ಹೃದಯದ ನೂರು ಮಾತು ...

7

ಹೃದಯದ ನೂರು ಮಾತು ...

Published:
Updated:

ಅಲ್ಲಿ ಕಂಗಳಲಿ ಕನಸು ತುಂಬಿಕೊಂಡ ಜೋಡಿಗಳು ಕೈಹಿಡಿದು ನಾನೇ ರಾಜಾ...ನೀನೇ ರಾಣಿ ಎಂದು ಮಾಲ್ ಸುತ್ತ ತಿರುಗುತ್ತಿದ್ದರು. ತಾನು ಕೂಡ ಏನೂ ಕಡಿಮೆ ಇಲ್ಲ ಎಂಬಂತೆ ಫೋರಂ ಮಾಲ್ ಹೃದಯಾಕಾರದ ಬಲೂನ್‌ಗಳಿಂದ ಸಜ್ಜುಗೊಂಡಿತ್ತು. `ಹಾಯ್, ಕೆಳಗೆ ಬನ್ನಿ... ಇಲ್ಲಿಂದ ಚೆನ್ನಾಗಿ ಕಾಣಿಸುತ್ತೆ~ ಎಂದ ನಟ ರಮೇಶ್ ಅರವಿಂದ್ ದನಿಗೆ ಅಲ್ಲಿದ್ದವರ ಕಿವಿಗಳು ನಿಮಿರಿದವು.

ಬಿಳಿ ಬಣ್ಣದ  ಗುಲಾಬಿ ಹೂಗಳಿರುವ ಬಟ್ಟೆ ಧರಿಸಿದ ನಟಿ ಸನಾತನಿ `ನಮ್ಮಣ್ಣ ಡಾನ್~ ಎಂದು ಜೋರಾಗಿ ಕೂಗಿದಾಗ ಅಲ್ಲಿ ಸೇರಿದ್ದವರ ಕಂಠವೂ ಜೊತೆಯಾಯಿತು. ಕೆಂಪು ದಿರಿಸಿನಷ್ಟೇ ರಂಗಾಗಿದ್ದ ನಟಿ ಮೋನಾ ಪರ್ವರೇಷ್ ಮೆಲು ದನಿಯಲ್ಲಿ `ಹಾಯ್ ಹ್ಯಾಪಿ ವ್ಯಾಲೆಂಟೈನ್ಸ್ ಡೇ~ ಎಂದು ಉಲಿದಾಗ ಅಲ್ಲಿ ಸೇರಿದ್ದ ಯುವಕರ ಮೊಗದಲ್ಲಿ ನೆಗೆಯ ಮಿಂಚು. `ಇದಕ್ಕೆ ನಾನೇ ಸಂಗೀತ ರಚಿಸಿದ್ದು ಎಂದು 23ವರ್ಷದ ಮ್ಯಾಥ್ಯು~ ಮನು ಸಂಭ್ರಮಿಸಿದರು.

ಫೋರಂ ಮಾಲ್‌ನಲ್ಲಿ ಪ್ರೇಮಿಗಳ ದಿನ `ನಮ್ಮಣ್ಣ ಡಾನ್~ ಸಿನಿಮಾದ ಪ್ರಚಾರಕ್ಕೆ ಬಂದ ರಮೇಶ್ ಹಾಗೂ ಚಿತ್ರತಂಡಕ್ಕೆ ಜನಸಮುದಾಯದಿಂದ ಸಿಕ್ಕಿದ್ದು ಅದ್ದೂರಿ ಸ್ವಾಗತ.

`ನಿಮ್ಮ ಹೃದಯದ ಬಗ್ಗೆ ಗಮನ ಕೊಡಿ~ ಎಂದ ರಮೇಶ್ ಕ್ಷಣಹೊತ್ತು ಮಾತಿನ ಲಹರಿ ನಿಲ್ಲಿಸಿದರು. ಇಂದು ನಮ್ಮ ಭಾವನೆಗಳಿಗೆ ಸ್ಪಂದಿಸುವ ಹೃದಯ ಅರಸುವ ನಾವು ಸಂಬಂಧಿಸದೇ ಇರುವ ಹೃದಯಕ್ಕೂ ಸ್ಪಂದಿಸಬೇಕು. ಇದೇ ನನ್ನ ಸಿನಿಮಾದ ಕತೆ. ಜೀವದ ಪ್ರಶ್ನೆ ಬಂದಾಗ ಎಲ್ಲರೂ ಒಂದೇ. ಬಡವ ಶ್ರೀಮಂತ ಎಲ್ಲರಿಗೂ ಆರೋಗ್ಯ ಸಿಗಬೇಕು. ಇನ್ನಾದರೂ ನೋವಲ್ಲಿರುವ ಹೃದಯಕ್ಕೆ ಸ್ಪಂದಿಸಿ~ ಎಂದಾಗ ಸದ್ದೆಲ್ಲಾ ಅಡಗಿ ಮೌನ ಮನೆಮಾಡಿತು.

`ಸತ್ಯವಾನ್ ಸಾವಿತ್ರಿ~ ಚಿತ್ರದಲ್ಲಿ ಡೆಂಟಲ್ ಡಾಕ್ಟರ್ ಆಗಿದ್ದ ರಮೇಶ್‌ಗೆ ಇಲ್ಲಿ ಹೃದಯದ ಡಾಕ್ಟರ್ ಪಟ್ಟ. `ವಾಟ್ಸ್ ಯುವರ್ ಏಜ್~ ಎಂಬ ಪ್ರಶ್ನೆ ಎರಡನೇ ಮಹಡಿಯಿಂದ ತೂರಿ ಬಂದಾಗ ರಮೇಶ್ ಕಾಲನ್ನು ನೆಲಕ್ಕೆ ಬಡಿದು ಹುಸಿಮುನಿಸು ತೋರಿ, `ಐಮ್ ಓಲ್ಡರ್ ದ್ಯಾನ್ ಯು, ಯಂಗರ್ ಇನ್ ಲುಕ್~ ಎಂಬ ಜಾಣತನದ ಉತ್ತರ ತೇಲಿಬಿಟ್ಟರು.

`ರಮೇಶ್ ಲವ್ ಎವರಿಥಿಂಗ್ ಅಂಡ್ ಎವರಿಬಡಿ~ ಎಂದಾಗ ಮುಖದಲ್ಲಿ ಮುಗ್ಧತೆ ಕಾಣುತ್ತಿತ್ತು. ತಮ್ಮ ಸಿನಿಮಾದಲ್ಲಿ ಯಾವುದೇ ಅಶ್ಲೀಲ ತಮಾಷೆಯಿಲ್ಲ ಎಂದು ಕಣ್ಣು ಮಿಟುಕಿಸಿದರು.

ಸಿನಿಮಾದ ಬಗೆಗೇ ಹೆಚ್ಚು ಬಡಾಯಿಕೊಚ್ಚಿಕೊಳ್ಳದೆ ನಿಧಾನವಾಗಿ ಪ್ರೇಮಿಗಳ ಮನ ರಂಜಿಸುವ ಧಾಟಿಯಲ್ಲಿತ್ತು ಅವರ ಮಾತಿನ ಲಹರಿ. ನಿಧಾನವಾಗಿ `ನೂರು ಜನ್ಮಕೂ...ನೂರಾರು ಜನ್ಮಕೂ~ ಹಾಡಿನ ತುಣುಕಿಗೆ ದನಿ ಸೇರಿಸಿ ವೇದಿಕೆ ಮೇಲೆ ಬಂದು ಹಾಡು ಹಾಡಿದವರಿಗೆ  ಹೃದಯಾಕಾರದ ಗಿಫ್ಟ್ ಕೊಟ್ಟು ಖುಷಿಪಡಿಸಿದರು. 

 `ನನ್ನಮ್ಮ ಅಂದ್ರೆ ನಂಗಿಷ್ಟ ಎಂಬ ಭಾವನಾತ್ಮಕ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಆದರೆ ನಮ್ಮಣ್ಣ ಡಾನ್‌ನಲ್ಲಿ ಎಲ್ಲವೂ ಮಿಳಿತಗೊಂಡಿದೆ~ ಎಂದು ನಗುಮೊಗದಿಂದ ಉತ್ತರಿಸಿದರು.

ಇಷ್ಟೆಲ್ಲದರ ನಡುವೆ ಕಾಫಿ ಡೇ ಮೂಲೆಯಲ್ಲಿ ಕುಳಿತ ಪ್ರೇಮಿ ತನ್ನ ಪ್ರಿಯಕರ ಪ್ರೀತಿಯಿಂದ ಕೊಟ್ಟ ಟೆಡ್ಡಿಬೇರ್‌ನಲ್ಲಿ ಕೈಯಾಡಿಸುತ್ತಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry