ಹೆಗಲತ್ತಿ ಗ್ರಾಮದ ರೈತರ ಆತಂಕ

7
ತೀರ್ಥಹಳ್ಳಿ: `ಎತ್ತಿಗೆ ಜ್ವರ ಎಮ್ಮೆಗೆ ಬರೆ'

ಹೆಗಲತ್ತಿ ಗ್ರಾಮದ ರೈತರ ಆತಂಕ

Published:
Updated:

ತೀರ್ಥಹಳ್ಳಿ: ಭೂ ನ್ಯಾಯ ಮಂಡಳಿ ಅಕ್ರಮವಾಗಿ ತಾಲ್ಲೂಕಿನ ಹೆಗಲತ್ತಿ ಗ್ರಾಮದ ಸರ್ವೇ ನಂ.47ರಲ್ಲಿ 162 ಎಕರೆ ದಟ್ಟ ಅರಣ್ಯ ಪ್ರದೇಶವನ್ನು ಮಂಜೂರು ಮಾಡಿರುವ ಪ್ರಕರಣ ಈಗ ಬಗರ್ ಹುಕುಂ ಸಾಗುವಳಿ ರೈತರಿಗೆ ಶಾಪವಾಗಿದೆ.ಬಗರ್‌ಹುಕುಂ ಸಾಗುವಳಿ ರೈತರಿಗೆ ಫಾರಂ.ನಂ. 53ರಲ್ಲಿ ಮಂಜೂರು ಮಾಡಿರುವ ಅಲ್ಪ ವಿಸ್ತೀರ್ಣದ(ಒಂದೆರಡೆಕರೆ) ಭೂ ಮಂಜೂರಾತಿಯನ್ನು ರದ್ದುಗೊಳಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಕೈಹಾಕಿರುವುದು ಬೆಳಕಿಗೆ ಬಂದಿದ್ದು `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎಂಬಂತಾಗಿದೆ.ಕೆಲವು ವರ್ಷಳಿಂದ ಹೆಗಲತ್ತಿ ಗ್ರಾಮದಲ್ಲಿ ಬಗರ್‌ಹುಕುಂ ಭೂಮಿಯನ್ನು ನಂಬಿಕೊಂಡ ರೈತರಿಗೆ ಈಗ ದಿಕ್ಕು ತೋಚದಂತಾಗಿದೆ. ಕಾನೂನು ಬಾಹಿರವಾಗಿ ಭೂ ನ್ಯಾಯ ಮಂಡಳಿ ಹೆಗಲತ್ತಿ ಗ್ರಾಮದ 162 ಎಕರೆ ಭೂ ಮಂಜೂರಾತಿಗೆ ಅನುಮೋದನೆ ನೀಡಿರುವ ಬೆನ್ನಲ್ಲಿಯೇ ಬಡ ರೈತರಿಗೆ ನೀಡಿರುವ ಭೂ ಮಂಜೂರಾತಿಯನ್ನು ರದ್ದುಗೊಳಿಸುವಂಥಹ ಪ್ರಯತ್ನಕ್ಕೆ ಮುಂದಾಗಿರುವುದು ಅಚ್ಚರಿ ತಂದಿದೆ.ಭಾನುವಾರ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ವಿವಾದಿತ ಹೆಗಲತ್ತಿ ಗ್ರಾಮದ 162 ಎಕರೆ ಪ್ರದೇಶದ ಪರಿಶೀಲನೆ ನಡೆಸಿದ ನಂತರ ತಹಶೀಲ್ದಾರ್ ಅವರಿಗೆ ಸ್ಥಳದಲ್ಲಿಯೇ ಬಗರ್‌ಹುಕುಂ ಭೂ ಮಂಜೂರಾತಿಯ ಕಡತ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುವಂತೆ ಸೂಚಿಸಿರುವುದು ರೈತರ ನಿದ್ದೆಗೆಡಿಸಿದೆ.5 ಸೆ. 2011ರಂದು ನಡೆದ ಬಗರ್‌ಹುಕುಂ ಭೂ ಸಕ್ರಮೀಕರಣ ಸಭೆಯಲ್ಲಿ ಹೆಗಲತ್ತಿ ಗ್ರಾದ ಸರ್ವೇ ನಂ. 47ರಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಖುಷ್ಕಿ, ತರಿ, ಬಾಗಾಯ್ತು ಪ್ರದೇಶವನ್ನು 34 ಮಂದಿ ರೈತರಿಗೆ ತಲಾ ಅರ್ದ, ಒಂದು, ಎರಡು ಎಕರೆಯಂತೆ ಮಂಜೂರು ಮಾಡಲಾಗಿದೆ.ಈ ರೈತರು ಸರ್ಕಾರದ ನಿಯಮದಂತೆ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಮಂಜೂರಾತಿಗೆ ಪಡೆದುಕೊಂಡಿದ್ದಾರೆ. ಭೂ ಮಂಜೂರಾತಿ ಸಂಬಂಧ ಸರ್ಕಾರಕ್ಕೆ ಕಿಮ್ಮತ್ತು ಪಾವತಿಸಿ ಈಗಾಗಲೇ ಹಕ್ಕು ಪತ್ರ ಪಡೆದುಕೊಂಡಿದ್ದಾರೆ.ಭೂ ನ್ಯಾಯ ಮಂಡಳಿ ಇದೇ ಸರ್ವೇ ನಂಬರ್‌ನಲ್ಲಿ 162 ಎಕರೆ ಪ್ರದೇಶವನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಿರುವುದು ಈ ಬಡ ರೈತರ ಹಕ್ಕನ್ನು ಕಸಿದುಕೊಳ್ಳುವಂಥಹ ಸಂದರ್ಭವನ್ನು ಸೃಷ್ಟಿಸಿದೆ. ಆತಂಕದಲ್ಲಿರುವ ರೈತರು ಕಂದಾಯ ಇಲಾಖೆಯ ಧೋರಣೆಗೆ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ.ಸಾಗುವಳಿ ಮಾಡದ 162 ಎಕರೆ ಪ್ರದೇಶವನ್ನು ಮಂಜೂರು ಮಾಡುವ ಆಡಳಿತ ಜೀವನಕ್ಕಾಗಿ ಸಾಗುವಳಿ ಮಾಡಿದ ಪ್ರದೇಶದ ಮಂಜೂರಾತಿ ಪಡೆದಿರುವ ನಮ್ಮಗಳ ಮೇಲೆ ಇಲಾಖೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಇಲ್ಲಿನ ರೈತರದ್ದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry