ಸೋಮವಾರ, ಜೂನ್ 14, 2021
21 °C

ಹೂ ಬಿಟ್ಟ ಮಾವಿನ ಮರ: ಭರ್ಜರಿ ಫಸಲು ನಿರೀಕ್ಷೆ

ಪ್ರಜಾವಾಣಿ ವಾರ್ತೆ ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಅರಸೀಕೆರೆ: `ಹಣ್ಣುಗಳ ರಾಜ~ ಎಂದು ಹೆಸರಾದ ಮಾವಿನ ಫಸಲು ಮಾರುಕಟ್ಟೆಗೆ ಲಗ್ಗೆ ಇಡುವ ದಿನ ಸಮೀಸುತ್ತಿದ್ದು, ತಾಲ್ಲೂಕಿನಾದ್ಯಂತ ಮಾವಿನ ಗಿಡಗಳು ಹೂ ಬಿಟ್ಟು ಭರ್ಜರಿ ಫಸಲಿನ ನಿರೀಕ್ಷೆ ಮೂಡಿಸಿವೆ.

ತಾಲ್ಲೂಕಿನಲ್ಲಿ ಮಾವಿನ ತೋಟಗಳು ಹೇರಳವಾಗಿವೆ. ಮಾವು ಬೆಳೆಗೆ ಇಲ್ಲಿ ಹಿತಕರ ಹವಾಮಾನ ಇದೆ.ಒಟ್ಟು 1713 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ತಾಲ್ಲೂಕಿನ ಗಂಡಸಿ ಹೋಬಳಿಯ ಮಂಜೇನಹಳ್ಳಿ ಕಾವಲ್, ರಂಗಾಪುರ ಕಾವಲ್, ಕೊಂಡೇನಾಳು, ಗೊಲ್ಲರಹಳ್ಳಿ ಗೇಟ್ ಕಸಬಾ ಹೋಬಳಿಯ ಅಗ್ಗುಂದ, ಸಿದ್ದರಹಳ್ಳಿ, ಹಾರನಹಳ್ಳಿ, ಬೋರನಕೊಪ್ಪಲು, ಬೆಂಡೇಕೆರೆ, ಜಾವಗಲ್ ಹೋಬಳಿಯ ರಾಂಪುರ, ಬಾಣಾವರ ಹೋಬಳಿಯ ಚಿಕ್ಕಮ್ಮನಹಳ್ಳಿ ಪುರಲೇಹಳ್ಳಿ, ಭೈರಗೊಂಡನಹಳ್ಳಿ, ಕಣಕಟ್ಟೆ ಪ್ರದೇಶಗಳಲ್ಲಿ ಮಾರು ಹೇರಳವಾಗಿ ಬೆಳೆಯಲಾಗುತ್ತದೆ. ಏಪ್ರಿಲ್‌ನಲ್ಲಿ ಆರಂಭಗೊಳ್ಳುವ ಮಾವಿನ ಸುಗ್ಗಿ ಜುಲೈ ವರೆಗೂ ಮುಂದುವರಿಯುತ್ತದೆ. ಮಲ್ಲಿಕಾ, ಮಲಗೋಬಾ, ರಸಪೂರಿ, ನೀಲಂ ಹಾಗೂ ತೋತಾಪುರಿ ತಳಿಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.ಮಾವಿನ ಬಹತೇಕ ತಳಿಗಳ ಹಣ್ಣುಗಳು ಮೇ ತಿಂಗಳಲ್ಲಿ ಸಮೃದ್ಧವಾಗಿ ಬರುತ್ತವೆ. ಆದರೆ, ನೀಲಂ ಹಾಗೂ ತೋತಾಪುರಿ ಫಸಲು ಹಂಗಾಮು ಮುಗಿದ ಮೇಲೂ ಅಂದರೆ ಜುಲೈ ತಿಂಗಳ ವರೆಗೂ ಬರುತ್ತವೆ.ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಉತ್ತಮ ಮಳೆ ಬಿದ್ದರೆ ನಂತರ ಮಳೆಯ ಅವಶ್ಯಕತೆ ಇರುವುದಿಲ್ಲ. ಹೂವು ಕಾಯಾಗುವುದರಿಂದ ಅವುಗಳ ಸಂರಕ್ಷಣೆ ಉತ್ತಮ ಉಪಾಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಜಯ್ ಕುಮಾರ್ ಹೇಳುತ್ತಾರೆ.`ಈ ವರ್ಷ ತಾಲ್ಲೂಕಿನ ಎಲ್ಲ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಡುವ ಸಂಭವ ಇದೆ. ಹೂವು ಕಾಯಿ ಕಟ್ಟುವಂತೆ ಮಾಡಲು ಸುರಕ್ಷತಾ ಕ್ರಮಗಳನ್ನು ಮಾಡಬೇಕಾಗುತ್ತದೆ. ಮಾವಿನ ಗಿಡದಲ್ಲಿ ಬೂದುರೋಗ ನಿಯಂತ್ರಣಕ್ಕೆ ಬಾವಿಸ್ಟೀನ್ ಅಥವಾ ಹೆಕ್ಸಕೋಜೋಕ್ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಒಂದು ಗ್ರಾಂನಷ್ಟು ಮಿಶ್ರಣ ಮಾಡಿ ಸಿಂಪಡಿಸಬೇಕು. ಜಿಗಿಹುಳು ಹಾಗೂ ಕಾಯಿ ಕೊರೆವ ಹುಳುಗಳ ನಿಯಂತ್ರಣಕ್ಕೆ~ ಮುಂಜಾಗೃತೆ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.ಭಾರಿ ಇಳುವರಿ ನಿರೀಕ್ಷೆ: ಇಳುವರಿ ಹೆಚ್ಚಾಗುವ ನಿರೀಕ್ಷೆ ಬೆಳೆಗಾರರಲ್ಲಿ ಮೂಡಿದೆ. ಒಂದು ವರ್ಷ ಪೂರ್ಣ ಹಾಗೂ ಮತ್ತೊಂದು ವರ್ಷ ಕಡಿಮೆ ಇಳುವರಿ ನೀಡುವುದು ಮಾವಿನ ಮರದ ಗುಣ. 2010ರಲ್ಲಿ ಅಲ್ಪ ಇಳುವರಿ ದೊರೆತ್ತಿತ್ತು. 2011ರಲ್ಲಿ ಮಾವಿಗೆ ಪೂರ್ಣ ಇಳುವರಿ ವರ್ಷವಾದರೂ ಗಾಳಿ ಮಳೆಗೆ ಮಾವಿನಕಾಯಿ ಉದುರಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ವರ್ಷ ಕಡಿಮೆ ಇಳುವರಿ ವರ್ಷವಾದರೂ ಮಾವಿನ ತೋಟಗಳಲ್ಲಿನ ಹೂವಿನ ಗೊಂಚಲು ಭಾರಿ ನಿರೀಕ್ಷೆ ಅರಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.