ಟೆಂಡರ್‌ನಲ್ಲಿ ಪ್ರತಿ ಕೆಲಸಕ್ಕೂ ಶೇಕಡಾ 20 ರಿಂದ 47ರವರೆಗೂ ದರವನ್ನು ಕೆಳಗೆ ನಮೂದಿಸಲಾಗಿದೆ. ಇದು ಕಾಮಗಾರಿ ಮಾಡುವಿಕೆ ಹಾಗೂ ವೆಚ್ಚದ ಅಂದಾಜು ಮಾಡಿರುವ ಬಗೆಗೆ ಅನುಮಾನವನ್ನು ಹುಟ್ಟುಹಾಕುತ್ತದೆ.ಸಲಹಾ ಸಮಿತಿ ಸಭೆ: ಕಳೆದ ಬಾರಿ ಡಿಸೆಂಬರ್‌ನಲ್ಲಿಯೇ ನೀರು ನಿಲ್ಲಿಸಲಾಗಿತ್ತು. ಈ ಬಾರಿ ಕೂಡಲೇ ನೀರು ಬಿಡಬೇಕು ಎಂಬ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಕಾವೇರಿ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಜುಲೈ 5ಕ್ಕೆ ಕರೆಯಲಾಗಿದೆ. ಆ ಸಭೆಯಲ್ಲಿ ಕಾಲುವೆಗಳಿಗೆ ಎಂದಿನಿಂದ ನೀರು ಹರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.ಮೊದಲು ಮ್ಯಾನ್ಯುವೆಲ್ ಮಾಡಲು ಯೋಜಿಸಿದ್ದೇವು. ನಂತರ ಮೇಲಾಧಿಕಾರಿಗಳ ಆದೇಶದಂತೆ ಯಂತ್ರಗಳ ಮೂಲಕ ಮಾಡಲು ನಿರ್ಧರಿಸಿದ್ದೇವೆ. ಜಂಗಲ್ ಬಹಳ ಬೇಗನೆ ಕಟಿಂಗ್ ಮಾಡಿದರೆ ಮತ್ತೆ ಬೆಳೆಯುತ್ತದೆ. ಜತೆಗೆ ವಿಧಾನಸಭೆ ಚುನಾವಣೆಯೂ ಇದ್ದದ್ದರಿಂದ ವಿಳಂಬವಾಗಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.ರೈತ ಸಂಘದ ಗಡುವು: ಕಾಲುವೆಗಳಿಗೆ ಜುಲೈ 5 ರೊಳಗೆ ನೀರನ್ನು ಹರಿಸದಿದ್ದರೆ, ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಈಗಾಗಲೇ ಎಚ್ಚರಿಸಿದ್ದಾರೆ. ಸಲಹಾ ಸಮಿತಿಯಲ್ಲಿ ಅವರೂ ಇರುವುದರಿಂದ ಅದನ್ನೇ ಪ್ರತಿಪಾದಿಸಲಿದ್ದಾರೆ. ಅದನ್ನು ತಿರಸ್ಕರಿಸಿ ರೈತರ ಕೋಪಕ್ಕೆ ತುತ್ತಾಗಲು ಯಾವ ಜನಪ್ರತಿನಿಧಿಯೂ ಮುಂದಾಗುವುದಿಲ್ಲ.ವಿಶ್ವೇಶ್ವರಯ್ಯ ಸೇರಿದಂತೆ ವಿವಿಧ ನಾಲೆಗಳ ಆಧುನೀಕರಣ ಕಾಮಗಾರಿಯೂ ವಿಳಂಬವಾಗಿದೆ. ಜಂಗಲ್ ಕಟಿಂಗ್ ಬಹಳ ಬೇಗ ಮಾಡಲಾಗುವುದಿಲ್ಲ ಎನ್ನುವುದು ಸರಿ. ಆದರೆ, ಜೂನ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಈಗಷ್ಟೇ ಮಾಡುತ್ತಿರುವುದನ್ನು ನೋಡಿದರೆ, ನೀರು ಬಿಟ್ಟು ಕಾಮಗಾರಿ ಮಾಡಲಾಗಿದೆ ಎಂದು ಹಣ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು.ಒಂದೆಡೆ ಹಣದ ದುರುಪಯೋಗವಾದರೆ, ಇನ್ನೊಂದೆಡೆ ನೀರು ಬಿಡುವುದನ್ನು ವಿಳಂಬ ಮಾಡುವ ಮೂಲಕ ತಮಿಳುನಾಡಿಗೆ ನೀರು ಹರಿಸುವ ಹುನ್ನಾರವೂ ಇರಬಹುದು ಎನ್ನುವ ಆತಂಕವನ್ನು ಅವರು ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry