ಹೆಂಡತಿಗೂ ಸಂಬಳ ಬೇಕೇ?

7

ಹೆಂಡತಿಗೂ ಸಂಬಳ ಬೇಕೇ?

Published:
Updated:
ಹೆಂಡತಿಗೂ ಸಂಬಳ ಬೇಕೇ?

ಕಳೆದ ಸೆಪ್ಟೆಂಬರ್ 9ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣಾ ತಿರಥ್ ಸಂಸತ್ತಿನಲ್ಲಿ ಒಂದು `ಸ್ಫೋಟಕ~ ಮಸೂದೆಯನ್ನು ಮಂಡಿಸಿದರು. ಮನೆವಾರ್ತೆ ವಹಿಸಿಕೊಂಡಿರುವ ಗೃಹಿಣಿಗೆ ಅವಳ ಪತಿ ತನ್ನ ಮಾಸಿಕ ಆದಾಯದ ಸ್ವಲ್ಪ ಅಂಶವನ್ನು (ಸುಮಾರು ಶೇ 10-20ರಷ್ಟು, ಅದಿನ್ನೂ ನಿಗದಿಯಾಗಿಲ್ಲ) ಪ್ರತಿ ತಿಂಗಳೂ ನೀಡತಕ್ಕದ್ದು ಎಂದು ಆ ಮಸೂದೆ ಹೇಳುತ್ತದೆ.

 

ಇದು ಇನ್ನು ಐದಾರು ತಿಂಗಳೊಳಗೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಈ ಮಸೂದೆ ಕಾರ್ಯರೂಪಕ್ಕೆ ಬರಬೇಕಾದರೆ, ಇದರ ಸಾಧಕ ಬಾಧಕಗಳ ಬಗ್ಗೆ ಹಲವು ಮಹಿಳಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜೊತೆ, ಸಚಿವರ ಸಭೆಯಲ್ಲಿ ಮತ್ತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಈ ಯೋಜನೆಯನ್ನು ಶ್ಲಾಘಿಸಿದ್ದಾರೆ. ಪ್ರಸ್ತುತ ಲಿಂಗಭೇದವಿಲ್ಲದೆ ಎಲ್ಲರ ಬಾಯಲ್ಲೂ ಇದೊಂದು ಚರ್ಚಾ ವಿಷಯವಾಗಿ ಕೇಳಿಬರುತ್ತಿದೆ.

ಸಚಿವೆ ಹೇಳುವಂತೆ ಮಸೂದೆಯ ಉಪಯುಕ್ತತೆ ಇಂತಿದೆ:

* ನಿರಂತರ ಮನೆಯೊಳಗೇ ದುಡಿಯುವ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಇದರಿಂದ ಸುಧಾರಿಸಲಿದ್ದು, ಅವರ ಸಬಲೀಕರಣ ಸಾಧ್ಯವಾಗುತ್ತದೆ. ಕಚೇರಿ, ಶಿಕ್ಷಣ ಸಂಸ್ಥೆ, ಬ್ಯಾಂಕು ಇತ್ಯಾದಿಗಳಲ್ಲಿ ದುಡಿಯುವವರಿಗೆಲ್ಲಾ ಕೆಲಸದ ಅವಧಿ ಸೀಮಿತವಾಗಿರುತ್ತದೆ; ಕೆಲಸಕ್ಕೆ ತಕ್ಕ ಸಂಭಾವನೆ ಇರುತ್ತದೆ; ಬೇಕಾದಷ್ಟು ರಜಾ ದಿನಗಳೂ ಸಿಗುತ್ತವೆ; ಸಮಾಜದಲ್ಲಿ ಗೌರವ ದೊರೆಯುತ್ತದೆ. ಆದರೆ ಎಲೆಮರೆಯ ಕಾಯಿಯಂತೆ ಮನೆಯೊಳಗೆ ಬಂಧಿಯಾಗಿ ಕಾರ್ಯ ನಿರ್ವಹಿಸುವ ಮಹಿಳೆಯರ ಕೆಲಸಕ್ಕೆ ಮಿತಿಯೇ ಇಲ್ಲ, ಸಮಾಜದಲ್ಲಿ ಸ್ಥಾನಮಾನವೂ ಇಲ್ಲ.* ಅಡುಗೆ ಮಾಡುವುದು, ಮಕ್ಕಳ ಪಾಲನೆ ಪೋಷಣೆ ಹೆಂಗಸರ ಕರ್ತವ್ಯವೆಂದೇ ಪರಿಗಣಿಸಲಾಗುತ್ತದೆ. ಇದಲ್ಲದೆ ಮನೆಯಲ್ಲಿ ಹೇರಳವಾಗಿರುವ ಇತರ ಕೆಲಸಗಳನ್ನು ಗೃಹಿಣಿ ಮಾಡುತ್ತಿರುವುದು ಗಂಡಸರ ಗಮನಕ್ಕೇ ಬರುವುದಿಲ್ಲ. ಆದರೆ ಒಂದು ದಿನ ಬೆಳಗಿನ ಉಪಾಹಾರ ಸಮಯಕ್ಕೆ ಸರಿಯಾಗಿ ಸಿದ್ಧವಾಗದಿದ್ದರೆ ಮನೆಯಲ್ಲಿ ಅಸಮಾಧಾನ ಭುಗಿಲೇಳುತ್ತದೆ.ಇಂಥ ಯಾಂತ್ರಿಕ, ಏಕತಾನತೆಯ ಬದುಕನ್ನು ಬಾಳುವ ಮಹಿಳೆಗೆ ಗಂಡನ ಸಂಬಳದ ಕಾಲಂಶವನ್ನಾದರೂ ಪಡೆಯುವ ಅಧಿಕಾರ ನೀಡಿದರೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ದೊರೆಯುತ್ತದೆ. ತಾನು ಯಾವುದೇ ಉದ್ಯೋಗಸ್ಥ ಮಹಿಳೆಗೂ ಕಡಿಮೆಯಿಲ್ಲ ಎಂಬ ಭಾವನೆ ಬರುತ್ತದೆ. * ಮನೆ ಕೆಲಸಗಳಿಗೆ ಸಹಾಯಕರನ್ನು ನೇಮಿಸಿದರೆ ಅವರಿಗೆ ಸಂಬಳ ಕೊಡುತ್ತೇವೆ, ಆದರೆ ಅವೇ ಕೆಲಸಗಳನ್ನು ಗೃಹಿಣಿ ನಿಭಾಯಿಸಿದರೆ ಅವಳಿಗೆ ಸಂಭಾವನೆ ಇಲ್ಲ. ಗಂಡನ ಸಂಬಳದಲ್ಲಿ ಪಾಲು ದೊರೆತರೆ ಅವಳ ಕೆಲಸಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಮನೆಯ ಖರ್ಚಿನ ಬಗ್ಗೆ ಅವಳು ಹೆಚ್ಚು ತಲೆಕೆಡಿಸಿಕೊಳ್ಳ ಬೇಕಾಗಿಲ್ಲ.ಕೃಷ್ಣಾ ತಿರಥ್‌ರ ಈ ಆಶಯ ಏನೇ ಇರಲಿ, ಈ ಮಸೂದೆಗೆ ಸ್ವಾಗತ ಕೇಳಿಬಂದಷ್ಟೇ ಪ್ರಮಾಣದಲ್ಲಿ ಹಲವಾರು ಸಂಘ ಸಂಸ್ಥೆಗಳಿಂದ, ಸಂಘಟನೆಗಳಿಂದ ವಿರುದ್ಧ ಪ್ರತಿಕ್ರಿಯೆಗಳೂ ಬರತೊಡಗಿವೆ. ಉದಾಹರಣೆಗೆ ಎಂ.ಎ.ಎಸ್.ಇ.ಎಸ್ ಎಂಬ ಸ್ತ್ರೀಯರ ಸಂಘಟನೆ, ಇದೊಂದು ಅಸಂಬದ್ಧ ಯೋಜನೆ ಎಂದು ಹೀಯಾಳಿಸಿದೆ. ಸೇವ್ ಫ್ಯಾಮಿಲಿ ಫೌಂಡೇಷನ್ ಎಂಬ ಪುರುಷರ ಸಂಘಟನೆ ಈ ಮಸೂದೆಯನ್ನು ಅನುಷ್ಠಾನಗೊಳಿಸಬಾರದು ಎಂದು ಕೇಳಿಕೊಂಡಿದೆ. ಇಂತಹ ಸಂಘಟನೆಗಳಿಂದ ಬಂದಿರುವ ಕೆಲವು ಪ್ರತಿಕ್ರಿಯೆಗಳು ಹೀಗಿವೆ:* ಪತಿಯ ವೇತನದ ಒಂದು ಸಣ್ಣ ಪಾಲನ್ನು ಪತ್ನಿಗೆ ಕೊಡುವುದರಿಂದ ಪುರುಷ ಪ್ರಧಾನ ಸಮಾಜಕ್ಕೆ ನಾವು ಇನ್ನಷ್ಟು ಮನ್ನಣೆ ಕೊಟ್ಟಂತಲ್ಲವೇ? ಗಂಡ ಮನೆಯ ಯಜಮಾನ, ಹೆಂಡತಿ ಜೀತದಾಳು ಎಂಬ ಭಾವನೆಯನ್ನು ದೃಢಪಡಿಸಿ ಹೆಂಡತಿಯ ಅಸ್ತಿತ್ವಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೇ?* ಗಂಡ- ಹೆಂಡತಿಯ ಪವಿತ್ರ ಸಂಬಂಧವನ್ನು ಇದು ನಾಶ ಮಾಡದೇ? ಕುಟುಂಬದ ಶಾಂತಿ, ಸಮಾಧಾನಗಳನ್ನು ಕದಡದೇ? ಅದುವರೆಗೂ ಮನೆ ಕೆಲಸದಲ್ಲಿ ಹೆಗಲು ಕೊಡುತ್ತಿದ್ದ ಗಂಡ `ನಾನವಳಿಗೆ ಸಂಬಳ ಕೊಡುತ್ತೇನಲ್ಲ? ಮನೆ ಕೆಲಸವೆಲ್ಲ ಅವಳೇ ಮಾಡಲಿ, ನಾನು ಸಹಾಯ ಮಾಡಬೇಕಾಗಿಯೇ ಇಲ್ಲ~ ಎಂಬ ಧೋರಣೆ ತಾಳಬಹುದು. ಗಂಡ ಹೆಂಡತಿ ಎಲ್ಲದರಲ್ಲೂ ಸಮಾನರು, ಅವರು ಒಬ್ಬರಿಗೊಬ್ಬರು ಪೂರಕವಾಗಿರಬೇಕು, ಮನೆಕೆಲಸಗಳನ್ನು ಹಂಚಿಕೊಂಡು ಮಾಡಬೇಕು ಎಂಬ ವಿಚಾರವೆಲ್ಲಾ ಅಳಿದು ಹೋಗಬಹುದು.* ಖರ್ಚುಗಳನ್ನು ನಿಭಾಯಿಸಲಾಗದೇ ಮಧ್ಯಮ ವರ್ಗದ ಕೆಲ ಗೃಹಿಣಿಯರು ಬಿಡುವಿನ ಸಮಯದಲ್ಲಿ ಸಣ್ಣಪುಟ್ಟ ಕೆಲಸಗಳನ್ನು (ಮನೆಪಾಠ, ಹೊಲಿಗೆ, ಕಸೂತಿ ಇತ್ಯಾದಿ) ಹಚ್ಚಿಕೊಂಡು ಹಣ ಸಂಪಾದಿಸುತ್ತಾರೆ. ಅಂಥವರು `ನಾವ್ಯಾಕೆ ಇಂಥ ಕೆಲಸ ಮಾಡಬೇಕು, ಹೇಗೂ ಗಂಡ ದುಡ್ಡು ಕೊಡಲೇಬೇಕಲ್ಲ~ ಎಂದು ನಿರಾಳವಾಗಿ ಇರಬಹುದು.

ದುಡ್ಡು ಕೊಡಲು ಹೆಣಗಾಡುವ ಗಂಡ, ಪಡೆಯುವುದು ತನ್ನ ಹಕ್ಕು ಎಂದು ವಾದಿಸುವ ಹೆಂಡತಿ, ಸದಾ ಬೆಳೆಯುತ್ತಲೇ ಹೋಗುವ ವೆಚ್ಚಗಳು, ಸಾಲದ ಹೊರೆ- ಕುಟುಂಬದ ಶಾಂತಿ ಹಾಳಾಗಲು ಇಷ್ಟು ಸಾಲದೇ? ಇನ್ನು ಈ ಪರಿಸರದಲ್ಲಿ ಬೆಳೆಯುವ ಮಕ್ಕಳು ಹೇಗಾಗಬಹುದು?* ಶ್ರಿಮಂತ ಕುಟುಂಬಗಳಲ್ಲಿ ಪ್ರತಿ ತಿಂಗಳೂ ಗಂಡನಿಂದ ತನ್ನ ಬ್ಯಾಂಕಿಗೆ ಹಣ ಜಮೆಯಾದರೆ, ಹೆಂಡತಿ ಶೋಕಿ ವಸ್ತುಗಳಿಗಾಗಿ, ಅಲಂಕಾರ ಪ್ರಸಾಧನಗಳಿಗಾಗಿ ಹಾಗೂ ಮೋಜಿಗಾಗಿ ದುಂದುವೆಚ್ಚ ಮಾಡಬಹುದು.* ಕೆಳಸ್ತರದ ಕುಟುಂಬಗಳಲ್ಲಿ ಗಂಡಸರ ಆದಾಯವೇ ಅತ್ಯಲ್ಪವಾಗಿದ್ದು, ಅಲ್ಲಿ ಇಂಥ ಕಾನೂನಿನಿಂದ ತೊಂದರೆಯೇ ಆಗಬಹುದು. ಕೂಲಿ ಕೆಲಸಕ್ಕೆ ಹೋಗುವವರು ತಮಗೆ ಬರುವ ದಿನಗೂಲಿಯಲ್ಲಿ ಹೆಂಡತಿಗೆ ಎಷ್ಟು ತಾನೇ ಕೊಡಲು ಸಾಧ್ಯ? ಮನೆ ಖರ್ಚುಗಳನ್ನು ನಿಭಾಯಿಸ ಬೇಕಾದರೆ, ಮಹಿಳೆಯರೂ ಹೊರಗೆ ದುಡಿದು ಸಂಪಾದಿಸಲೇ ಬೇಕಾಗುತ್ತದೆ. ಗಂಡಸರು ಕುಡಿತದ ಚಟಕ್ಕೆ ದಾಸರಾದರೆ, ಈ ಮಸೂದೆ ಸಹಾಯಕ್ಕೆ ಬರುವುದೇ ಇಲ್ಲ ಎಂಬ ಟೀಕೆಗಳೂ ಕೇಳಿಬಂದಿವೆ.* ಪತಿಯ ಪಗಾರದಲ್ಲಿ ಪತ್ನಿಗೆ ಪಾಲು ಕೊಡಿಸಬೇಕೆಂಬ ಬಗ್ಗೆ ಕೆಲವು ಹಾಸ್ಯೋಕ್ತಿಗಳೂ ಹುಟ್ಟಿಕೊಂಡಿವೆ. ಒಬ್ಬ ಪತಿ ಹೇಳುತ್ತಾನೆ `ನಮ್ಮ ಮನೆಯಲ್ಲಿ ಕೆಲಸ ಮಾಡೋದೆಲ್ಲಾ ನನ್ನ ತಾಯಿ. ಹೆಂಡತಿ ಊಟ ಮಾಡ್ತಾಳೆ ಮತ್ತೆ ಟಿ.ವಿ ನೋಡ್ಕೊಂಡಿರ್ತಾಳೆ. ನಾನು ಯಾರಿಗೆ ಸಂಭಾವನೆ ಕೊಡಲಿ?~ ಇನ್ನೊಬ್ಬ ಪತಿ ಹೇಳುತ್ತಾನೆ `ನನಗೆ ಇಬ್ಬರು ಹೆಂಡತಿಯರಿದ್ದಾರೆ, ನಾನು ಯಾರಿಗೆ ಹಣ ಕೊಡಲಿ?~

***

ಒಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರುವ ಉದ್ದೇಶ ಏನೇ ಆಗಿದ್ದರೂ ಅದೊಂದು ಕೇವಲ ಹಕ್ಕು ಚಲಾಯಿಸುವ ಅಸ್ತ್ರವಾಗಿ, ಕುಟುಂಬ ಕಲ್ಯಾಣದ ಬದಲು, ಕುಟುಂಬ ನಾಶಕ್ಕೆ ನಾಂದಿಯಾಗಬಾರದು. ಅದು ಕುಟುಂಬದ ಒಳಿತಿಗಾಗಿ ಇರಬೇಕೇ ಹೊರತು ಕೆಡುಕಿಗಲ್ಲ. ಹೀಗಾಗಿ ಕಾಯ್ದೆ  ಜಾರಿಗೊಳಿಸುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಯೋಚಿಸಿ, ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಅಗತ್ಯ.ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣ ಆಗಬೇಕಿದ್ದರೆ ಇಂತಹ ಕಾನೂನುಗಳಿಗಿಂತ ಹೆಚ್ಚಾಗಿ, ಕೆಳಗಿನ ಕೆಲವು ಸುಧಾರಣೆಗಳತ್ತ ಸರ್ಕಾರ ಗಮನ ಹರಿಸಿದರೆ ಒಳ್ಳೆಯದು:

ಪತಿಯ ಪಗಾರದಲ್ಲಿ ಪಾಲು ಸಿಗುವುದಕ್ಕಿಂತ ಹೆಚ್ಚಾಗಿ ತಾನೇ ದುಡಿದು ಸಂಪಾದಿಸಿದರೆ ಪತ್ನಿಗೆ ಆರ್ಥಿಕ ಸ್ವಾತಂತ್ರ್ಯ, ತನ್ಮೂಲಕ ಆತ್ಮವಿಶ್ವಾಸ ಒಡಮೂಡುತ್ತದೆ. ಹೀಗಾಗಿ ಮಹಿಳೆಯರಿಗೆ ಅರ್ಹತಾನುಸಾರ ಉದ್ಯೋಗ ಸಿಗುವಂತಾಗಬೇಕು.ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಜಾರಿಗೊಳಿಸಬೇಕು.ಅಲ್ಲಲ್ಲಿ ಶಿಶುಪಾಲನಾ ಕೆಂದ್ರಗಳನ್ನು ತೆರೆಯಬೇಕು. ಅಲ್ಲಿ ಮಕ್ಕಳ ಅಭಿವೃದ್ಧಿ ಹಾಗೂ ಸುರಕ್ಷೆಗೆ ಪ್ರಾಮುಖ್ಯತೆ ನೀಡಬೇಕು.ಯಾವುದೇ ಕೆಲಸಕ್ಕೆ ವೇತನ ನಿಗದಿ ಮಾಡುವಾಗ ಸ್ತ್ರೀ- ಪುರುಷ ಎಂಬ ಭೇದಭಾವ ಇರಬಾರದು. ಗಂಡನ ಸಮಸ್ತ ಆಸ್ತಿಯಲ್ಲೂ ಅರ್ಧದಷ್ಟು ಹಕ್ಕು ಅವಳಿಗೆ ಸಿಗುವಂತಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry