ಮಂಗಳವಾರ, ಜೂನ್ 15, 2021
27 °C

ಹೂವಿನ ಹಂತದಲ್ಲೇ ತಾಳ ತಪ್ಪಿದ ಮಾವು ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಬೆಳೆ ಹೂವಿನ ಹಂತದಲ್ಲೇ ತಾಳ ತಪ್ಪಿದೆ. ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಲ್ಲಿ ಹೂ ಪೂರ್ಣ ಪ್ರಮಾಣದಲ್ಲಿ ಬರುವುದು ಸಾಮಾನ್ಯ. ಆದರೆ ಈ ಬಾರಿ ಫೆಬ್ರುವರಿ ಮುಗಿದರೂ ಮಾವಿನಮರಗಳಲ್ಲಿ ಹಂತ ಹಂತವಾಗಿ ಹೂ ಬರುತ್ತಿದೆ. ಇದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.ಮಾವಿನ ಹೂ ರಕ್ಷಣೆಗೆ ಮೊದಲು ಆದ್ಯತೆ ನೀಡುವ ರೈತರು, ಈ ಬಾರಿ ಹಲವು ಹಂತಗಳಲ್ಲಿ ಹೂ ಬಂದ ಪರಿಣಾಮವಾಗಿ ಔಷಧಿ ಸಿಂಪಡಣೆ ಮಾಡಲು ಹೆಚ್ಚಿನ ಹಣ ವ್ಯಯಿಸಬೇಕಾಗಿ ಬಂದಿದೆ. ಶೇ. 20ರಿಂದ 25ರಷ್ಟು ಮರಗಳಲ್ಲಿ ಹೂವೇ ಬಂದಿಲ್ಲ. ಕೆಲವು ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕೊಂಬೆಯಲ್ಲಿ ಹೂ ಕಾಣಿಸಿಕೊಂಡಿದೆ.ಬಹುತೇಕ ಮರಗಳಲ್ಲಿ ತೀರಾ ಚಿಕ್ಕ ಗಾತ್ರದ ಹೂ ಗೊಂಚಲು ಬಂದಿವೆ. ಹೂಗೊಂಚಲು ಉದ್ದವಾಗಿ ಬೆಳೆದಿಲ್ಲ.

ನೆಲದಲ್ಲಿ ತೇವಾಂಶದ ಕೊರತೆಯಿಂದ ಮರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೂ ಬಂದಿಲ್ಲ. ಅದೇ ಕಾರಣದಿಂದ ಬಂದ ಹೂ ಗೊಂಚಲು ಬೆಳವಣಿಗೆಯಾಗುತ್ತಿಲ್ಲ. ಇದು ಇಳುವರಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಮಣಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರ ಎನ್.ಶ್ರೀರಾಮರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.ಈ ಮಧ್ಯೆ ಹೂ ಬಂದಿರುವ ಮರಗಳಲ್ಲಿ ದಟ್ಟವಾಗಿ ಚಿಗುರು ಕಾಣಿಸಿಕೊಂಡಿದೆ. ಹೂವಿನೊಂದಿಗೆ ಚಿಗುರು ಬಂದರೆ ಹೂ ನೆರಳಿಗೆ ಬೀಳುತ್ತದೆ. ಮತ್ತು ಚಿಗುರು ಮರದ ಸತ್ವವನ್ನು ಬಳಸಿಕೊಳ್ಳುವುದರಿಂದ ಹೀಚು ಸಮರ್ಪಕವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇದೂ ಸಹ ಕಾಯಿಯ ಇಳುವರಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಮಾವು ಬೆಳೆಗಾರರು ಹೇಳುತ್ತಾರೆ.ಪ್ರತಿ ವರ್ಷದಂತೆ ಮಾವಿನ ಹೂವಿಗೆ ಅಲ್ಲಲ್ಲಿ ಅಂಟುರೋಗ, ಬೂದು ರೋಗ, ಜಿಗಿ ಹುಳುವಿನ ಕಾಟ  ಕಾಣಿಸಿಕೊಂಡಿದೆ. ರೋಗ ಪೀಡಿತ ಹೂವು ಒಣಗಿ ಹಾಳಾಗಿದೆ. ಅಧಿಕ ಬೇಡಿಕೆ ಹೊಂದಿರುವ ಮತ್ತು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಬಾದಾಮಿ ಜಾತಿಯ ಮಾವಿನ ಮರಗಳಲ್ಲಿ ದಟ್ಟವಾಗಿ ಹೂ ಬಂದಿದ್ದರೂ, ಹೆಚ್ಚಿನ ಸಂಖ್ಯೆಯ ಮರಗಳಲ್ಲಿ ಹೀಚುಕಟ್ಟಿಲ್ಲ.

 

ಕೆಲವು ಮರಗಳಲ್ಲಿ ಮಾತ್ರ ತೀರಾ ಕಡಿಮೆ ಪ್ರಮಾಣದಲ್ಲಿ ಹೀಚು ಕಾಣಿಸಿಕೊಂಡಿದೆ. ಈ ಕಾರಣದಿಂದಲೇ ಬಾದಾಮಿ ಜಾತಿಯ ಮಾವಿನ ಗಿಡ ನಾಟಿ ಮಾಡಿರುವ ರೈತರು ಕೊಂಬೆಗಳನ್ನು ಕಡಿದು ತೋತಾಪುರಿ ಮಾವಿನ ಕೊಂಬೆಗಳನ್ನು ಕಸಿ ಮಾಡುತ್ತಿದ್ದಾರೆ.ಮಳೆ ತಡವಾದರೆ ಬಿಸಿಲು ಮತ್ತು ವಾತಾವರಣ ದಲ್ಲಿ ಉಷ್ಣಾಂಶದ ಹೆಚ್ಚಳದಿಂದ ಹೆಚ್ಚಿನ ಪ್ರಮಾಣದ ಹೀಚು ಉದುರಿ ನೆಲಕಚ್ಚುತ್ತದೆ. ಹೀಚು ಉದುರುವುದು ಮಾವಿನ ಬೆಳೆಯಲ್ಲಿ ಸಾಮಾನ್ಯವಾದರೂ ಅಧಿಕ ಉಷ್ಣಾಂಶ ಉದುರುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೂವಿನ ಹಂತದಲ್ಲಿ ಮಳೆಯಾದರೆ ಹೂವಿಗೆ ಧಕ್ಕೆಯಾಗುತ್ತದೆ. ಆದರೆ ಹೀಚಿನ ಹಂತದಲ್ಲಿ ಮಳೆ ಫಸಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ಮಾವಿನ ಮಡಿಲಿನ ಜನರಿಗೆ ಮಾವೇ ಜೀವನಕ್ಕೆ ಆಧಾರ. ಈ ಬೆಳೆಯ ಇಳುವರಿ ಮತ್ತು ಬೆಲೆಯ ಆಧಾರದ ಮೇಲೆ ಇಲ್ಲಿನ ಬಹುತೇಕ ಜನರ ಆರ್ಥಿಕ ಸ್ಥತಿ ನಿರ್ಧಾರವಾಗುತ್ತದೆ. ಆದರೆ ಇತ್ತೀಚಿನ ವರ್ಷಗಲ್ಲಿ ಮಾವಿನ ಮರಗಳಲ್ಲಿ  ವರ್ಷ ಬಿಟ್ಟು ವರ್ಷ ಫಸಲು ಬರುತ್ತಿದೆ. ವಾತಾವರಣ ವೈಪರಿತ್ಯ ಇದಕ್ಕೆ ಕಾರಣ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.