`ಹೃದಯಗಳ ಸಂಪರ್ಕ ಸೇತುವೆ ಕ್ರಿಕೆಟ್'

7
ಪಾಕ್‌ನಲ್ಲಿ ಪರಿಸ್ಥಿತಿ ಇನ್ನೂ ಸರಿ ಹೋಗಿಲ್ಲ, ಬಾಂಧವ್ಯ ಸುಧಾರಣೆಗೆ ಕ್ರೀಡೆ ಉತ್ತಮ ಮದ್ದು: ರಮೀಜ್

`ಹೃದಯಗಳ ಸಂಪರ್ಕ ಸೇತುವೆ ಕ್ರಿಕೆಟ್'

Published:
Updated:

ನಾಗಪುರ: `ಹಿಂದಿನ ಸರಣಿ ವೇಳೆ ಕ್ರಿಕೆಟ್ ವೀಕ್ಷಿಸಲು ಭಾರತಕ್ಕೆ ಆಗಮಿಸಿದ್ದ ಪಾಕ್‌ನ ಕೆಲ ಅಭಿಮಾನಿಗಳು ವಾಪಸ್ ಸ್ವದೇಶಕ್ಕೆ ತೆರಳಿರಲಿಲ್ಲ ಎಂಬ ವಿಷಯ ನನಗೂ ಆಘಾತ ಮೂಡಿಸಿತ್ತು. ಒಂದಿಬ್ಬರು ಈ ರೀತಿ ಮಾಡುವುದರಿಂದ ಉಳಿದ ಅಭಿಮಾನಿಗಳನ್ನೂ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ ಎಂಬ ವಿಶ್ವಾಸ ನನಗಿದೆ'-ಭಾರತ ವಿರುದ್ಧ ಕ್ರಿಕೆಟ್ ಸರಣಿಯ್ಲ್ಲಲಿ ಆಡಲು ಐದು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಡಿಸೆಂಬರ್ 22ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ನಾಯಕ ರಮೀಜ್ ರಾಜಾ ಈ ವಿಷಯ ತಿಳಿಸಿದ್ದಾರೆ.ಹಿಂದೆ ಪಾಕ್ ತಂಡದವರು ಭಾರತ ಪ್ರವಾಸಕ್ಕೆ ಬಂದಿದ್ದಾಗ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಪಾಕ್‌ನ ಕೆಲ ಅಭಿಮಾನಿಗಳು ಸ್ವದೇಶಕ್ಕೆ ಹಿಂತಿರುಗದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಅಂತಹ ಆತಂಕ ಮತ್ತೊಮ್ಮೆ ಶುರುವಾಗಿದೆ. ಈ ಬಾರಿಯೂ ಸಾವಿರಾರು ಪ್ರೇಕ್ಷಕರಿಗೆ ವೀಸಾ ನೀಡಲಾಗಿದ್ದು, ಅವರೆಲ್ಲಾ ಈ ಸರಣಿ ವೀಕ್ಷಿಸಲು ಗಡಿ ದಾಟಿ ಬರುತ್ತಿದ್ದಾರೆ.ಈ ಪ್ರವಾಸದಲ್ಲಿ ಪಾಕ್ ಎರಡು ಟ್ವೆಂಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯ ಆಡಲಿದೆ. `ಉಭಯ ದೇಶಗಳ ಬಾಂಧವ್ಯ ಸುಧಾರಣೆಗೆ ಕ್ರಿಕೆಟ್ ಉತ್ತಮ ಮದ್ದು. ಕ್ರೀಡಾ ಪ್ರೀತಿಗೆ ಗಡಿ ಎಂಬುದಿಲ್ಲ. ಕ್ರಿಕೆಟ್ ಎಂಬುದು ಹೃದಯಗಳ ಸಂಪರ್ಕ ಸೇತುವೆ' ಎಂದು ರಮೀಜ್ ಬಣ್ಣಿಸಿದ್ದಾರೆ.ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ `ಸ್ಟಾರ್ ಕ್ರಿಕೆಟ್'ನ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ ಪಾಕ್‌ನ ಈ ಮಾಜಿ ಆಟಗಾರ ಮಾತಿಗೆ ಸಿಕ್ಕಿದ್ದರು. ರಮೀಜ್ ಅವರ ಸಂದರ್ಶನದ ವಿವರ ಇಲ್ಲಿದೆ.

* ಸುದೀರ್ಘ ಅವಧಿಯ ಬಳಿಕ ಭಾರತ ಹಾಗೂ ಪಾಕ್ ನಡುವೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದೊಂದು ಸಕಾರಾತ್ಮಕ ಹೆಜ್ಜೆ. ಕ್ರಿಕೆಟ್ ಇರಲಿ, ಹಾಕಿ ಇರಲಿ, ಕಬಡ್ಡಿ ಇರಲಿ... ಕ್ರೀಡಾ ಪ್ರೀತಿಗೆ ಬೌಂಡರಿ ಎಂಬುದು ಇಲ್ಲ. ಭಾರತಕ್ಕೆ ಬಂದು ಆಡಲು ಪಾಕ್ ತಂಡಕ್ಕೆ ಕೊನೆಗೂ ಒಪ್ಪಿಗೆ ಲಭಿಸಿರುವುದು ಉತ್ತಮ ಬೆಳವಣಿಗೆ. ನಾನು ಇದನ್ನು ಸ್ವಾಗತಿಸುತ್ತೇನೆ.* ಕ್ರಿಕೆಟ್ ಆಟಕ್ಕೆ ಉಭಯ ದೇಶಗಳ ನಡುವಿನ ರಾಜಕೀಯ ಅಡ್ಡಿಯಾಗುತ್ತಿದೆಯೇ?

ಭಾರತ-ಪಾಕ್ ನಡುವೆ ಇಷ್ಟು ದಿನ ಕ್ರಿಕೆಟ್ ಸರಣಿ ನಡೆಯದೆ ಇರುವುದಕ್ಕೆ ರಾಜಕೀಯ ಕೂಡ ಒಂದು ಕಾರಣ. ಇದರಿಂದ ಉಭಯ ದೇಶಗಳ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಖಂಡಿತ ನಷ್ಟವಾಗಿದೆ. ಕ್ರಿಕೆಟ್ ಪ್ರೀತಿಗೆ ಇಂತಹ ವಿಷಯಗಳು ಅಡ್ಡಿಯಾಗಬಾರದು. ರಾಜಕೀಯವೇ ಬೇರೆ, ಕ್ರಿಕೆಟ್ ಆಟವೇ ಬೇರೆ.* ಭಾರತ-ಪಾಕ್ ಕ್ರಿಕೆಟ್ ಕದನವನ್ನು ಒಂದು ವಾಕ್ಯದಲ್ಲಿ ಬಣ್ಣಿಸಿ?

ಭಾರತ-ಪಾಕ್ ನಡುವಿನ ಕ್ರಿಕೆಟ್ ಕದನವೆಂದರೆ ಒತ್ತಡ, ಮನರಂಜನೆ, ಪ್ರತಿಭೆಯ ಅನಾವರಣ. ಆಟಗಾರರ ಪೂರ್ಣ ಪ್ರತಿಭೆಯನ್ನು ಹೊರತೆಗೆದಿಟ್ಟುಬಿಡುತ್ತದೆ. ಇದು ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಗೆ ಸಮನಾದುದು. ಜೊತೆಗೆ ಜನರ ಭೇಟಿಗೆ ವೇದಿಕೆ ಕೂಡ. ಈ ಸರಣಿಯನ್ನು ಇಡೀ ವಿಶ್ವವೇ ಕುತೂಹಲದಿಂದ ವೀಕ್ಷಿಸುತ್ತದೆ.* ಇದು ಪುಟ್ಟ ಸರಣಿ ಎಂದು ನಿಮಗನಿಸುವುದಿಲ್ಲವೇ?

ಸರಣಿ ಆಡಲು ಒಪ್ಪಿರುವುದೇ ಈಗ ದೊಡ್ಡ ವಿಷಯ. ಮುಂದಿನ ದಿನಗಳಲ್ಲಿ ಅದು ದೊಡ್ಡ ಸರಣಿಯಾಗಬಹುದು ಎಂಬ ವಿಶ್ವಾಸ ಇಟ್ಟುಕೊಳ್ಳೋಣ.* ವಿದೇಶಿ ತಂಡಗಳು ಭೇಟಿ ನೀಡಲು ಪಾಕ್‌ನಲ್ಲಿ ಈಗ ಪರಿಸ್ಥಿತಿ ಹೇಗಿದೆ?

ಪಾಕ್‌ನ ಪರಿಸ್ಥಿತಿ ಪೂರ್ಣವಾಗಿ ಸುಧಾರಿಸಿಲ್ಲ. ಭದ್ರತಾ ವಿಷಯದಲ್ಲಿ ಕೊಂಚ ಆತಂಕವಿದೆ. ಆದರೆ ಉಳಿದ ವಿಷಯಗಳ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು. ಸದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯಲಿದೆ ಎಂಬ ವಿಶ್ವಾಸವಿದೆ. ಉತ್ತಮ ಪರಿಸ್ಥಿತಿ ನಿರ್ಮಾಣಕ್ಕೆ ಕ್ರಿಕೆಟಿಗರಾದ ನಾವೂ ಪ್ರಯತ್ನ ಹಾಕುತ್ತ್ದ್ದಿದೇವೆ.* ಪಾಕ್‌ನಲ್ಲಿ ಆಡಲು ಭಾರತ ಸದ್ಯಕ್ಕೆ ಒಪ್ಪುವುದಿಲ್ಲ. ತಟಸ್ಥ ಸ್ಥಳದ್ಲ್ಲಲಾದರೂ ಸರಣಿ ನಡೆಯಬೇಕು ಎನಿಸುವುದಿಲ್ಲವೇ?

ಹೌದು, ನಾನು ತುಂಬಾ ದಿನಗಳಿಂದ ಈ ಮಾತು ಹೇಳುತ್ತಾ ಬಂದಿದ್ದೇನೆ. ತಟಸ್ಥ ರಾಷ್ಟ್ರಗಳಲ್ಲಿ ಉಭಯ ದೇಶಗಳ ನಡುವೆ ಸರಣಿ ಆಯೋಜಿಸಬಹುದು. ದುಬೈನಲ್ಲಿ ಆಡಬಹುದಲ್ಲವೇ? ಇದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಸಿದ್ಧವಿದೆ. ಆದರೆ ಮುಂದಿನ ದಿನಗಳಲ್ಲಿ ಪಾಕ್ ನೆಲದಲ್ಲಿ ಭಾರತ ಕೂಡ ಆಡುತ್ತದೆ ಎಂಬ ವಿಶ್ವಾಸವಿದೆ. ಅದಕ್ಕೂ ಮುನ್ನ ಪಾಕ್ ಸುರಕ್ಷಿತ ದೇಶ ಎಂಬುದು ಮನದಟ್ಟಾಗಬೇಕು.* ಕ್ರಿಕೆಟ್ ಆಟದಿಂದ ಉಭಯ ದೇಶಗಳ ನಡುವಿನ ರಾಜಕೀಯ ಬಾಂಧವ್ಯ ಸುಧಾರಣೆಯಾಗಬಹುದೇ?

ಕ್ರಿಕೆಟ್‌ನಿಂದ ಖಂಡಿತ ರಾಜಕೀಯ ಬಾಂಧವ್ಯ ಸುಧಾರಣೆಯಾಗುತ್ತದೆ. ಏಕೆಂದರೆ ಉಪಖಂಡದ ಜನರಿಗೆ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಉಭಯ ದೇಶಗಳ ಜನರು ಅಕ್ಕಪಕ್ಕ ಕುಳಿತು ಕ್ರಿಕೆಟ್ ಸವಿಯುವುದಕ್ಕಿಂತ ಮತ್ತೊಂದು ಸಂತೋಷದ ವಿಚಾರ ಯಾವುದಿದೆ ಹೇಳಿ? ಕ್ರಿಕೆಟ್ ಎಂಬುದು ಹೃದಯಗಳ ಸಂಪರ್ಕ ಸೇತುವೆ. ಈ ಹಿಂದೆ ಕೂಡ ಉಭಯ ದೇಶಗಳ ಸುಧಾರಣೆಯಲ್ಲಿ ಕ್ರಿಕೆಟ್ ಮಹತ್ವದ ಪಾತ್ರ ವಹಿಸಿದೆ.

* ಮುಂಬರುವ ಸರಣಿ ವೀಕ್ಷಿಸಲು ಆಗಮಿಸುವ ಪಾಕ್ ಅಭಿಮಾನಿಗಳಿಗೆ ನಿಮ್ಮ ಸಂದೇಶವೇನು?

ಅಭಿಮಾನಿಗಳ ಒತ್ತಡದ ಮೇರೆಗೆ ನಡೆಯುತ್ತಿರುವ ಈ ಸರಣಿ ಇದು. ಹಾಗಾಗಿ ಅಭಿಮಾನಿಗಳು ಶಾಂತ ರೀತಿಯಿಂದ ವರ್ತಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡಬೇಡಿ. ಕ್ರಿಕೆಟ್ ಆಟವನ್ನು ಸಂತೋಷದಿಂದ ಅನುಭವಿಸಿ.

* ಐಪಿಎಲ್‌ನಲ್ಲಿ ಆಡಲು ಪಾಕ್ ಆಟಗಾರರಿಗೆ ಈ ಬಾರಿ ಅವಕಾಶ ಸಿಗುವ ವಿಶ್ವಾಸವಿದೆಯೇ?

ಐಪಿಎಲ್‌ನಲ್ಲಿ ಆಡಲು ಪಾಕ್ ಕ್ರಿಕೆಟಿಗರಿಗೂ ಆಹ್ವಾನ ನೀಡಬೇಕು. ಭಾರತದ ಜನರು ಪಾಕ್ ಆಟಗಾರರನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಪಾಕ್‌ನ ತಂಡವೊಂದಕ್ಕೆ ಅವಕಾಶ ಸಿಕ್ಕಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry