ಮಂಗಳವಾರ, ಏಪ್ರಿಲ್ 20, 2021
25 °C

ಹೂವಿನ ಹುಡುಗಿಯರ ವಿಶೇಷ ದೀಪಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರಮಸಾಗರ: ಗ್ರಾಮೀಣ ಭಾಗದಲ್ಲಿ ಆಚರಿಸುವ ಹಬ್ಬಗಳ ವೈಶಿಷ್ಟತೆಯೇ ಬೇರೆ. ಹಳ್ಳಿ ಜನರ ನಂಬಿಕೆ, ಸಂಪ್ರದಾಯಗಳು ಅಲ್ಲಿ ಸಂಭ್ರಮದಿಂದ ಅನಾವರಣಗೊಳ್ಳುತ್ತವೆ. ಅದರಲ್ಲೂ ತಾಂಡಾಗಳಲ್ಲಿ ಆಚರಿಸುವ ಗೋಧಿಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ದೀಪಾವಳಿ ಮೊದಲಾದ ಹಬ್ಬಗಳು ಲಂಬಾಣಿ ಜನರ ವಿಭಿನ್ನ ಆಚಾರ-ವಿಚಾರ, ಸಂಸ್ಕೃತಿ, ಸಡಗರದ ಪ್ರತೀಕವಾಗಿವೆ.ಬೇವಿನಹಳ್ಳಿ, ಪಂಜೇನಹಟ್ಟಿ, ಇಸಾಮುದ್ರಹೊಸಹಟ್ಟಿ, ಭರಮಸಾಗರ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಾಂಡಾದ ಸಂಪ್ರದಾಯದಂತೆ ಮಂಗಳವಾರ ರಾತ್ರಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.

 

ಬುಧವಾರ ಕೋರು ಹುಡುಗಿಯರು (ಮದುವೆಯಾಗದ) ಮಡಿಯುಟ್ಟು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ತಲೆ ಮೇಲೆ ಗಣ್ಯೋಪುಲ್ಯೊ ಧರಿಸಿ ಅದರ ಮೇಲೆ ಹೂವು ತರುವ ಪುಟ್ಟಿ ಇಟ್ಟುಕೊಂಡು ಉರುಮೆ ವಾದ್ಯದ ಸದ್ದಿಗೆ ನೃತ್ಯ ಮಾಡಿದರು. ಇವರೊಂದಿಗೆ ಮಹಿಳೆಯರು ಹೆಜ್ಜೆ ಹಾಕಿದರು.ನಂತರ ಹಿರಿಯರ ಪೂಜೆಗೆ ಹೂವು ತರಲು ಹೊರಟ ಯುವತಿಯರನ್ನು ಪೋಷಕರು ಊರ ಬಾಗಿಲವರೆಗೆ ಬಂದು ಕಳುಹಿಸಿಕೊಟ್ಟರು. ಈ ರೀತಿ ಹೊರಟ ಕೋರುಹುಡುಗಿಯರು ಲಂಬಾಣಿ ಭಾಷೆಯಲ್ಲಿ ಹಬ್ಬದ ಮಹತ್ವ ಸಾರುವ ಹಾಡುಗಳ ಜತೆಗೆ ಪೂಜೆಗೆ ಹೂವು ಕೀಳಲು ಬಂದ ತಮ್ಮನ್ನು ಬೈಯ್ಯಬೇಡಿ ಎಂದು ಹೊಲದ ಮಾಲೀಕರಿಗೆ ಮನವಿ ಮಾಡಿಕೊಳ್ಳುವ ಹಾಡುಗಳನ್ನು ಹಾಡುತ್ತ ಹೂವುಗಳನ್ನು ಕಿತ್ತು ಪುಟ್ಟಿಯಲ್ಲಿ ಸಂಗ್ರಹಿಸಿಕೊಳ್ಳುತ್ತಾರೆ.ನಂತರ ವಾಡಿಕೆಯಂತೆ ಯಾವುದಾದರು ಹೊಲ, ತೋಟದಲ್ಲಿ ಕೆಲಕಾಲ ವಿಶ್ರಮಿಸಿಕೊಂಡು ತಮ್ಮ ಗೆಳತಿಯರೊಂದಿಗೆ ಸಹ ಭೋಜನ ನಡೆಸಿ ಕಷ್ಟ-ಸುಖ ಹಂಚಿಕೊಳ್ಳುತ್ತಾರೆ. ಮದುವೆ ವಯಸ್ಸಿಗೆ ಬಂದ ಹುಡುಗಿಯರು ಮದುವೆ ನಂತರ ತವರಿನಲ್ಲಿ ನಡೆಯುವ ಇಂತಹ ಆಚರಣೆಯಲ್ಲಿ ಗೆಳತಿಯರ ಜತೆ ಪಾಲ್ಗೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ನೆನಸಿಕೊಂಡು ಪರಸ್ಪರ ತಬ್ಬಿಕೊಂಡು ಅಳುತ್ತಾರೆ.ನಂತರ ಹೂವಿನ ಪುಟ್ಟಿಗಳನ್ನು ಹಿಡಿದ ಮನೆಗೆ ಮರಳುತ್ತಾರೆ. ಇವರು ತಂದ ಹೂವುಗಳನ್ನು ಮನೆ ಅಂಗಳದಲ್ಲಿ ಚೆಲ್ಲಿ, ಸಗಣಿಯಲ್ಲಿ ಬೆರೆಸಿ ಗೋದ್ನ ತಯಾರಿಸಿ ಮನೆ ಬಾಗಿಲ ಬಳಿ ಇಟ್ಟು ತವರು ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರಲಿ ಎಂದು ಪ್ರಾರ್ಥಿಸಿ ದೀಪ ಹಚ್ಚಿದ ನಂತರ ಹಿರಿಯರ ಪೂಜೆ ನೆರವೇರಿಸಲಾಗುತ್ತದೆ.ರಾತ್ರಿ ಗ್ರಾಮದ ಎಲ್ಲರ ಮನೆಗಳ ಬಳಿ ಗುಂಪಾಗಿ ತೆರಳಿ ಹಾಡಿಕೊಂಡು ನೃತ್ಯ ಮಾಡಿದ ಯುವತಿಯರು ಹಿರಿಯರು ಹರಸಿ ಕೊಟ್ಟ ಕಾಣಿಕೆ ಸ್ವೀಕರಿಸುತ್ತಾರೆ. ವ್ಯಾಪಾರ, ನೌಕರಿ, ನಾನಾ ಕಾರಣಗಳಿಂದ ಗ್ರಾಮದಿಂದ ದೂರ ಇರುವ ಪ್ರತಿಯೊಬ್ಬರು ತಪ್ಪದೇ ದೀಪಾವಳಿ ಹಬ್ಬಕ್ಕೆ ಗ್ರಾಮಕ್ಕೆ ಹಿಂತಿರುಗಿ ಬಂಧ-ಬಳಗದೊಂದಿಗೆ ಸಡಗರದಿಂದ ಹಬ್ಬ ಆಚರಿಸುತ್ತಾರೆ. ಚಿಕ್ಕಜಾಜೂರು ವರದಿ


ಬರದ ನಡುವೆಯೂ ಜನರು ಸಂಭ್ರಮ ಸಡಗರದಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು.

ಮಂಗಳವಾರ ಅಮವಾಸ್ಯೆಯಂದು ಗ್ರಾಮದ ಪ್ರತಿಯೊಂದು ಅಂಗಡಿಯಲ್ಲೂ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.

 

ಅಂಗಡಿಗಳನ್ನು ಸ್ವಚ್ಚಗೊಳಿಸಿ, ಸಿಂಗರಿಸಿ ಪೂಜೆಗೆ ಅಣಿಗೊಳಿಸಿ, ವಿವಿಧ ಬಗೆಯ ಹಣ್ಣು ಹಂಪಲುಗಳನ್ನಿಟ್ಟು ಸಂಜೆಯಾಗುತ್ತಲೇ ಸಂಪತ್ತಿನ ಅಧಿದೇವತೆ ಲಕ್ಷ್ಮೀಯನ್ನು ಆರಾಧಿಸಿ ವಿಶೇಷ ಮಂತ್ರಗಳೊಂದಿಗೆ ಪೂಜೆ ನೆರವೇರಿಸಲಾಯಿತು.ಪಟಾಕಿ ಸದ್ದಿಗೆ ಕುಣಿದು ಕುಪ್ಪಳಿಸಿದ ಮಕ್ಕಳು:
ಲಕ್ಷ್ಮೀ ಪೂಜೆ ನಡೆಯುವ ವೇಳೆಗೆ ಹೊರಗೆ ಮಕ್ಕಳು ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಕ್ಕಳ ಸಂಭ್ರಮಕ್ಕೆ ಹಿರಿಯರೂ ಕೈಜೋಡಿಸಿ ಬಾರಿ ಶಬ್ದ ಮಾಡುವ ಸಿಡಿ ಮದ್ದುಗಳನ್ನು ಹಚ್ಚಿ ಸಂತಸ ಪಟ್ಟರು.ಹಿರಿಯರ ಪೂಜೆ: ಬುಧವಾರ ಬಲಿಪಾಡ್ಯಮಿಯಂದು ಗ್ರಾಮದಲ್ಲಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತು. ಮುಂಜಾನೆಯಿಂದಲೇ ಹೆಂಗಳೆಯರು ಮನೆಯ ಅಂಗಳವನ್ನು ಸಾರಿಸಿ, ವಿವಿಧ ವಿನ್ಯಾಸದ ದೀಪಾವಳಿಯ ಸಂಕೇತದ ಚಿತ್ತಾಕರ್ಷವಾದ ರಂಗೋಲೆಗಳನ್ನು ಬಿಡಿಸಿ, ಬಗೆ-ಬಗೆಯ ಬಣ್ಣಗಳಿಂದ ರಂಗೋಲಿಗಳನ್ನು ಸಿಂಗರಿಸಿದರು.ಸಂಜೆಯಾಗುತ್ತಲೇ ಅಂಗಳದಲ್ಲಿ ತಂಗಟೆ, ತೊಗರಿ, ಅವರೆ, ಅನ್ನೆ, ಚೆಂಡು ಮೊದಲಾದ ಹೂವುಗಳನ್ನು ಚೆಲ್ಲಿ ಪ್ರತಿಯೊಂದು ಬಾಗಿಲಿಗೂ ಬೆನಪ್ಪಗಳನ್ನು ಮಾಡಿ, ಸೂರ್ಯಾಸ್ತವಾಗುತ್ತಲೇ ದೀಪಗಳ ಸಾಲುಗಳನ್ನು ಹಚ್ಚಿ ಮನೆಗಳನ್ನು ಇನ್ನಷ್ಟು ಅಲಂಕಾರಮಾಡಿ ಬೆಳಿಕಿನ ಹಬ್ಬವನ್ನು ಸ್ವಾಗತಿಸಿದರು. ಮನೆಗಳಲ್ಲಿ ದೇವರ ಜತೆಗೆ ಹಿರಿಯರ ಹಬ್ಬಕ್ಕೆಂದು ಅಣಿಗೊಳಿಸಲಾಗಿದ್ದ ಬಿಂದಿಗೆಗಳಿಗೆ ಹೊಸ ಬಟ್ಟೆಗಳನ್ನು ಹಾಕಿ ಪೂಜೆ ನೆರವೇರಿಸಿದರು.ಕೆಲವು ಮನೆಗಳಲ್ಲಿ ದೇವೆರಮ್ಮ ಪೂಜೆ ಮಾಡಿದ್ದು ವಿಶೇಷವಾಗಿತ್ತು. ತವರು ಮನೆಗೆ ಬಂದಿದ್ದ ಹೆಣ್ಣು ಮಕ್ಕಳು ದೇವೇರಮ್ಮನಿಗೆ ಪೂಜೆ ಸಲ್ಲಿಸಿ ತವರು ಸದಾ ಆನಂದ ಮತ್ತು ಸಂತೃಪ್ತಿಯಿಂದ ಇರಲೆಂದು ಹರಸಿ ಹಾರೈಸುವ ಪ್ರತೀಕವೇ ದೇವೆರಮ್ಮನ ಆರಾಧನೆಯೆಂಬುದು ನಂಬಿಕೆಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.