ಹೂವಿನ ತೇರು, ಗೋವಿನ ಹಾಡು

7

ಹೂವಿನ ತೇರು, ಗೋವಿನ ಹಾಡು

Published:
Updated:

ಬೆಂಗಳೂರು:   ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ

ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು...77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪುಣ್ಯಕೋಟಿ ಮಿಂಚಲಿದ್ದಾಳೆ. ಗಂಗೆ, ಗೌರಿ, ತುಂಗೆ, ಕಾಮಧೇನುವೂ ಬರಲಿದ್ದಾರೆ. ಗೊಂಬೆಗಳ ಮೂಲಕ ಕನ್ನಡದ ಮನೆ ಮಾತಾದ ಗೋವಿನ ಹಾಡು ಮೊಳಗಲಿದೆ.ಅಲಂಕೃತವಾದ ಲಾರಿಯೊಂದರ ಮೇಲೆ ಹೂವು ಹಾಗೂ ಹಸಿರು ಎಲೆಗಳಿಂದ ತಯಾರಿಸಲಾದ ಈ ಸ್ತಬ್ಧಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆ. ಸುಮಾರು 500 ಕೆ.ಜಿ ಹೂವುಗಳನ್ನು ಈ ಸ್ತಬ್ಧಚಿತ್ರಕ್ಕಾಗಿ ಬಳಸಲಾಗಿದೆ.  ಕನ್ನಡ ಧ್ಜಜವನ್ನು ಬಿಂಬಿಸುವ ಕೆಂಪು ಹಾಗೂ ಹಳದಿ ವರ್ಣದ ಹೂವುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಕಾಕಡ, ಕನಕಾಂಬರ, ಗುಲಾಬಿ, ಸುಗಂಧರಾಜ ಹೀಗೆ ವಿವಿಧ ಬಗೆಯ ಹೂಗಳನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.‘ಇದೊಂದು ವಿಶಿಷ್ಟ ಬಗೆಯ ಸ್ತಬ್ಧಚಿತ್ರವಾಗಿದೆ. ಸುಮಾರು 40 ಜನ ಕಲಾವಿದರು ಈ ಕಲಾಕೃತಿ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಮ್ಮೇಳನಾಧ್ಯಕ್ಷ ರಥ ಹೊರತುಪಡಿಸಿದರೆ ಈ ಕಲಾಕೃತಿಗೇ ಹೆಚ್ಚು ಮಹತ್ವ ನೀಡಲಾಗಿದೆ’ ಎಂದು ಕಲಾವಿದ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ಗೊಂಬೆಗಳ ಒಳಗೆ ಯಂತ್ರವನ್ನು ಅಳವಡಿಸಲಾಗಿದ್ದು ಹಿನ್ನೆಲೆಯಲ್ಲಿ ಮೊಳಗುವ ಗೋವಿನ ಹಾಡಿಗೆ ತಕ್ಕಂತೆ ಇವು ‘ನಟಿಸಲಿವೆ’. ಕೊಳಲನ್ನು ಊದುವ ಗೊಲ್ಲ ಕೂಡ ಇಲ್ಲಿರಲಿದ್ದಾನೆ. ಇಡೀ ಕಥೆಯನ್ನು ಹಲವು ದೃಶ್ಯಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಪ್ರತಿಯೊಂದು ದೃಶ್ಯದ ಪಾತ್ರಗಳು ಕಥೆಯ ಸಂಪೂರ್ಣ ಸಾರವನ್ನು ತಿಳಿಸಲಿವೆ.18.5 ಅಡಿ ಎತ್ತರ, 26 ಅಡಿ ಉದ್ದ ಹಾಗೂ 13 ಅಡಿ   ಅಗಲವಿರುವ ಸ್ತಬ್ಧಚಿತ್ರದಲ್ಲಿ ಕಥೆಯ ವಿವಿಧ ಘಟ್ಟಗಳನ್ನು ಪ್ರತಿಬಿಂಬಿಸುವ ಐದು ಹಸುಗಳು, ಮೂರು ಹುಲಿಗಳ ಪ್ರತಿಕೃತಿಗಳನ್ನು ಬಳಸಿಕೊಳ್ಳಲಾಗಿದೆ. ನೈಸರ್ಗಿಕವಾಗಿ ಸಿಗುವ ಗಿಡಮರಗಳನ್ನೇ ಹೆಚ್ಚಾಗಿ ಬಳಸಿರುವುದರಿಂದ ಕಥೆಯ ನೈಜತೆ ಹೆಚ್ಚಿಸಲಿದೆ.ಈ ಸ್ತಬ್ಧಚಿತ್ರದಲ್ಲಿಯೇ ಭುವನೇಶ್ವರಿಯ ವಿಗ್ರಹವನ್ನು ಕೂಡ ಸ್ಥಾಪಿಸಲಾಗಿದೆ. ಮಂಟಪದ ನಾಲ್ಕು ಕಡೆಗಳಲ್ಲಿ ಹೂವಿನ ಕುಚ್ಚುಗಳಿಂದ ಅಲಂಕರಿಸಲಾಗಿದೆ. ‘ಸ್ಥಳಾವಕಾಶ ಇದ್ದರೆ ಸಮ್ಮೇಳನ ಸಭಾಂಗಣದಲ್ಲಿಯೇ ಮೂರು ದಿನಗಳ ಕಾಲ ಸ್ತಬ್ಧಚಿತ್ರಗಳನ್ನು ಇರಿಸಲು ವ್ಯವಸ್ಥೆ ಮಾಡಲಾಗುವುದು. ಇದರಿಂದ ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ದೊರೆಯಲಿದೆ’ ಎಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಮಿತಿ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ತಿಳಿಸಿದರು.‘ಸಮ್ಮೇಳನಾಧ್ಯಕ್ಷರ ರಥವನ್ನು ಪಾರಂಪರಿಕ ಶೈಲಿಯಲ್ಲಿ ವಿಶಿಷ್ಟವಾಗಿ ರೂಪಿಸಲಾಗಿದೆ. ಭಗವದ್ಗೀತೆಯನ್ನು ಬೋಧಿಸುವ ಕೃಷ್ಣನ ರಥವನ್ನು ಇದು ಹೋಲಲಿದೆ’ ಎಂದು ಅವರು ಹೇಳಿದರು.ಇದಲ್ಲದೇ 12 ಅಡಿ ಎತ್ತರವಿರುವ ಅಶ್ವಾರೂಢ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಯ ಎರಡು ಸ್ತಬ್ಧಚಿತ್ರಗಳನ್ನು ಕೂಡ ತಯಾರಿಸಲಾಗುತ್ತಿದೆ. ಒಡೆಯರ ಪ್ರತಿಮೆ ಇರುವ ಸ್ತಬ್ಧಚಿತ್ರದಲ್ಲಿ ರಾಜಮನೆತನಗಳ ಲಾಂಛನ ಹಾಗೂ ಜ್ಞಾನಪೀಠ ಪ್ರಶಸ್ತಿ   ುರಸ್ಕೃತರ ಪ್ರತಿಮೆಗಳು ರಾರಾಜಿಸಲಿವೆ.ದಸರಾ ಶೈಲಿಯಲ್ಲಿ ಅಲಂಕೃತಗೊಂಡ ನಾಲ್ಕು ಆನೆ, ಆರು ಒಂಟೆ, ಹಾಗೂ ಹತ್ತು ಕುದುರೆಗಳನ್ನು ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎಪ್ಪತ್ತೇಳನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ 77 ಮಹಿಳೆಯರು ಹಳದಿ ಕೆಂಪು ಬಣ್ಣದ ಉಡುಪು ತೊಟ್ಟು ಕುಂಭಗಳನ್ನು ಹೊರಲಿದ್ದಾರೆ. ಬಿಎಂಟಿಸಿ, ಬಿಬಿಎಂಪಿ, ಕೆಎಸ್‌ಆರ್‌ಟಿಸಿ, ಕೃಷಿ, ಅರಣ್ಯ, ಪ್ರವಾಸೋದ್ಯಮ, ಶಿಕ್ಷಣ ಇಲಾಖೆಗಳ ಎಂಟು ಸ್ತಬ್ಧಚಿತ್ರಗಳು ಕೂಡ ಮೆರವಣಿಗೆಗೆ ಸಾಥ್ ನೀಡಲಾಗುತ್ತಿದೆ. 47 ಜನಪದ ಕಲಾಪ್ರಕಾರಗಳ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನೂರು ತಮಟೆ ಕಲಾವಿದರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಬಿಬಿಎಂಪಿ ಕಚೇರಿಯಲ್ಲಿ ನಂದಿಧ್ವಜಕ್ಕೆ ಮೇಯರ್ ಎಸ್.ಕೆ. ನಟರಾಜ್ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಲಿದೆ.ಸಿನಿಮಾ ರಂಗದ ಪೋಷಕ ನಟರು ಕನಕದಾಸ, ಪುರಂದರದಾಸ ಸೇರಿದಂತೆ ರಾಜ್ಯದ ಪರಂಪರೆ ಬಿಂಬಿಸುವ ಹಲವು ವ್ಯಕ್ತಿಗಳ ವೇಷ ಧರಿಸಿ ಪ್ರತ್ಯೇಕ ವಾಹನದಲ್ಲಿ ಸಂಚರಿಸಲಿದ್ದಾರೆ. ಇವರ ಹಿಂದೆ ಚಿತ್ರರಂಗದ ಒಂದು ಸ್ತಬ್ಧಚಿತ್ರ ಹಾಗೂ ಚಿತ್ರತಾರೆಯರಿರುವ ಮೂರು ವಾಹನಗಳ ಮೆರವಣಿಗೆ ಸಾಗಲಿದೆ. ಬೆಂಗಳೂರಿನ ಊರ ದೇವತೆ ಅಣ್ಣಮ್ಮದೇವಿ ಉತ್ಸವ ಕೂಡ ನಡೆಯಲಿದ್ದು ಮೆರವಣಿಗೆಯಲ್ಲಿ  ಶಾಲಾ ವಿದ್ಯಾರ್ಥಿಗಳು, ಗೃಹರಕ್ಷಕ ದಳ ಸಿಬ್ಬಂದಿ ಪಾಲ್ಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry