ಹೃದಯಾಘಾತದಿಂದ ಕೃಷಿಕ ಸಾವು: ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
22 °C

ಹೃದಯಾಘಾತದಿಂದ ಕೃಷಿಕ ಸಾವು: ಪ್ರತಿಭಟನೆ

Published:
Updated:

ಭಟ್ಕಳ: ಹಲವು ವರ್ಷಗಳಿಂದ ಅರಣ್ಯಭೂಮಿಯನ್ನು ಅತಿಕ್ರಮಿಸಿಕೊಂಡು ತೋಟಪಟ್ಟಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೃಷಿಕನೊಬ್ಬನ ಬಾಳೆ ತೋಟವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿದ್ದರಿಂದ ಕೃಷಿಕ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಕಟಗಾರಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿದ್ದು ಮಂಗಳವಾರ ಬೆಳಕಿಗೆ ಬಂದಿದೆ.ಮೃತನನ್ನು ಮೂಲತಃ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ಪಡುಶಿರಾಲಿ ನಿವಾಸಿ ಈರಪ್ಪ ಜಟ್ಟಪ್ಪ ನಾಯ್ಕ (55) ಎಂದು ಹೇಳಲಾಗಿದೆ. ಮೃತನು ಕಡುಬಡವನಾಗಿದ್ದು, ಕಟಗಾರಕೊಪ್ಪದಲ್ಲಿ ಸುಮಾರು ಒಂದು ಎಕರೆ ಅರಣ್ಯಭೂಮಿಯನ್ನು ಹಲವು ವರ್ಷಗಳ ಹಿಂದೆ ಅತಿಕ್ರಮಣ ಮಾಡಿಕೊಂಡು ಅಡಿಕೆ, ಬಾಳೆ ತೋಟವನ್ನು ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದನು ಎನ್ನಲಾಗಿದೆ.ಈರಪ್ಪ ಸೋಮವಾರ ಸಂಜೆ ತನ್ನ ಮನೆ ಪಡುಶಿರಾಲಿಯಿಂದ ತೋಟಕ್ಕೆ ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಫಲಭರಿತ ಅಡಿಕೆ, ಬಾಳೆ ಗಿಡಗಳನ್ನು ಕಡಿದು ನಾಶಪಡಿಸಿದ್ದನ್ನು ಕಂಡು ಆಘಾತಗೊಂಡು ಹೃದಯಾಘಾತವಾಗಿ ತೋಟದಲ್ಲೇ ಬಿದ್ದನು ಎನ್ನಲಾಗಿದೆ.ಬೆಳಗಾದರೂ ಗಂಡ ಮನೆಗೆ ಬರದಿದ್ದುದರಿಂದ ಹೆಂಡತಿ ತೋಟಕ್ಕೆ ಬಂದು ನೋಡಿದಾಗ ಗಂಡನ ಶವ ತೋಟದಲ್ಲಿ ಬಿದ್ದಿರುವುದನ್ನು ಕಂಡು ಗಾಬರಿಯಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದಳು.ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಕಚೇರಿ ಎದುರು ಪ್ರತಿಭಟನೆ ನಡೆಸಲು ಶವವನ್ನು ತರುತ್ತಿದ್ದ ಸಂದರ್ಭದಲ್ಲಿ ಶಿರಾಲಿಯ ಶಾರದಹೊಳೆ ಸಮೀಪ ಪೊಲೀಸರು ಗ್ರಾಮಸ್ಥರನ್ನು ತಡೆದರು.ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವವರೆಗೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಸುದ್ದಿ ತಿಳಿದು ಮಂಗಳವಾರ ಸಂಜೆ ವೇಳೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆರ್. ರಮೇಶ ಪ್ರತಿಭಟನಾ ನಿರತ ಗ್ರಾಮಸ್ಥರನ್ನು, ಅತಿಕ್ರಮಣ ಹೋರಾಟ ಸಮಿತಿಯವರನ್ನು ಸಮಾಧಾನಪಡಿಸಿ, ಮೃತನ ಕುಟುಂಬಕ್ಕೆ ತಕ್ಷಣ ಪರಿಹಾರ ದೊರಕಿಸಿಕೊಡುವ ಜತೆಗೆ, ಅತಿಕ್ರಮಣ ಮಾಡಿರುವ ಜಾಗವನ್ನು ಮೃತನ ಕುಟುಂಬಕ್ಕೆ ನೀಡುವ ಬಗ್ಗೆ ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ಮೃತನ ಪತ್ನಿ ಮತ್ತು ಮೂವರು ಮಕ್ಕಳು ಶವದ ಮೇಲೆ ಬಿದ್ದು ಗೋಳಾಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry