ಹೂ ರಹಿತ ಕಬ್ಬು ತಳಿ ಅಭಿವೃದ್ಧಿ

7
ಸಂಕೇಶ್ವರ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಾಧನೆ

ಹೂ ರಹಿತ ಕಬ್ಬು ತಳಿ ಅಭಿವೃದ್ಧಿ

Published:
Updated:

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಕಬ್ಬು ತಳಿ ಅಭಿವೃದ್ಧಿ ಕೇಂದ್ರ ಅಭಿವೃದ್ಧಿಪಡಿಸಿರುವ ಹೂ ಬಿಡದ (ಎಸ್‌ ಎನ್‌ಕೆ 07680) ಹಾಗೂ ನೀರಿನ ಅಭಾವ ತಾಳಿಕೊಳ್ಳುವ (ಎಸ್ಎನ್ ಕೆ 632) ಕಬ್ಬಿನ ಎರಡು ತಳಿಗಳು ಇಲ್ಲಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ ಜನಾಕರ್ಷಣೆಗೆ ಕಾರಣವಾಗಿವೆ.ಕಾರ್ಯಾರಂಭ ಮಾಡಿದ 54 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಕೇಶ್ವರದ ಕಬ್ಬು ತಳಿ ಅಭಿವೃದ್ಧಿ ಕೇಂದ್ರ ಸ್ವತಂತ್ರವಾಗಿ ಕಬ್ಬಿನ ತಳಿ ಅಭಿವೃದ್ಧಿಪಡಿಸಿದ ಶ್ರೇಯ ತನ್ನದಾಗಿಸಿಕೊಂಡಿದೆ.ಇಲ್ಲಿಯವರೆಗೆ ತಮಿಳುನಾಡಿನ ಕೊಯ ಮತ್ತೂರಿನ ರಾಷ್ಟ್ರೀಯ ಕಬ್ಬು ತಳಿ ಅಭಿವೃದ್ಧಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ತಳಿಗಳನ್ನು ಪ್ರಯೋಗಕ್ಕೆ ಒಳಪಡಿಸಲು ಮಾತ್ರ ಸಂಕೇಶ್ವರ ಕೇಂದ್ರ ಬಳಕೆಯಾಗುತ್ತಿತ್ತು. 2006ರಲ್ಲಿ ಕೇಂದ್ರದ ಮುಖ್ಯಸ್ಥ ಡಾ. ಸಂಜಯ ಪಾಟೀಲ, ಡಾ. ಸಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ಸಂಶೋಧನೆ ಆರಂಭಿಸಿ ಈ ವರ್ಷ ಅದರಲ್ಲಿ ಯಶಸ್ಸು ಸಾಧಿಸಲಾಗಿದೆ. ಎರಡೂ ತಳಿಯ ಕಬ್ಬಿನ ಬೀಜಗಳನ್ನು ಪ್ರಸಕ್ತ ವರ್ಷದಿಂದಲೇ ರೈತರ ಬಳಕೆಗೆ ನೀಡಲು ಈಗಾಗಲೇ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅನುಮತಿ ನೀಡಿದೆ.ಎಸ್‌ ಎನ್‌ಕೆ 07680 ತಳಿ : ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಕಬ್ಬು ಹೂ ಬಿಡುತ್ತಿದ್ದಂತೆಯೇ ಅದರ ಬೆಳವಣಿಗೆ ನಿಲ್ಲುತ್ತದೆ. ಹೂ ಬಿಟ್ಟ ತಿಂಗಳ ನಂತರ ಅದರಲ್ಲಿನ ಸಕ್ಕರೆ ಅಂಶ ನಶಿಸಿ ತೂಕ ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಕೇಶ್ವರ ಕೇಂದ್ರದಲ್ಲಿ ಎಸ್ಎನ್ ಕೆ 07680 ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ‘ಈ ತಳಿಯ ಕಬ್ಬು ಹೂ ಬಿಡುವುದಿಲ್ಲ. ಜೊತೆಗೆ ಸುಂಕದ (ಕಬ್ಬಿನ ಮೇಲೆ ಮೂಡುವ ಬಿಳಿ ಪುಡಿ) ಸಮಸ್ಯೆ ಇರುವುದಿಲ್ಲ.

ಜಾನುವಾರುಗಳಿಗೆ ಉತ್ತಮ ಮೇವು ಆಗಿ ಬಳಕೆಯಾಗುತ್ತದೆ. ಹೆಚ್ಚು ಎತ್ತರ ಬೆಳೆಯುವುದರಿಂದ ಶೇ 15ರಿಂದ 20ರಷ್ಟು ಇಳುವರಿ ಹೆಚ್ಚಲಿದೆ. ನಾಟಿ ಮಾಡಿದ 10ರಿಂದ 12 ತಿಂಗಳಲ್ಲಿ ಮೂರೂವರೆ ಮೀಟರ್ ಬೆಳೆಯುವ ಈ ಕಬ್ಬಿನಲ್ಲಿ ಸಕ್ಕರೆ ಪ್ರಮಾಣ 14 ಯೂನಿಟ್‌ನಷ್ಟು ಇರುತ್ತದೆ. ಹಾಲಿ ಬಳಕೆಯಲ್ಲಿರುವ ತಳಿಗಳಲ್ಲಿ 12.5 ಯಿಂದ 13 ಯೂನಿಟ್‌ ಸಕ್ಕರೆ ಇದೆ’ ಎನ್ನುತ್ತಾರೆ ಸಂಕೇಶ್ವರ ಕೇಂದ್ರದ ವಿಜ್ಞಾನಿ ಡಾ.ಸಿ.ಪಿ.ಚಂದ್ರಶೇಖರ.ಎಸ್ಎನ್ ಕೆ 632 ತಳಿ: ಹೆಕ್ಟೇರ್‌ಗೆ 159 ಟನ್‌ ಇಳುವರಿ ನೀಡುವ ಎಸ್ ಎನ್ ಕೆ 632 ತಳಿಯ ಬೇರು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಇಳಿಯುವುದಿರಂದ ನೀರಿನ ಕೊರತೆಯಾದರೂ  ಬೇಗ ಒಣಗುವುದಿಲ್ಲ. ಜೊತೆಗೆ ಗೊಣ್ಣೆ ಹುಳುವಿನ ಬಾಧೆಯನ್ನು ಪ್ರತಿರೋಧಿಸುವ ಶಕ್ತಿ ಹೊಂದಿದೆ. ಹಾಗಾಗೀ ಈ ತಳಿಯ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಡಾ.ಚಂದ್ರಶೇಖರ ಹೇಳುತ್ತಾರೆ.ಸಂಕೇಶ್ವರದ ಹೀರಾ ಶುಗರ್ಸ್, ಬಾಗಲಕೋಟೆ ಜಿಲ್ಲೆಯ ಗಲಗಲಿಯ ನಂದಿ ಶುಗರ್ಸ್, ಮಹಾಲಿಂಗಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ಇದೇ ತಳಿಯ ಬೀಜ ನೀಡಿವೆ. ಮಂಡ್ಯದ ವಿ.ಸಿ.ಫಾರಂನಲ್ಲೂ ಪ್ರಾಯೋಗಿಕ ಬಳಕೆಗೆ ಕೊಂಡೊಯ್ಯಲಾಗಿದೆ ಎಂದು ಅವರು ಹೇಳುತ್ತಾರೆ.ಪ್ರಶಸ್ತಿಯ ಗರಿ: ಸಂಕೇಶ್ವರ ಕೇಂದ್ರದ ಈ ಸಾಧನೆಗೆ ಐಸಿಎಆರ್‌ನಿಂದ ಜವಾಹರಲಾಲ್ ನೆಹರೂ ಪ್ರಶಸ್ತಿ ಲಭಿಸಿದೆ. ಜೊತೆಗೆ ದಕ್ಷಿಣ ಭಾರತ ಕಬ್ಬು ಬೆಳೆಗಾರರ ಸಂಘದ ಪ್ರಶಸ್ತಿ ಮತ್ತು ಕೊಯಮತ್ತೂರಿನ ರಾಷ್ಟ್ರೀಯ ಕಬ್ಬು ತಳಿ ಸಂಶೋಧನಾ ಕೇಂದ್ರದ ಸ್ಥಾಪಕ ವಿಜ್ಞಾನಿ ಸರ್. ವೆಂಕಟರಾಮನ್ ಹೆಸರಿನಲ್ಲಿ ಪ್ರಶಸ್ತಿ ಲಭಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry