ಬುಧವಾರ, ನವೆಂಬರ್ 13, 2019
28 °C

`ಹೃದ್ರೋಗಕ್ಕೆ 27 ಲಕ್ಷ ಬಲಿ'

Published:
Updated:

ಬೆಂಗಳೂರು: `ಅತಿಯಾದ ಮಾನಸಿಕ ಒತ್ತಡ ಮತ್ತು ರಕ್ತದ ಒತ್ತಡದಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳಿಗೆ 27 ಲಕ್ಷ ಮಂದಿ ತುತ್ತಾಗಿದ್ದು, 2030ರ ವೇಳೆಗೆ ಇವರ ಸಂಖ್ಯೆ 40 ಲಕ್ಷಕ್ಕೆ ಏರಿಕೆಯಾಗಲಿದೆ' ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಶನಿವಾರ ನಡೆದ `ರಕ್ತದ ಒತ್ತಡ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಸಿಮ್ ಕಾರ್ಡ್ ವಿತರಣೆಗೆ ರಕ್ತದ ಒತ್ತಡ ಹಾಗೂ ಮಧುಮೇಹ ಕಾಯಿಲೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣ ಪತ್ರ ನೀಡಿಕೆ ಕಡ್ಡಾಯಗೊಳಿಸಿದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸುಲಭವಾಗುತ್ತದೆ' ಎಂದು ಹೇಳಿದರು.`ಜಾಗತೀಕರಣ, ಆಧುನೀಕರಣದ ಹಿನ್ನೆಲೆಯಲ್ಲಿ ಬದಲಾದ ಜೀವನಶೈಲಿಯಂದಾಗಿ ರಕ್ತದ ಒತ್ತಡ, ಮಧುಮೇಹ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಅನಾರೋಗ್ಯದ ಕಾರಣ ಅಸುನೀಗುತ್ತಿರುವವರಲ್ಲಿ ಶೇ 55 ರಷ್ಟು ಮಂದಿ ಈ ಸಾಂಕ್ರಾಮಿಕವಲ್ಲದ ರೋಗ ಹೊಂದಿದ್ದಾರೆ' ಎಂದರು.`ರಕ್ತದ ಒತ್ತಡದಿಂದ ಮಿದುಳು ಸ್ರಾವ, ಮರೆಗುಳಿತನ ಹಾಗೂ ಹೃದಯ ಸಂಬಂಧಿಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ. ರಕ್ತದ ಒತ್ತಡ ನಿಯಂತ್ರಣಕ್ಕೆ ಬಂದ ದಿನದಿಂದಲೇ ಏಕಾಏಕಿ ಔಷಧಿ ಸೇವನೆಯನ್ನೇ ನಿಲ್ಲಿಸುವ ರೋಗಿಗಳ ಸಂಖ್ಯೆ ಸಾಕಷ್ಟಿದೆ. ಇದು ತಪ್ಪು ಕಲ್ಪನೆ, ಮಾತ್ರೆಗಳ ಪ್ರಮಾಣವನ್ನು ಕಡಿಮೆ ಮಾಡಬೇಕೇ ವಿನಃ ಔಷಧಿಯಿಂದ ದೂರವುಳಿಯುವುದು ಸರಿಯಲ್ಲ' ಎಂದು ಸಲಹೆ ನೀಡಿದರು.`ವೇಗದ ಬದುಕು ಹಾಗೂ ಚಿಕ್ಕ ಕುಟುಂಬ ವ್ಯವಸ್ಥೆಯಿಂದ ರಕ್ತದ ಒತ್ತಡ ಹೆಚ್ಚುತ್ತಿದೆ. ದೇಶದಲ್ಲಿ 25 ವಯೋಮಿತಿಗಿಂತಲೂ ಮೇಲ್ಪಟ್ಟ ಸುಮಾರು 9 ಕೋಟಿ ಜನರು ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ, ಸುಮಾರು 18 ಕೋಟಿ ಮಂದಿ ರಕ್ತದೊತ್ತಡದ ಹೊಸ್ತಿಲಲ್ಲಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದರು.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಆರ್.ಆರ್.ಜನ್ನು, `ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕಾಗಿ ಉಡುಪಿ, ಚಿಕ್ಕಮಗಳೂರು, ಕೋಲಾರ,ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಯೋಜನೆಯನ್ನು ಜಾರಿಗೆ ತರಲಾಗಿದೆ. 15 ಲಕ್ಷ ಮಂದಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಅದರಲ್ಲಿ ಶೇ 4ರಷ್ಟು ಮಂದಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ' ಎಂದು ತಿಳಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಬಿ.ಎನ್.ಧನ್ಯಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಡಾ. ಪವನ್‌ಕುಮಾರ್, ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಡಾ. ಆರ್.ಗಿರಿಧರ್ ಬಾಬು ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)