ಹೂವು ಮಾಡುವ ಕೆಲಸ ಬಂಗಾರದಿಂದ ಆಗಲ್ಲ!

7

ಹೂವು ಮಾಡುವ ಕೆಲಸ ಬಂಗಾರದಿಂದ ಆಗಲ್ಲ!

Published:
Updated:

ಮೈಸೂರು: “ಒಂದು ಹೂವು ಮಾಡುವ ಕೆಲಸವನ್ನು ಒಂದು ಕೆಜಿ ಬಂಗಾರ ಮಾಡುವುದಿಲ್ಲ. ಹೂವು ಮನಸ್ಸನ್ನು ಅರಳಿಸುತ್ತದೆ. ಬಂಗಾರ ಮನಸ್ಸನ್ನು ಕೆಡಿಸುತ್ತದೆ” ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ಇಲ್ಲಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಆವರಣ ದಲ್ಲಿ ಮಹಾವಿದ್ಯಾ ಗಣಪತಿ ದೇವ ಸ್ಥಾನದ ರಜತ ಮಹೋತ್ಸವದ ಅಂಗ ವಾಗಿ ಏರ್ಪಡಿಸಿರುವ ಎಂಟು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿದ್ದ ಅವರು “ಮನೆ ದೊಡ್ಡದಾಗಿದ್ದರೆ, ಮನೆ ತುಂಬ ಸಂಪತ್ ತುಂಬಿಕೊಂಡಿದ್ದರೆ ಸಂಪತ್ ಭರಿತ ಜೀವನವಾಗುವುದಿಲ್ಲ.ಸಂಪತ್ತನ್ನು ತುಂಬಿಕೊಂಡು ಮನೆಯ ಬಾಗಿಲು ಗಳನ್ನು ಮುಚ್ಚಿಕೊಂಡರೆ ಸಂತೋಷ ಸಿಗುವುದಿಲ್ಲ. ಬ್ರಹ್ಮಾಂಡದ ಒಂದು ಗೃಹದಲ್ಲಿ ಬರೀ ರತ್ನಗಳೇ ತುಂಬಿದೆ ಯಂತೆ. ಆದರೆ ಅಲ್ಲಿ ನೀರು ಇಲ್ಲ. ನೀರೇ ಇಲ್ಲದ ಮೇಲೆ ಬದುಕೋದು ಹೇಗೆ? ನಮ್ಮ ಭೂ ಮಂಡಲ ಸ್ವರ್ಗ ಅಲ್ಲವೇನು? ಅದರ ಒಡೆಯ ಮನುಷ್ಯ. ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದು ಪ್ರಕೃತಿಯನ್ನು ಸವಿಯಬೇಕು”“ನಮ್ಮ ದೇಹಕ್ಕೆ ಮಿತಿ ಇದೆ. ಆದರೆ ಮನಸ್ಸಿಗೆ ಮಿತಿ ಇಲ್ಲ. ದೇಹ ಎಷ್ಟು ಬೆಳೆಯಬಹುದು. 6 ಅಡಿ, 8 ಅಡಿ?. ಆದರೆ ಮನಸ್ಸು ಹಾಗಲ್ಲ. ಅವಕಾಶ ಸಿಕ್ಕರೆ ಆಕಾಶದಷ್ಟು ಬೆಳೆಯಬಲ್ಲದು. ನಮಗೆ ಮನಸ್ಸಿದೆ ಎನ್ನುವ ಕಾರಣಕ್ಕೇ ನಾವು ಭಾಗ್ಯವಂತರು. ಅದೇ ಎಲ್ಲ ಅದ್ಭುತ, ವಿಕೃತಗಳಿಗೆ ಕಾರಣ. ಮನಸ್ಸು ಬೀಜ ಇದ್ದ ಹಾಗೆ.ಅದಕ್ಕೆ ನೀರು, ಗೊಬ್ಬರ ಹಾಕಿ ಕೊಂಚ ರಕ್ಷಣೆಯನ್ನೂ ನೀಡಿ ನೋಡಿಕೊಳ್ಳಬೇಕು. ಮನಸ್ಸನ್ನು ಅರಳಿಸಬೇಕು”

“ನಮ್ಮ ಮನಸ್ಸನ್ನು ರೂಪಿಸಿದ್ದು ನಿಸರ್ಗ. ಎಲ್ಲವನ್ನೂ ನೋಡಲಾಗದು. ಆದರೆ ಕಣ್ಣುಗಳಿಂದ ಸೌಂದರ್ಯವನ್ನು ವೀಕ್ಷಿಸಬಹುದು. ಮೊಗ್ಗು ಸೂರ್ಯನ ಕಿರಣ ತಾಗಿದರೆ ಅರಳುತ್ತದೆ. ನಾವು ಬಲವಂತದಿಂದ ಮೊಗ್ಗುಗಳನ್ನು ಅರಳಿಸಲು ಪ್ರಯತ್ನಿಸಿದರೆ ಮುರುಟಿ ಹೋಗುತ್ತದೆ. ಹೂವಿನ ಸುವಾಸನೆ ಇಡೀ ಜಗತ್ತನ್ನು ಸುಂದರವಾಗಿಸುತ್ತದೆ. ಜೀವ ಜಗತ್ತಿನಲ್ಲಿ ಅರಳೋದು, ಹುಟ್ಟೋದು, ಬಾಡೋದು ಎಲ್ಲವೂ ಇದೆ. ಅದಕ್ಕೇ ಇದು ಅದ್ಭುತ ಜಗತ್ತು.”“ನಾವು ಪಡೆದುಕೊಂಡು ಬಂದಿದ್ದು ನೂರು ವರ್ಷ ಆಯಸ್ಸನ್ನು ಮಾತ್ರ. ಹಾಗಾಗಿ ಬದುಕನ್ನು ಸಮೃದ್ಧಗೊಳಿಸಿ ಕೊಳ್ಳಬೇಕು. ಇದೇ ಮನುಷ್ಯನ ಉದ್ದೇಶ. ಆದರೆ ಇದು ವಸ್ತುಗಳಿಂದ ಬರುವುದಿಲ್ಲ. ದೃಷ್ಟಿಕೋನದಿಂದ ಬರುತ್ತದೆ. ಒಬ್ಬ ಋಷಿ ದೇವರಲ್ಲಿ `ನಾನು ನೂರು ವರ್ಷ ಶರದ್ ಋತು ಅನುಭವಿಸಬೇಕು~ ಎಂದು ಬೇಡಿಕೊಂಡ ನಂತೆ. ಒಳ್ಳೆಯದನ್ನು ನೋಡುವುದಕ್ಕೆ, ಕೇಳುವುದಕ್ಕೆ, ಸೃಷ್ಟಿಸುವುದಕ್ಕೆ ಬದುಕಬೇಕು”ಇಟಲಿಯ ಖ್ಯಾತ ವರ್ಣ ಚಿತ್ರಗಾರ ಮೈಕೆಲ್ ಏಂಜಲೋ ಒಮ್ಮೆ ಸಮುದ್ರದ ದಡದಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುತ್ತಿದ್ದನಂತೆ. ಸೂರ್ಯನ ಕಿರಣಗಳು ಸಮುದ್ರದಲ್ಲಿ ಬಣ್ಣದ ಲೋಕವನ್ನು ಸೃಷ್ಟಿಸಿದ್ದವು. ಆಗ ಏಂಜಲೋ ಸ್ನೇಹಿತ ಬಂದು “ಅಲ್ಲಿ ಎಲ್ಲರೂ ನಿನ್ನ ಚಿತ್ರಗಳನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಆದರೆ ನೀನು ಇಲ್ಲಿ ಏನು ಮಾಡುತ್ತಿದ್ದೀಯಾ” ಎಂದು ಪ್ರಶ್ನಿಸಿದ. ಅದಕ್ಕೆ ಏಂಜಲೋ “ನಾನು ಏನು ಚಿತ್ರ ಬಿಡಿಸಬಲ್ಲೆ. ಅಲ್ಲಿರುವುದು ಎಲ್ಲ ನಿರ್ಜೀವ ಚಿತ್ರಗಳು. ಇಲ್ಲಿ ನೋಡು ಜೀವಂತ ಚಿತ್ರಗಳು. ಪ್ರಕೃತಿ ಬಣ್ಣ ಹಾಕುತ್ತದೆ. ನಾನು ಅದನ್ನು ಅನುಕರಣೆ ಮಾಡುತ್ತೇನೆ ಅಷ್ಟೆ” ಎಂದು ಉತ್ತರಿಸಿದ.“ನಾವು ಹೊರಕ್ಕೆ ಬಂದರೆ ಇಡೀ ಜಗತ್ತೇ ಒಂದು ಕ್ಯಾನ್ವಾಸ್. ಬಾಗಿಲು ಮುಚ್ಚಿದರೆ ನಮಗೆ ನಮ್ಮದೇ ದೊಡ್ಡದಾಗಿ ಕಾಣುತ್ತದೆ. ನಿಸರ್ಗದಿಂದ ನಾವು ಕಲಿಯುವುದು ಬೇಕಾದಷ್ಟಿದೆ” ಎಂದು ಹೇಳಿ ಮೊದಲ ದಿನದ ಪ್ರವಚನವನ್ನು ಮುಗಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ನಿಸರ್ಗದಿಂದ ಏನೇನು ಕಲಿಯ ಬಹುದು ಎಂದು ಸಿದ್ಧೇಶ್ವರ ಸ್ವಾಮೀಜಿ ಗುರುವಾರ ಹೇಳುತ್ತಾರೆ. ತಿಳಿದುಕೊಳ್ಳೋಣ ಬನ್ನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry