ಮಂಗಳವಾರ, ಮೇ 18, 2021
24 °C
ಮಿನಿ ಕಥೆ

ಹೂವು ನೋವು

-ಟಿ.ತಿಮ್ಮಪ್ಪ . Updated:

ಅಕ್ಷರ ಗಾತ್ರ : | |

ವಳೊಬ್ಬಳು ಶ್ರೀಮಂತ ಗೃಹಿಣಿ. ಪತಿ ದೊಡ್ಡ ಹುದ್ದೆಯಲ್ಲಿದ್ದರು. ಮಗಳು ಪದವಿ ಓದುತ್ತಿದ್ದಳು. ಪತಿ ಮತ್ತು ಮಗಳು ಕೆಲಸಕ್ಕೆ, ಕಾಲೇಜಿಗೆ ತೆರಳಿದ ಬಳಿಕ ಅವಳು ಒಂಟಿಯಾಗುತ್ತಿದ್ದಳು.ತನ್ನ ಒಂಟಿತನವನ್ನು ನೀಗಲೆಂದು ಮನೆಯ ಮುಂದೆ ಹೂವಿನ ಗಿಡಗಳನ್ನು ಬೆಳೆಸಲು ಆಲೋಚಿಸಿದಳು. ಒಂದು ದಿನ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಮಾರುತ್ತಿದ್ದವನಿಂದ ನಾಲ್ಕೈದು ಹೂವಿನ ಕುಂಡಗಳನ್ನು ಖರೀದಿಸಿದಳು. ಯಾರೋ ಮನೆ ಕಟ್ಟಲು ತಳಪಾಯ ತೆಗೆಸುತ್ತಿದ್ದಲ್ಲಿಗೆ ಹೋಗಿ ಕೇಳಿ ಹಸಿಮಣ್ಣು ತಂದು ತುಂಬಿದಳು.ಮುಖ್ಯ ರಸ್ತೆಯ ಬದಿಯಲ್ಲಿ ಪಾಲಿಥೀನ್ ಚೀಲದಲ್ಲಿ ಮಣ್ಣು ತುಂಬಿಸಿ ಬೆಳೆದು ಮಾರುತ್ತಿದ್ದ ನಾಲ್ಕೈದು ಹೂವಿನ ಸಸಿಗಳನ್ನು ಖರೀದಿಸಿ, ಜೋಪಾನವಾಗಿ ತಂದು ಕುಂಡಗಳಲ್ಲಿ ನೆಟ್ಟಳು. ಆ ಹೂವಿನ ಗಿಡಗಳಿಗೆ ಗೊಬ್ಬರ ತಂದು ಹಾಕಿ, ಅವು ಸ್ವಲ್ಪವೂ ಬಾಡದಂತೆ ದಿನವೂ ನೀರೆರೆದು ಸಲಹಿದಳು.ಒಂದು ದಿನ ನೆಟ್ಟಿದ್ದ ಕೆಂಪು ಗುಲಾಬಿಯ ಗಿಡವೊಂದು ಮೊಗ್ಗು ಬಿಟ್ಟದ್ದನ್ನು ಕಂಡು ಅವಳಿಗೆ ಅತೀವ ಸಂತೋಷವಾಯಿತು. ಅದು ಹೂವಾಗುವುದನ್ನೇ ಕಾತರದಿಂದ ಕಾಯತೊಡಗಿದಳು. ಮತ್ತೊಂದು ದಿನ ಬೆಳಿಗ್ಗೆಯೇ ಎದ್ದು ಬಾಗಿಲು ತೆಗೆದವಳಿಗೆ ಕುಂಡದಲ್ಲಿದ್ದ ಗುಲಾಬಿ ಮೊಗ್ಗು ಅರಳಿ ಸುಂದರ ಹೂವಾಗಿದ್ದು ಕಾಣಿಸಿ, ಮನಸ್ಸಿಗೆ ಅವರ್ಣನೀಯ ಸಂತೋಷವಾಯಿತು. ಅದೇ ಸಂತೋಷದಲ್ಲಿ ಆ ದಿನವನ್ನು ಕಳೆದಳು.ಸಂಜೆ ಕಾಲೇಜಿನಿಂದ ಬಂದ ಮಗಳು ಹೂವನ್ನು ನೋಡಿರಬಹುದು, ಏನಾದರೂ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು ಎಂದು ಕಾದಳು. ಆದರೆ ಮಗಳು `ಏನಮ್ಮೋ ತುಂಬಾ ಖುಷಿಯಾಗಿದ್ದೀಯಾ? ಅಪ್ಪ ಏನಾದ್ರೂ ಹೊಸ ಸೀರೆ ತಂದುಕೊಟ್ರಾ?' ಎಂದು ಕೇಳಿದಾಗ ಅವಳ ಸಂತೋಷ ಅರ್ಧ ಇಳಿದಂತಾಯಿತು. ಇಂದಿನ ಮಕ್ಕಳು ಅವರದ್ದೇ ಗುಂಗಿನಲ್ಲಿರುತ್ತಾರೆ, ಮಗಳು ಬಹುಶಃ ಹೂವನ್ನು ಗಮನಿಸಿರಲಾರಳು ಎಂದು ಸಮಾಧಾನ ಪಟ್ಟುಕೊಂಡಳು.ಮಗಳ ನಂತರ ಬಂದ ಪತಿರಾಯ ಇವಳ ಸಂತಸದ ಮುಖ ಚಹರೆ ಗಮನಿಸಿ `ಏನು ಅಮ್ಮೋವ್ರ, ತುಂಬಾ ಖುಷಿನಲ್ಲಿರೋ ಹಾಗಿದೆ. ಟಿ.ವಿ.ನಲ್ಲಿ ಯಾವುದಾದ್ರೂ ಒಳ್ಳೆ ಸೀರಿಯಲ್ ನೋಡಿರಬೇಕು' ಅಂದಾಗ ಅವಳಿಗೆ ಹೂವನ್ನು ಇವರೂ ನೋಡಿಲ್ಲವಲ್ಲ ಎಂದು ಬೇಸರವಾಯಿತು. ಅಷ್ಟರಲ್ಲಿ ಮಹಡಿಯಿಂದ ಕೆಳಗಿಳಿದು ಬಂದ ಮಗಳು `ನಾನೂ ಅದೇ ಪ್ರಶ್ನೆ ಕೇಳಿದೆ ಅಪ್ಪಾ. ಅಮ್ಮನ ಮುಖದಲ್ಲಿ ಇವತ್ತು ತುಂಬಾ ಖುಷಿ ಇದೆ' ಅಂದಳು.ಬಹುಶಃ ಇವರಿಬ್ಬರೂ ಹೂವನ್ನು ನೋಡಿಲ್ಲ ಎಂದುಕೊಂಡ ಅವಳು `ಬನ್ನಿ, ನಿಮಗಿಬ್ಬರಿಗೂ ನನಗೆ ಇಷ್ಟು ಸಂತೋಷ ಯಾಕಾಗಿದೆ ಅಂತ ತೋರಿಸ್ತೀನಿ' ಎಂದು ಹೇಳುತ್ತಾ ಅವರನ್ನು ಹೊರಗೆ ಕರೆದುಕೊಂಡು ಬಂದು ಕುಂಡದಲ್ಲಿ ಸೂರ್ಯನ ಸಂಜೆ ರಂಗನ್ನು ಪ್ರತಿಫಲಿಸುತ್ತಿದೆಯೇನೋ ಎನ್ನುವಂತೆ ನಳನಳಿಸುತಿದ್ದ ಕೆಂಪು ಗುಲಾಬಿ ಹೂವನ್ನು ತೋರಿಸಿದಳು. ಮಗಳು ಕಿಸಕ್ಕನೆ ನಕ್ಕು, `ಅಯ್ಯೋ ಇಷ್ಟೇನಾ.  ಗಿಡ ಒಂದು ಹೂವು ಬಿಟ್ಟಿದ್ದಕ್ಕೆ ಇಷ್ಟೊಂದು ಖುಷಿಯಾಗುತ್ತಾ? ನೀನು ತುಂಬಾ ಎಮೋಷನಲ್ ಕಣಮ್ಮಾ' ಎನ್ನುತ್ತಾ ಒಳಗೆ ಹೋದಳು.ಪತಿರಾಯ ಹೂವಿನ ಕಡೆಗೊಮ್ಮೆ ನೋಡಿ `ನಿನಗೆ ಇಷ್ಟು ಖುಷಿಯಾಗುತ್ತೆ ಅಂತ ಗೊತ್ತಾಗಿದ್ರೆ ಇಂತಹ ನೂರು ಹೂವುಗಳನ್ನ ತಂದು ಕೊಡುತ್ತಿದ್ದೆ. ಮಾರ್ಕೆಟ್ನಲ್ಲಿ ದಂಡಿಯಾಗಿ ಬಿದ್ದಿದಾವೆ' ಅಂದಾಗ ಅವಳಿಗೆ ಏನು ಉತ್ತರಿಸಬೇಕೆಂದೇ ತಿಳಿಯದೆ ಸುಮ್ಮನೆ ಕೃತಕ ನಗೆ ನಕ್ಕಳು. ಹೃದಯದಲ್ಲಿ ಮಾತ್ರ ಸಣ್ಣ ನೋವಿನ ಎಳೆಯೊಂದು ಹಾದು ಹೋಯಿತು.   

-ಟಿ.ತಿಮ್ಮಪ್ಪ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.