ಹೆಗ್ಗವಾಡಿಪುರ: ಸಮಸ್ಯೆಯ ಮಹಾಪೂರ

7
ಗ್ರಾಮ ಸಂಚಾರ

ಹೆಗ್ಗವಾಡಿಪುರ: ಸಮಸ್ಯೆಯ ಮಹಾಪೂರ

Published:
Updated:
ಹೆಗ್ಗವಾಡಿಪುರ: ಸಮಸ್ಯೆಯ ಮಹಾಪೂರ

ಸಂತೇಮರಹಳ್ಳಿ: ಹಳ್ಳ ಬಿದ್ದು ಗುಂಡಿಯಾಗಿರುವ ರಸ್ತೆ, ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು, ವಾಹನ ಸವಾರರ ಸರ್ಕಸ್, ಶಾಲೆಗೆ ತೆರಳುವ ಚಿಣ್ಣರ ಸಂಕಷ್ಟ....

ಇದು ಹೆಗ್ಗವಾಡಿಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮುಖ್ಯ ರಸ್ತೆಯ ದುಸ್ಥಿತಿ.ಗ್ರಾಮದಲ್ಲಿದ್ದ ಮುಖ್ಯ ರಸ್ತೆಯು 1 ಕಿ.ಮೀ. ವರೆಗೆ ಡಾಂಬರೀಕರಣದಿಂದ ಕೂಡಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಹಣ ಬಿಡುಗಡೆಯಾಗಿತ್ತು. 15 ದಿನಗಳ ಹಿಂದೆ ದುರಸ್ತಿಗೊಳಿಸುವುದಾಗಿ ರಸ್ತೆಯನ್ನು ಜೆಸಿಬಿ ಯಂತ್ರಗಳ ಮೂಲಕ ಕಿತ್ತು ಹಾಕಲಾಗಿದೆ. ರಸ್ತೆಯನ್ನು ದುರಸ್ತಿಪಡಿಸದೆ ಕಾಮಗಾರಿಯನ್ನು ಅಪೂರ್ಣಗೊಳಿಸಲಾಗಿದೆ. ಇದರಿಂದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ.ಗ್ರಾಮವನ್ನು ಸೇರಲು ಪರ‌್ಯಾಯ ಮಾರ್ಗವಿಲ್ಲದೇ ಈ ರಸ್ತೆಯನ್ನೇ ಜನತೆ ಅವಲಂಬಿಸಬೇಕಾಗಿದೆ. ಮಳೆಗಾಲ ವಾಗಿರುವುದರಿಂದ ರಸ್ತೆಯುದ್ದಕ್ಕೂ ಗುಂಡಿಯಾಗಿ ನೀರು ನಿಲ್ಲುತ್ತದೆ. ಇಲ್ಲಿ ನಿತ್ಯ ಸಂಚರಿಸುವ ಶಾಲಾ ಮಕ್ಕಳು ಬವಣೆ ಪಡುವಂತಾಗಿದೆ.ಗ್ರಾಮದ ಒಂದು ಬಡಾವಣೆಯಲ್ಲಿ ಇದುವರೆವಿಗೂ ಚರಂಡಿ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮಣ್ಣು ಸುರಿಸುವುದರಿಂದ ರಸ್ತೆಯ ಎತ್ತರ ಹೆಚ್ಚುತ್ತದೆ. ಇದರಿಂದ ರಸ್ತೆಗೆ ಬಿದ್ದ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಈ ನಿವಾಸಿಗಳ ಕೂಗಿಗೆ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.ಗ್ರಾಮದ ಒಳ ಭಾಗದಲ್ಲಿರುವ ಓವರ್‌ಹೆಡ್ ಟ್ಯಾಂಕ್ ಬಳಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಸಿ 3 ತಿಂಗಳು ಕಳೆದಿದೆ. ವಾಲ್‌ಗೇಟ್ ಅಳವಡಿಸಲು ಗುಂಡಿ ತೆಗೆಯಲಾಗಿದೆ. ಕಾಮಗಾರಿ ಮುಗಿದ ನಂತರ ಗುಂಡಿಯನ್ನು ಮುಚ್ಚಿಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯ ಮೋಟಾರ್ ಯಂತ್ರ ಕೆಟ್ಟಿದ್ದರಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಕಿರು ನೀರು ಸರಬರಾಜು ಘಟಕದ 2 ತೊಂಬೆಗಳು ನೀರು ಕಾಣದೆ ಅನಾಥವಾಗಿ ನಿಂತಿವೆ. ಮತ್ತೊಂದು ಕೊಳವೆ ಬಾವಿಯಿಂದ 2 ಬಡಾವಣೆಯ ನಿವಾಸಿಗಳು ನೀರು ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಈ ಬಡಾವಣೆಗಳಿಗೆ ಲಭ್ಯವಿರುವ ಓವರ್ ಹೆಡ್ ಟ್ಯಾಂಕ್‌ನಿಂದ 4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂಬ ನಿವಾಸಿಗಳ ಒತ್ತಾಯಕ್ಕೆ ಮನ್ನಣೆ ದೊರೆತಿಲ್ಲ. ಅಪೂರ್ಣಗೊಂಡಿರುವ ಗ್ರಾಮದ ಮುಖ್ಯ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಗ್ರಾಮದ ಪ್ರತಿ ಬಡಾವಣೆಗೂ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ನೀರು ಲಭ್ಯವಿರುವ ಕೊಳವೆ ಬಾವಿ ಮೋಟಾರ್ ದುರಸ್ತಿ ಪಡಿಸಿ ಕುಡಿಯುವ ನೀರು ಒದಗಿಸಬೇಕು ಎಂದು ಡಿ.ಜಿ.ಕುಮಾರ್, ಮಹದೇವಸ್ವಾಮಿ ಆಗ್ರಹಿಸಿದ್ದಾರೆ.`ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಕ್ಷಣದಲ್ಲಿ ಕ್ರಮಕೈಗೊಳ್ಳಲಾಗುವುದು' ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಮಂಜುಳಾ `ಪ್ರಜಾವಾಣಿ'ಗೆ ತಿಳಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry