ಮಂಗಳವಾರ, ಮೇ 11, 2021
25 °C

ಹೂವಿನ ಮಾರಾಟ ಸ್ಥಗಿತ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆ.ಆರ್.ಮಾರುಕಟ್ಟೆಯ ಹೂವಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅನಧಿಕೃತ ಮಳಿಗೆಗಳ ನಿರ್ಮಾಣವನ್ನು ತಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ಎರಡು ಗಂಟೆಗಳ ಕಾಲ ಹೂವಿನ ಮಾರಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.`ಕೆ.ಆರ್.ಮಾರುಕಟ್ಟೆಯ ಹೂವಿನ ಮಾರುಕಟ್ಟೆಯ ಪ್ಯಾಸೇಜ್ ಭಾಗದಲ್ಲಿ ಕೆಲವರು ಅಕ್ರಮವಾಗಿ ಮಳಿಗೆಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಒಂಬತ್ತು ಅನಧಿಕೃತ ಮಳಿಗೆಗಳು ನಿರ್ಮಾಣಗೊಂಡಿದ್ದವು. ಈಗ ಮತ್ತೊಂದು ಅನಧಿಕೃತ ಮಳಿಗೆಯ ನಿರ್ಮಾಣ ಕಾರ್ಯ ನಡೆದಿದೆ. ಇದನ್ನು ತಡೆಯುವಂತೆ ಒತ್ತಾಯಿಸಿ ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ~ ಎಂದು ಬೆಂಗಳೂರು ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಂ.ಎಸ್. ರಘುಕುಮಾರ್ ಹೇಳಿದರು.`ನಿತ್ಯ ಸುಮಾರು 40 ರಿಂದ 50 ಲಕ್ಷ ರೂಪಾಯಿಗಳ ವಹಿವಾಟು ನಡೆಯುವ ಹೂವಿನ ಮಾರುಕಟ್ಟೆಯಲ್ಲಿ ಸುಮಾರು 130 ಸಗಟು ಹಾಗೂ ಸುಮಾರು 800 ಚಿಲ್ಲರೆ ಹೂವಿನ ಮಳಿಗೆಗಳು ಮಳಿಗೆಗಳಿವೆ. ಮಾರುಕಟ್ಟೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮಳಿಗೆಗಳಿಂದ ಹಳೆಯ ಮಳಿಗೆಗಳಲ್ಲಿ ವ್ಯಾಪಾರ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಹೂವಿನ ಕಸದ ವಿಲೇವಾರಿ ಹಾಗೂ ಗಾಳಿ ಬೆಳಕಿನ ತೊಂದರೆ ಹೆಚ್ಚಾಗುತ್ತಿದೆ. ಹೀಗಾಗಿ ಹೂವಿನ ವ್ಯಾಪಾರಿಗಳ ಆರೋಗ್ಯ ಕೆಡುತ್ತಿದೆ~ ಎಂದರು.`ಕೆಲವು ಕಿಡಿಗೇಡಿಗಳು ಪ್ರಭಾವಿ ರಾಜಕೀಯ ವ್ಯಕ್ತಿಗಳ ನೆರವಿನಿಂದ ಮಾರುಕಟ್ಟೆಯಲ್ಲಿ ಅನಧಿಕೃತ ಮಳಿಗೆಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ಪ್ಯಾಸೇಜ್ ಭಾಗವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ಮಳಿಗೆ ನಿರ್ಮಿಸಲಾಗುತ್ತಿದೆ. ಇಡೀ ಮಾರುಕಟ್ಟೆಯ ಪ್ಯಾಸೇಜ್ ಭಾಗದಲ್ಲಿ ಸುಮಾರು 130 ಮಳಿಗೆಗಳನ್ನು ನಿರ್ಮಿಸುವ ದುರುದ್ದೇಶ ಬಿಬಿಎಂಪಿಯ ಸದಸ್ಯರೊಬ್ಬರಿಗಿದೆ~ ಎಂದು ಅವರು ಆರೋಪಿಸಿದರು.`ಮಾರುಕಟ್ಟೆಯ ಪ್ಯಾಸೇಜ್ ಭಾಗದಲ್ಲಿ ಯಾವುದೇ ಮಳಿಗೆಗಳನ್ನು ನಿರ್ಮಿಸಬಾರದೆಂದು ಈ ಹಿಂದೆಯೇ ನ್ಯಾಯಾಲಯದ ತಡೆಯಾಜ್ಞೆ ಇದೆ. ಆದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದರೂ ಪೊಲೀಸರಾಗಲೀ, ಬಿಬಿಎಂಪಿ ಅಧಿಕಾರಿಗಳಾಗಲೀ ಮಳಿಗೆಗಳ ನಿರ್ಮಾಣ ಕಾರ್ಯವನ್ನು ತಡೆಯಲು ಮುಂದಾಗಿಲ್ಲ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಬಿಬಿಎಂಪಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು~ ಎಂದು ಅವರು ತಿಳಿಸಿದರು.ವ್ಯಾಪಾರ ಸ್ಥಗಿತದಿಂದ ರೈತರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ವ್ಯಾಪಾರ ನಿಲ್ಲಿಸಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.