`ಹೃದಯ ಬೇನೆಗೆ ಪ್ರತಿವರ್ಷ ಲಕ್ಷ ಜನ ಸೇರ್ಪಡೆ'

7

`ಹೃದಯ ಬೇನೆಗೆ ಪ್ರತಿವರ್ಷ ಲಕ್ಷ ಜನ ಸೇರ್ಪಡೆ'

Published:
Updated:

ವಿಜಾಪುರ: `ಜಗತ್ತಿನಲ್ಲಿ ವಾರ್ಷಿಕ 25 ಲಕ್ಷ ಜನ ಹೃದಯ ತೊಂದರೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಒಂದು ಲಕ್ಷ ಜನ ಪ್ರತಿವರ್ಷ ಹೊಸದಾಗಿ ಈ ತೊಂದರೆಗೆ ಸೇರ್ಪಡೆಯಾಗುತ್ತಿದ್ದಾರೆ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.90ರಷ್ಟು ಜನರಿಗೆ ಇನ್ನೂ ಸಹ ಹೃದಯ ಚಿಕಿತ್ಸೆಯ ವೆಚ್ಚ ಭರಿಸಲು ಆಗುತ್ತಿಲ್ಲ' ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ಚೇರಮನ್, ಪದ್ಮಭೂಷಣ ಡಾ.ದೇವಿಪ್ರಸಾದ ಶೆಟ್ಟಿ ಹೇಳಿದರು.ಸೋಮವಾರ ನಡೆದ ಸ್ಥಳೀಯ ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.`ಹೃದಯ ತೊಂದರೆಯಿಂದ ಬಳಲುವ ಮಗುವಿನ ಚಿಕಿತ್ಸೆಗೆ ರೂ.80 ಸಾವಿರ ಹಣವನ್ನು ಪಾಲಕರು ಹೊಂದಿಸಿದರೆ ಮಗುವಿನ ಜೀವ ಉಳಿಯುತ್ತದೆ.

ಇಲ್ಲದಿದ್ದರೆ ಚಿಕಿತ್ಸೆ ಇಲ್ಲದ ಕಾರಣ ಮಗು ಸಾವನ್ನಪ್ಪುತ್ತದೆ. ಮನುಷ್ಯನ ಆರೋಗ್ಯ, ಆಯುಷ್ಯವನ್ನು ಹಣದಿಂದ ಅಳೆಯುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಸ್ವಾತಂತ್ರ್ಯ ಬಂದು 60 ವರ್ಷಗಳ ನಂತರವೂ ಆರೋಗ್ಯ ಸೇವೆ ಒದಗಿಸಲು ವಿಫಲರಾಗಿದ್ದೇವೆ. ಶೇ.47 ಗ್ರಾಮೀಣ ಹಾಗೂ ಶೇ.37 ನಗರ ವಾಸಿಗಳು ವೈದ್ಯಕೀಯ ವೆಚ್ಚ ಭರಿಸಲು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ' ಎಂದು ಹೇಳಿದರು.`ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ವೈದ್ಯರನ್ನು ಸೃಷ್ಟಿಸುವ ರಾಷ್ಟ್ರವಾಗಿದ್ದರೂ ನಮ್ಮಲ್ಲಿಯೇ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯದಿರುವುದು ವಿಪರ್ಯಾಸ' ಎಂದರು.`ನಾರಾಯಣ ಹೃದಯಾಲಯ 11 ನಗರಗಳಲ್ಲಿ 14 ಆಸ್ಪತ್ರೆಗಳ ಮೂಲಕ ಯಶಸ್ವಿ ಚಿಕಿತ್ಸೆಗಳನ್ನು ನೀಡುತ್ತಿದ್ದು, ಒಟ್ಟು ಹೃದಯ ಶಸ್ತ್ರ ಚಿಕಿತ್ಸೆಗಳಲ್ಲಿ ಶೇ.10ರಷ್ಟು ಶಸ್ತ್ರ ಚಿಕಿತ್ಸೆಗಳು ನಮ್ಮ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ.

ಕೇವಲ 800 ಅವೆುರಿಕನ್ ಡಾಲರ್ ವೆಚ್ಚದಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂಬುದು ನಮ್ಮ ಗುರಿ' ಎಂದು ಹೇಳಿದರು.`ಜಗತ್ತಿನಲ್ಲಿಯೇ ಅಮೆರಿಕೆಯ ಆಸ್ಪತ್ರೆಗಳು ಗುಣಮಟ್ಟದ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿದ್ದರೂ, 200 ರೋಗಿಗಳಲ್ಲಿ ಒಬ್ಬರು ವೈದ್ಯಕೀಯ ತಪ್ಪುಗಳಿಂದ ಸಾವನ್ನಪ್ಪುತ್ತಿದ್ದಾರೆ.ವೈದ್ಯರಾದವರು ಶಿಷ್ಟಾಚಾರ, ಯೋಜನಾ ಪ್ರಕಾರ ಕಾರ್ಯನಿರ್ವಹಿಸದ ಕಾರಣ ಹೀಗಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಕಂಪ್ಯೂಟರ್ ಯಂತ್ರಗಳಿಗೆ ಎರಡನೆಯ ಸಲಹೆ ಕೇಳಿ ಚಿಕಿತ್ಸೆ ನೀಡುವುದು ಕಾನೂನಾಗುವ ಸಾಧ್ಯತೆ ಇದೆ' ಎಂದರು.`ಆರೋಗ್ಯ ಕ್ಷೇತ್ರದ ಸಿ.ಟಿ., ಎಂ.ಆರ್.ಐ ನಂತಹ ಯಂತ್ರಗಳನ್ನು 5-6 ವರ್ಷಗಳ ನಂತರ ಬಳಕೆಗೆ ಯೋಗ್ಯವಲ್ಲ ಎಂದು ಉತ್ಪಾದಕರು ತಿಳಿಸಿ, ಬೇರೆ ಉತ್ಪನ್ನಗಳನ್ನು ಖರೀದಿಸುವಂತೆ ಹೇಳುತ್ತಿದ್ದಾರೆ. ವೈದ್ಯಕೀಯ ವೆಚ್ಚ ದುಬಾರಿಗೆ ಇದೂ ಒಂದು ಕಾರಣವಾಗಿದ್ದು, ಅದನ್ನು ತಪ್ಪಿಸಬೇಕಿದೆ' ಎಂದು ಸಲಹೆ ನೀಡಿದರು.ಚಿನ್ನದ ಪದಕ: ಡಾ.ಶಿಲ್ಪಿ ಅಗರವಾಲ್, ಡಾ.ಪ್ರವೀಣ ಸಜ್ಜನರ, ಡಾ.ಮಹೇಶ ಕಾಪಶಿ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಬಿಎಲ್‌ಡಿಇ ಡೀಮ್ಡ ವಿವಿ ಅಡಿ ನಡೆಯುತ್ತಿರುವ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಭ್ಯಸಿಸಿದ 48 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 36 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಡಿಪ್ಲೊಮಾ, ನಾಲ್ವರಿಗೆ ಡಿಪ್ಲೊಮಾ, ಒಬ್ಬರಿಗೆ ಫೆಲೋಶಿಫ್ ಪದವಿಯನ್ನು  ವಿಶ್ವವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರದಾನ ಮಾಡಿದರು.ಉಪಕುಲಪತಿ ಡಾ.ಬಿ.ಜಿ. ಮೂಲಿಮನಿ ಸ್ವಾಗತಿಸಿದರು. ಡಾ.ಎಂ.ಐ. ಸವದತ್ತಿ, ಬಿ.ಆರ್. ಪಾಟೀಲ ಲಿಂಗದಳ್ಳಿ, ಡಾ.ವಿ.ಡಿ. ಪಾಟೀಲ, ಡಾ.ಜೆ.ಜಿ. ಅಂಬೇಕರ, ಡಾ.ಎಸ್.ಎಸ್. ದೇವರಮನಿ, ಡಾ.ಎಂ.ಎಸ್. ಬಿರಾದಾರ, ಡಾ.ತೇಜಶ್ವಿನಿ ವಲ್ಲಭ, ಡಾ.ಅನ್ನಪೂರ್ಣ ಸಜ್ಜನ, ಡಾ.ಎನ್.ಎಸ್. ಕುಲಕರ್ಣಿ ವೇದಿಕೆಯಲ್ಲಿದ್ದರು.ಮಹಿಳಾ ವಿವಿ ಕುಲಪತಿ ಡಾ.ಮೀನಾ ಚಂದಾವರಕರ್, ರಾಣಿ ಚೆನ್ನಮ್ಮ ವಿ.ವಿ. ಕುಲಪತಿ ಡಾ.ಬಿ.ಆರ್.ಅನಂತನ್, ಅಲ್-ಅಮೀನ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಎಸ್. ಪಾಟೀಲ, ಸೈನಿಕಶಾಲೆ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಇತರರು ಪಾಲ್ಗೊಂಡಿದ್ದರು.ಡಾ.ದೇವಿಶೆಟ್ಟಿ ಊವಾಚ

ವೈದ್ಯರ ಪೆನ್ನೇ ದುಬಾರಿ

ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ವೆಚ್ಚದಾಯಕ ಉಪಕರಣ ಎಂದರೆ ವೈದ್ಯರ ಪೆನ್ನು. ನೀವು ಸೂಚಿಸುವ ತಪಾಸಣೆಗಳು ರೋಗಿಯ ಪಾಲಿಗೆ ಎಷ್ಟೊಂದು ಹೊರೆಯಾಗುತ್ತವೆ ಎಂಬ ಅರಿವು ವೈದ್ಯರಿಗೆ ಇರಬೇಕು. ರೋಗಿಗೆ ಔಷಧಿ-ತಪಾಸಣೆ ಬರೆಯುವಾಗ ವೈದ್ಯರು ತಮ್ಮ ಪೆನ್‌ನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕು.ಸಂಗಾತಿಯೇ ಉತ್ತಮ ನರ್ಸ್

ನಮ್ಮ ಸಂಗಾತಿ (ಪತಿ ಅಥವಾ ಪತ್ನಿ)ಗಿಂತ ಉತ್ತಮ ಸೇವೆ ಸಲ್ಲಿಸಲು ಯಾವ ನರ್ಸ್‌ಳಿಂದಲೂ ಸಾಧ್ಯವಿಲ್ಲ. ಮಹಿಳೆಯರಿಗೆ ಉದ್ಯೋಗ

ಪುರುಷರ ತನ್ನ ಸಂಬಳದ ಅರ್ಧ ಹಣವನ್ನು ಸ್ವಂತಕ್ಕೆ ಖರ್ಚು ಮಾಡುತ್ತಾನೆ. ಅದೇ ಮಹಿಳೆಗೆ ಉದ್ಯೋಗ ನೀಡಿದರೆ ಪೂರ್ತಿ ಸಂಬಳ ಆ ಕುಟುಂಬದ ಅಭಿವೃದ್ಧಿಗೆ ವ್ಯಯವಾಗುತ್ತದೆ.ಸಾಮ್ಯತೆ

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸರ್ಕಾರಗಳು ಯಶಸ್ವಿನಿ ಮಾದರಿಯ ಆರೋಗ್ಯ ವಿವೆು ಜಾರಿಗೆ ತಂದಿವೆ. ಇವುಗಳಲ್ಲಿ ಸಾಮ್ಯತೆ ಎಂದರೆ ಆ ಯೋಜನೆಗಳಿಗೆಲ್ಲ ರಾಜಕಾರಣಿಗಳ ಹೆಸರು ಇಟ್ಟಿರುವುದು!

ಪುಣ್ಯತಿಥಿ-ಹುಟ್ಟುಹಬ್ಬ

ಈ ಹಿಂದೆ ಭಾರತದಲ್ಲಿ 58 ವರ್ಷಕ್ಕೆ ನಿವೃತ್ತಿಯಾಗಿ 65 ವರ್ಷಕ್ಕೆ ಪುಣ್ಯತಿಥಿ (ಮರಣ) ಎಂಬ ಮಾತಿತ್ತು. ಆದರೆ, ವೈದ್ಯಕೀಯ ಕ್ಷೇತ್ರದ ತಾಂತ್ರಿಕತೆ, ಆವಿಷ್ಕಾರಗಳಿಂದ ಇಂದು 60 ವರ್ಷಕ್ಕೆ ನಿವೃತ್ತಿಯಾಗಿ ನೆಮ್ಮದಿ ಜೀವನ ನಡೆಸಿ 95ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಮಹಿಳೆಯರಿಂದ ಶಸ್ತ್ರಚಿಕತ್ಸೆ

ನಮ್ಮಲಿರುವ ಗ್ರಾಮೀಣ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಹರ್ನಿಯಾದಂತಹ ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಬಹುದು. ಆದರೆ, ಇದನ್ನು ನಮ್ಮ ಅಧಿಕಾರಯುತ ಸಂಸ್ಥೆಗಳು ವಿರೋಧಿಸುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry