ಗುರುವಾರ , ಫೆಬ್ರವರಿ 25, 2021
30 °C

ಹೃದಯಾಘಾತಕ್ಕೆ ಕಾರಣಗಳು ಎಷ್ಟು?

ಡಾ. ಸತ್ಯನಾರಾಯಣ ಭಟ್ ಪಿ. Updated:

ಅಕ್ಷರ ಗಾತ್ರ : | |

ಹೃದಯಾಘಾತಕ್ಕೆ ಕಾರಣಗಳು ಎಷ್ಟು?

ಸಂಧ್ಯಾ ಬಾಯಿಯವರಿಗೆ ಅರುವತ್ತನಾಲ್ಕು ವರ್ಷ. ಮನೆಯಲ್ಲಿ ಮೊಮ್ಮಗನ ಸಂಗಡ ಹೋಮ್ ವರ್ಕ್ ಕಲಾಪದಲ್ಲಿ ತೊಡಗಿದ್ದ ವೇಳೆ. ಏಕಾಏಕಿ ಅತಿಯಾದ ಬೆವರು ಹಣೆಯಲ್ಲಿ ಸುರಿಯಲಾರಂಭವಾಯಿತು. ಮೈ ಕೈ ತಣ್ಣಗಾದ ಅನುಭವ. ಕುಳಿತಿದ್ದಲ್ಲಿಯೇ ಕುಸಿದು ವಾಲಿ ಮಲಗಿದರು.ಮೊಮ್ಮಗನಿಗೆ ಗಾಬರಿ. ವೈದ್ಯಕೀಯ ನೆರವು ದೊರಕುವ ಮೊದಲೇ ಸಂಧ್ಯಾ ಬಾಯಿ ಹೃದಯವೆಂಬ ಪಂಪು ಏಕಾಏಕಿ ನಿಷ್ಕ್ರಿಯಗೊಂಡಿತ್ತು. ಎಲ್ಲರ ಬಾಯಲ್ಲಿ ಬಾಯಿಯವರ ಸುಖಮರಣದ ಸುದ್ದಿ ಹರಡಿದ್ದು ನಿಜ. ಆದರೆ ಅವರ ಹೃದಯವೇಕೆ ಸದ್ದಿಲ್ಲದೆ ಸದ್ದು ನಿಲ್ಲಿಸಿಬಿಟ್ಟಿತು? ಅದು ಅನಿವಾರ್ಯವೆ? ಅದನ್ನು ತಡೆಯಲು ಸಾಧ್ಯವಿತ್ತೆ? ಇಂತಹ ಅನೇಕ ಪ್ರಶ್ನೆ ಸಂಧ್ಯಾ ಬಾಯಿ ಮನೆಯವರಿಗೆ, ಅವರ ನಿಕಟವರ್ತಿಗಳಿಗೆ ಕಾಡುವುದು ಸಹಜ. ಹೃದಯದ ಬಗ್ಗೆ, ಅದರ ಕಾಯಿಲೆ ಬಗ್ಗೆ ತಿಳಿದಷ್ಟು ಒಳಿತು. ಭಯ ಮುಕ್ತವಾಗಿ ಬದುಕಲು ಸಾಧ್ಯ. ವೈದ್ಯರೊಂದಿಗೆ ಸಮಾಲೋಚನೆಗೆ ಅವಕಾಶ ಸಹ.ಹೃದಯಾಘಾತ ಮತ್ತು ಹೃದಯಸ್ತಂಭನ ಬೇರೆ ಬೇರೆ ಸ್ಥಿತಿ. ಮುಷ್ಟಿಗಾತ್ರದ ಹೃದಯದ ಹೊರ ಮೈ ಅತ್ಯಂತ ಬಲಿಷ್ಠ ಸ್ನಾಯು, ಪೇಶೀಗಳಿಂದ ದೈವನಿರ್ಮಿತವಾದ್ದು. ಅಂತಹ ಸ್ನಾಯುಗಳಿಗೆ ಸಹ ನಿರಂತರ ಶಕ್ತಿ ಮರುಪೂರಣ ಆಗುತ್ತಿರಬೇಕು. ಶಕ್ತಿ ದೊರಕಲು ರಕ್ತದ ಅವ್ಯಾಹತ ಸರಬರಾಜು ಮುಖ್ಯ. ಅದು ಜರಗುವುದು ಹಾರ್ದಿಕ ರಕ್ತನಾಳಗಳಿಂದ.ಅಂತಹ ರಕ್ತನಾಳಗಳ ಪೆಡಸುತನ ಮತ್ತು ಒಳ ಪದರದ ಮಾರ್ಗ ಕಿರಿದಾಗುವಿಕೆ ಅನೇಕ ಸಂದರ್ಭಗಳಲ್ಲಿ ಕಂಡೀತು. ಅದು ಹೃದಯಕಾಯಿಲೆಯ ಸ್ಥಿತಿ. ಆರೋಗ್ಯದ ಸ್ಥಿತಿ ಅಲ್ಲ. ಹಾಗಾದಾಗ ಹೃದಯವೆಂಬ ಪಂಪಿನ ಅಂಶಿಕ ರಕ್ತಚಲನೆಯಲ್ಲಿ ವ್ಯತ್ಯಯ. ಹೃದಯದ ಹಿಗ್ಗುವ ಮತ್ತು ಕುಗ್ಗುವ ಸ್ಥಿತಿಸ್ಥಾಪಕತನದಲ್ಲಿ ಏರುಪೇರು. ಅಂತಹ ಭಾಗ ಕೂಡಲೇ ಮುಷ್ಕರ ಹೂಡುವುದು ಸಹಜ. ಪರಿಣಾಮ ಇಡೀ ಪಂಪಿನ ಆರೋಗ್ಯಕ್ಕೆ ಕುತ್ತು. ಮುನ್ಸೂಚನೆ ಇಲ್ಲದೆ ಹೃದಯದ ಬಡಿತ ಏರು ಪೇರು. ಆಘಾತ ಸಂಭವನೀಯ.ಸ್ತಂಭನ ಸಹ. ಅಂತಹದೆ ಒಂದು ಕ್ಲಿಷ್ಟ ಸಂದರ್ಭ ಒದಗಿತ್ತು ಸಂಧ್ಯಾ ಬಾಯಿಯ ಹೃದಯಕ್ಕೆ. ಹಾಗಾಗಿ ಹಠಾತ್ತನೆ ಅಸು ನೀಗಿದರು. ಇದರ ಸುಳಿವು ಸಿಗುವುದೆ? ತಡೆ ಸಾಧ್ಯವೆ?ಹೃದಯಾಘಾತದ ನಾಲ್ಕು ಪ್ರಕಾರಗಳು

1. ಹೃದಯದಲ್ಲಾಗುವ ಸ್ವಯಂಪ್ರೇರಿತ ರಕ್ತಪೂರೈಕೆ ಇಳಿಕೆ-ಮುಖ್ಯ ಕಾರಣ ಹಾರ್ದಿಕ ರಕ್ತನಾಳದ ಮಾರ್ಗ ಕಿರಿತನ, ಕರಣೆಗಟ್ಟುವಿಕೆಯಿಂದ2. ಇಳಿಕೆಯ ರಕ್ತಪೂರಣ ಸ್ಥಿತಿಯ ಹಿಂದೆ ರಕ್ತ ಸರಬರಾಜಿನ ಕುಸಿತ ಮತ್ತು ಏರುವ ರಕ್ತ ಬೇಡಿಕೆಯೇ ಇಲ್ಲಿ ಪ್ರಧಾನ: ಇದರ ಹಿಂದೆ ಹಾರ್ದಿಕ ರಕ್ತನಾಳಗಳ ಪೆಡಸುತನ, ಗಾಳಿ ಗುಳ್ಳೆ ನುಸುಳುವಿಕೆ, ಲಯವಿಹೀನ ಹೃದಯ ಬಡಿತ, ಇಳಿದ ಅಥವಾ ಏರಿದ ರಕ್ತದೊತ್ತಡ ಮತ್ತು ರಕ್ತಹೀನತೆ ಸ್ಥಿತಿಗಳದೇ ಪ್ರಧಾನ ಭೂಮಿಕೆ ಇದೆ. 3. ಇಡಿಯ ಹೃದಯಕ್ಕೇ ರಕ್ತಪೂರೈಕೆ ಹಠಾತ್ತನೆ ಅನಿರೀಕ್ಷಿತ ನಿಲುಗಡೆ- ಸ್ತಂಭನ ಮತ್ತು ಮರಣ4. ಶಸ್ತ್ರವೈದ್ಯರು ಈಗಾಗಲೇ ಅಳವಡಿಸಿದ ಸ್ಟೆಂಟ್, ಕೊಳವೆಗಳ ಅಸಹಕಾರದಿಂದಾಗುವ ರಕ್ತಪೂರೈಕೆ ಪ್ರಮಾಣದ ಇಳಿಕೆ.ಬಹುತೇಕ ಬೈಪಾಸ್ ಶಸ್ತ್ರಕ್ರಿಯೆಯ ಹೃದಯರೋಗಿಗಳಲ್ಲಿ ಕ್ಷಿಪ್ರ ಅಥವಾ ಚಿರಕಾಲಾನಂತರ ಉಂಟಾಗುವ ಹೃದಯಾಘಾತ ಪ್ರಸಂಗಗಳೂ ಅಪರೂಪವೇನಲ್ಲ. ಹಳೆಯ ಮಧುಮೇಹ ಕಾಯಿಲೆ, ಏರಿದ ರಕ್ತದೊತ್ತಡ, ರಕ್ತದಲ್ಲಿ ಸೇರಿದ ಯದ್ವಾ ತದ್ವಾ ಕೊಬ್ಬಿನಂಶ, ಅತೀವ ಧೂಮಪಾನ, ನಡುಹರೆಯದ ಮಹಿಳೆಯರ ಗರ್ಭಚೀಲದ ಒಳಪದರದ ಉರಿಯೂತ ಮತ್ತು ಬೊಜ್ಜುತನಕ್ಕೆ ಹಾಗೂ ಹೃದಯಾಘಾತಕ್ಕೆ ಕೊಂಚ ತಾಳಮೇಳವಿರುವುದನ್ನು ವೈದ್ಯವಿಜ್ಞಾನಿಗಳು ಗುರುತಿಸಿದ್ದಾರೆ. ಆದರೆ ಇವಾವುವೂ ಇದಮಿತ್ಥಂ ಎನ್ನುವ ನಿಖರ ಮಾಹಿತಿ, ನಿದರ್ಶನ ವೈದ್ಯಕೀಯ ರಂಗದಲ್ಲೂ ಇಂದಿಲ್ಲ. ಒಟ್ಟಿನಲ್ಲಿ ರೋಗಕಾರಣದಿಂದ ದೂರವಿರುವುದೇ ಜಾಣತನ ಎಂಬ ಮಾತು ಇಲ್ಲಿ ಸುಸಂಗತ.ಜಾಣರ ಮಾತೇ ಉಂಟು. ’ಚಿಕಿತ್ಸೆಗಿಂತ ತಡೆ ಲೇಸು.’ಬಹುತೇಕ ಹೃದಯಾಘಾತಗಳಲ್ಲಿ ಎದೆನೋವು ಕಾಣಿಸುವುದೇ ಇಲ್ಲ. ಮಹಿಳೆಯರಲ್ಲಿ ತೀವ್ರ ಸೊಂಟನೋವು ಮತ್ತು ದವಡೆ ನೋವಿನಂತಹ ಚಿಹ್ನೆಗಳನ್ನೂ ಪೂರ್ವಸೂಚನೆ ಎಂದು ಭಾವಿಸಲಡ್ಡಿಯಿಲ್ಲ. ಅತೀವ ಸುಸ್ತು, ಬೆವರಿಳಿಕೆ, ವಾಕರಿಕೆ, ವಾಂತಿ, ತಲೆ ಸುತ್ತು, ಗುಂಡಿಗೆ ಬಡಿತ ಏರುವ ಕೆಲವು ಲಕ್ಷಣಗಳು ಹೃದಯಾಘಾತದ ಜೊತೆ ಒಡಗೂಡಿವೆ.ಆದರೆ ಅಂತಹ ಲಕ್ಷಣ ಕಂಡಾಗಲೆಲ್ಲ ತನಗೆ ಹೃದಯಾಘಾತವಾಗಿದೆ ಎಂದು ಯಾರೂ ಭಯಭೀತರಾಗಬೇಕಿಲ್ಲ. ತೀರ ಹದಗೆಟ್ಟ ಸಂದರ್ಭದಲ್ಲಿ ರೋಗಿಯು ಮತಿ ತಪ್ಪುವ ಸಂದರ್ಭ ಇದೆ. ಸಹಜವಾಗಿ ಎಡತೋಳಿಗೆ ನೋವು ಹರಡುವದು ಸಾಮಾನ್ಯ. ಅಪರೂಪವಾಗಿ ಬಲತೋಳಿಗೂ ನೋವಿನ ಸಾಂದ್ರತೆ ಇದ್ದೀತು. ಎದೆಯುರಿಯಂತೂ ನಿಶ್ಚಿತ.ಬಾಯಿ ರುಚಿ ಕೆಡುವಿಕೆ ಮತ್ತು ನಿದ್ದೆಗೇಡು ಉಂಟಾಗಬಹುದು.ತನಗೆ ಸೇರುವ ರುಚಿಭರಿತ ಮತ್ತು ವೈವಿಧ್ಯಮಯ ಆಹಾರದ ಪಾತ್ರ ಹೃದಯರೋಗ ತಡೆಯುವಲ್ಲಿ ಪ್ರಧಾನ. ಇಡಿಯ ಧಾನ್ಯಗಳು, ಹಸಿರು ತರಕಾರಿ, ಒಣಹಣ್ಣುಗಳು, ಹೊಸ ಹಣ್ಣುಗಳು, ಹೇರಳ ದ್ರವಾಹಾರದ ಸೇವನೆಯಿಂದ ಹೃದಯದ ಕಾಯಿಲೆ ದೂರವಿಡಲು ಸಾಧ್ಯ. ಅತಿಯಾದ ಸಿಹಿ ಮತ್ತು ಸಕ್ಕರೆಗೆ ಇರಲಿ ತುರ್ತು ಕಡಿವಾಣ.  ಜೀವನ ಶೈಲಿ ಮತ್ತು ಒತ್ತಡ ನಿರ್ವಹಣೆಯಂತೂ ನಿಮ್ಮ ಗುಂಡಿಗೆಯ ಆರೋಗ್ಯ ಸುಧಾರಣೆ ಮತ್ತು ಕಾಪಾಡುವಿಕೆಗೆ ಅತ್ಯಗತ್ಯ.ದಿನವೂ ಹತ್ತು ನಿಮಿಷಗಳ ವೇಗದ ನಡಿಗೆ ಸಹಕಾರಿ. ಸರಿಯಾದ ಮಾರ್ಗದರ್ಶನ ಪಡೆದು ಕಲಿತ ಯೋಗ ಮತ್ತು ಪ್ರಾಣಾಯಾಮದಿಂದ ಬೊಜ್ಜು ತಡೆ ಖಂಡಿತ. ಉಸಿರಾಟದ ಗತಿ ನಿಧಾನಿಸಿದಷ್ಟು ಹೃದಯದ ಗತಿಗೆ ನಿರಾಳ. ಮಹಿಳೆಯರ ಋತುಬಂಧದ ಸಮಯದಲ್ಲಿ ಹೃದಯದ ಆರೋಗ್ಯ ಕಾಪಾಡಲು ತುಂಬ ಕಾಳಜಿ ವಹಿಸಬೇಕು.ಹಾರ್ಮೋನು ವ್ಯತ್ಯಯ ತಡೆಯ ಅನೇಕ ಉಪಾಯಗಳು ಅಲ್ಲಿ ಪ್ರಸ್ತುತ. ನಲುವತ್ತರ ಹರೆಯದ ಮಹಿಳೆಯರಿಗೆ ತಮ್ಮ ಹೃದಯಾರೋಗ್ಯದ ಬಗ್ಗೆ ಸಹಜ ಕಾಳಜಿ ಅತ್ಯಗತ್ಯ.ವ್ಯಾಯಾಮ, ಕ್ರಿಯಾಶೀಲತೆಯ ಹವ್ಯಾಸಗಳು ಖಂಡಿತ ಬದುಕಿನ ದುಗುಡ ದುಮ್ಮಾನ ದೂರವಿಡಲು ಸಹಕಾರಿ. ಒಂಟಿತನದ ಚಿಂತೆ, ನೀರಸ ಆಹಾರಗಳಿಂದ ದೂರವಿರುವುದು ಉತ್ತಮ. ಭಾವಾವೇಶಕ್ಕೆ ಕಾರಣವಾಗುವ ಅರಿಷಡ್ವರ್ಗಗಳಿಂದ ದೂರವಿದ್ದರೆ ರಕ್ತದೊತ್ತಡದ ತಹಬಂದಿ ಖಂಡಿತ.ಕಾಲ ಕಾಲಕ್ಕೆ, ನಿದ್ದೆ, ವಿಶ್ರಾಂತಿ, ಸ್ನಾನ, ಆಟೋಟಗಳಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಖಂಡಿತ. ಅದು ಹೃದಯಕ್ಕೆ ಒಳ್ಳಿತು.ಭಾರತದಂತಹ ಉಷ್ಣತೆಯ ಹವಾಮಾನದ ದೇಶದಲ್ಲಿ ಅಭ್ಯಂಗ ಅಂದರೆ ತಲೆ, ಮೈ, ಕೈ, ಕಾಲುಗಳಿಗೆ, ಇಡಿಯ ದೇಹಕ್ಕೆ ಎಣ್ಣೆ ಹಚ್ಚುವ ಮತ್ತು ಅನಂತರ ಸ್ನಾನ ಮಾಡುವ ಪ್ರಕ್ರಿಯೆ ಉಲ್ಲಾಸದಾಯಕ.  ಆಯುರ್ವೇದ ಗ್ರಂಥಗಳಲ್ಲಿ ಇದಕ್ಕೆ ಹೆಚ್ಚು ಮಹತ್ವ ಇದೆ. ರಕ್ತದ ಏರೊತ್ತಡ ತಡೆಯಲು ಇದು ಖಂಡಿತ ಪೂರಕ. ಖರ್ಚಿಲ್ಲದ ಚಿಕಿತ್ಸೆ ಕೂಡ. ಒಂದು ಮಾತು ನೆನೆಪಿಡಿ. ನಿಮ್ಮ ಹೃದಯಾರೋಗ್ಯ ನಿಮ್ಮ ಕೈಯಲ್ಲೇ ಇದೆ. (ಲೇಖಕರು: ಆಯುರ್ವೇದ ವೈದ್ಯ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.