ಮಂಗಳವಾರ, ನವೆಂಬರ್ 19, 2019
26 °C
`ದಕ್ಷಿಣ' ಭಾಗದಲ್ಲಿ ನೀರಿನ ಅತಿಬಳಕೆ; ಜಲಮಂಡಳಿಗೆ ದೊರೆಯದ ಉತ್ತರ

`ಹೃದಯಭಾಗ'ದಲ್ಲೇ ಅಂತರ್ಜಲ ಕೊಳ್ಳೆ

Published:
Updated:

ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತಲಿನ 10 ತಾಲ್ಲೂಕುಗಳ ಪೈಕಿ ಕಾವೇರಿ ನೀರು ಪೂರೈಕೆಯಲ್ಲಿ ಹೃದಯಭಾಗ ಎನಿಸಿರುವ `ಬೆಂಗಳೂರು ದಕ್ಷಿಣ'ದಲ್ಲೇ (ಶೇ 178) ಅಂತರ್ಜಲದ ಅತಿಬಳಕೆ ಆಗಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಡೆಸಿರುವ ಅಧ್ಯಯನದಿಂದ ಬೆಳಕಿಗೆ ಬಂದಿದೆ. ದೇವನಹಳ್ಳಿ (ಶೇ 148), ಹೊಸಕೋಟೆ (ಶೇ 144) ತಾಲ್ಲೂಕುಗಳು ನಂತರದ ಸ್ಥಾನ ಪಡೆದಿವೆ.ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆರಂಭದಿಂದಲೂ ಕಾವೇರಿ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿದ್ದು `ಬೆಂಗಳೂರು ದಕ್ಷಿಣ'ಕ್ಕೆ. ಹೆಚ್ಚು ಜನವಸತಿ ಇರುವ ಈ ಪ್ರದೇಶದಲ್ಲಿ ಈಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ದೂರುಗಳ ಪ್ರಮಾಣ ಇತರ ಕಡೆಗೆ ಹೋಲಿಸಿದರೆ ಕಡಿವೆು. ಅದೇ ಹೊತ್ತಿನಲ್ಲಿ ಈ ಭಾಗದಲ್ಲೇ ಅಂತರ್ಜಲದ ಅತಿ ಬಳಕೆಯಾಗಿರುವುದು ಜಲಮಂಡಳಿಗೆ `ಯಕ್ಷ ಪ್ರಶ್ನೆ'ಯಾಗಿದೆ.ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯು ಪ್ರತಿ ತಿಂಗಳು ಜಲಾನಯನ ಪ್ರದೇಶಗಳಲ್ಲಿ ಜಲ ಮಟ್ಟ ಪರಿಶೀಲಿಸಿ ಅಂತರ್ಜಲ ಮಟ್ಟದ ಏರಿಳಿತವನ್ನು ಕಂಡುಕೊಳ್ಳುತ್ತದೆ. ಇದರೊಂದಿಗೆ ಇಲಾಖೆಯು ಪ್ರತಿ 5 ವರ್ಷಕ್ಕೊಮ್ಮೆ ಜಲಾನಯನ ಪ್ರದೇಶವಾರು ಅಂತರ್ಜಲ ಸಂಪನ್ಮೂಲದ ಅಧ್ಯಯನ ಮಾಡುತ್ತದೆ. ಇಲಾಖೆಯು ಸಮಗ್ರ ಅಧ್ಯಯನ ನಡೆಸಿ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಆಧಾರದಲ್ಲಿ ಅಂತರ್ಜಲ ಅತಿ ಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ `ಕರ್ನಾಟಕ ಅಂತರ್ಜಲ ನಿಯಮ-2012'ವನ್ನು ರೂಪಿಸಿದೆ. ಈ ನಿಯಮದ ಪ್ರಕಾರ ಎಲ್ಲ ಕೊಳವೆಬಾವಿಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.ಇಲಾಖೆಯು ಬಿಬಿಎಂಪಿ ವ್ಯಾಪ್ತಿಯ 800 ಚದರ ಕಿ.ಮೀ. ಪ್ರದೇಶದಲ್ಲಿ ಈ ಅಧ್ಯಯನ ನಡೆಸಿದೆ. ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 3-4 ಕೊಳವೆ ಬಾವಿಗಳಿಂದ (ಒಟ್ಟು 3456) ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆ ನಡೆಸಿದೆ. ಈ ಅಧ್ಯಯನದಿಂದ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.ಈ ವರದಿಯ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ 3 ಜಲಾನಯನ ಪ್ರದೇಶಗಳನ್ನು ಅಂತರ್ಜಲದ ಅತಿಬಳಕೆಯ ಪ್ರದೇಶಗಳೆಂದು ವರ್ಗೀಕರಿಸಲಾಗಿದೆ. ಈ ಪ್ರದೇಶಗಳಲ್ಲಿ ಅಂತರ್ಜಲ ಬಳಕೆ ಪ್ರಮಾಣವು ವಾರ್ಷಿಕ ಮರುಪೂರಣ ಪ್ರಮಾಣದ ಶೇ 100ಕ್ಕಿಂತ ಹೆಚ್ಚು ಬಳಕೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ದೀರ್ಘಕಾಲಿನ ಅಂತರ್ಜಲ ಮಟ್ಟದ ಇಳಿಕೆ ಕಂಡುಬರುತ್ತಿದೆ. 

  

ವರದಿಯಲ್ಲೇನಿದೆ: ಕುಡಿಯುವ ನೀರಿನ ಮಾನದಂಡ ಐಎಸ್ 2003ರ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಶೇ 31ರಷ್ಟು ಪ್ರಮಾಣದ ಅಂತರ್ಜಲವು ಕುಡಿಯಲು ಯೋಗ್ಯವಾಗಿಲ್ಲ. ಹೆಚ್ಚು ಆಳದ ಕೊಳವೆಬಾವಿಗಳು ಕರಗಿದ ಲವಣಗಳು ಮತ್ತು ಪ್ಲೋರೈಡ್‌ಗಳಿಂದ ಕಲುಷಿತಗೊಂಡಿದೆ. ವಿಶ್ಲೇಷಣೆ ಮಾಡಿರುವ 2209 ಜಲಮಾದರಿಗಳಲ್ಲಿ 638 ಜಲಮಾದರಿಗಳಲ್ಲಿ (ಶೇ 29) ನೈಟ್ರೇಟ್ ಅಂಶ, 214 ಜಲಮಾದರಿ (ಶೇ 10)ಗಳಲ್ಲಿ ಕಬ್ಬಿಣಾಂಶ, 185 ಜಲಮಾದರಿಗಳಲ್ಲಿ (ಶೇ 8.5) ಒಟ್ಟು ಕರಗಿದ ಲವಣಾಂಶ, 14 ಜಲಮಾದರಿಗಳಲ್ಲಿ (ಶೇ 0.6) ಪ್ಲೋರೈಡ್ ಅಂಶವು ನಿಗದಿತ ಮಿತಿಗಿಂತ ಜಾಸ್ತಿ ಇದೆ. `ಆರಂಭದಿಂದಲೂ ಜಲಮಂಡಳಿ ಕಾವೇರಿ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿದ್ದು ದಕ್ಷಿಣ ಭಾಗಕ್ಕೆ. ಆ ಭಾಗದಲ್ಲೇ ಅಂತರ್ಜಲ ಅತಿಬಳ ಕೆಯಾಗಿರುವುದು ಆಘಾತ ಉಂಟು ಮಾಡಿದೆ. ಜನಸಂಖ್ಯೆಯ ಗಣನೀಯ ಹೆಚ್ಚಳವೂ ಇದಕ್ಕೆ ಒಂದು ಕಾರಣ. ಕಾವೇರಿ ನೀರಿಗೆ ಶುಲ್ಕ ತೆರಬೇಕು ಎಂಬ ಕಾರಣಕ್ಕಾಗಿ ಕೊಳವೆಬಾವಿಗಳನ್ನು ಕೊರೆಸಲು ಮೊರೆ ಹೋಗಿರುವ ಸಾಧ್ಯತೆಯೂ ಇದೆ' ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿಶ್ಲೇಷಿಸಿದರು. `ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳು ಇವೆ ಎಂದು ಅಂದಾಜಿಸಲಾಗಿದೆ. ಈವರೆಗೆ ಕೊಳವೆಬಾವಿಗಳ ನಿಖರ ಸಂಖ್ಯೆ ಸಿಕ್ಕಿರಲಿಲ್ಲ. ಹೀಗಾಗಿ ಎಲ್ಲ ಕೊಳವೆಬಾವಿಗಳ ನೋಂದಣಿ ಕಡ್ಡಾಯಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ನೋಂದಣಿಗೇ ಮೊದಲ ಆದ್ಯತೆ. ಸಾರ್ವಜನಿಕರ ವಿನಂತಿಯ ಮೇರೆಗೆ ನೋಂದಣಿಯ ಗಡುವು ವಿಸ್ತರಿಸಲಾಗಿದೆ.ಏಪ್ರಿಲ್ 30ರ ವೇಳೆಗೆ ಸ್ಪಷ್ಟ ಚಿತ್ರಣ ದೊರಕಲಿದೆ. ಬಳಿಕ ಅಂತರ್ಜಲ ಕೊಳ್ಳೆಗೆ ಕಡಿವಾಣ ಹಾಕಲು ಕೊಳವೆಬಾವಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಬಿಗುಗೊಳಿಸುವ ಯೋಚನೆಯೂ ಇದೆ' ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)