ಮಂಗಳವಾರ, ಮೇ 17, 2022
26 °C

ಹೆಗ್ಗೋಡು ನಾಡಿನ ಸಾಂಸ್ಕೃತಿಕ ತೀರ್ಥಕ್ಷೇತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಚಟುವಟಿಕೆಗಳು ನೀನಾಸಂನಿಂದ ನಿರಂತರವಾಗಿ ನಡೆಯುತ್ತಿರುವ ಕಾರಣಕ್ಕೆ ಹೆಗ್ಗೋಡು ನಾಡಿನ ಸಾಂಸ್ಕೃತಿಕ ತೀರ್ಥಕ್ಷೇತ್ರವಾಗಿದೆ ಎಂದು ಈಟಿವಿ ಮುಖ್ಯಸ್ಥ ಪವನ್‌ಕುಮಾರ್ ಮಾನ್ವಿ  ಹೇಳಿದರು.ಇಲ್ಲಿಗೆ ಸಮೀಪದ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಸಂಸ್ಥೆ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ ‘ಊರುಮನೆ ಉತ್ಸವ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕೆ.ವಿ.ಸುಬ್ಬಣ್ಣ ಅವರು ಆರಂಭಿಸಿದ ಸಂಸ್ಕೃತಿ ಉಳಿಸುವ ಕೆಲಸವನ್ನು ನೀನಾಸಂ ಅರ್ಥಪೂರ್ಣವಾಗಿ ಮುಂದುವರೆಸಿದೆ ಎಂದರು.ನೀನಾಸಂನ ಕೆ.ವಿ.ಅಕ್ಷರ ಮಾತನಾಡಿ, ನಮ್ಮ ಊರು ಹಾಗೂ ಸುತ್ತಮುತ್ತಲ ಊರುಗಳಲ್ಲಿ ಅನೇಕ ಆಚರಣೆ ಹಾಗೂ ಸಂಪ್ರದಾಯಗಳು ರೂಢಿಯಲ್ಲಿವೆ. ಇವೆಲ್ಲವೂ ಸೇರಿಯೆ ಒಂದು ಊರಿನ ಒಟ್ಟೂ ಸಂಸ್ಕೃತಿ ರೂಪುಗೊಳ್ಳುತ್ತದೆ. ಇಂತಹ ಸಂಸ್ಕೃತಿಯ ಅನ್ವೇಷಣೆಯ ಉದ್ದೇಶದಿಂದಲೆ ಊರುಮನೆ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಊರುಮನೆ ಉತ್ಸವದಲ್ಲಿ ಅದ್ಬುತ ಕಲಾ ಪ್ರದರ್ಶನ ನಡೆಯಬೇಕು ಎಂಬ ಅಪೇಕ್ಷೆಗಿಂತ ಕಲಾ ಕ್ಷೇತ್ರದಲ್ಲಿ ಸ್ವಲ್ಪ ಕಲಿಯುತ್ತಿರುವ ಮತ್ತು ಕಲಿಯುವಿಕೆಯ ಪರಸ್ಪರ ಕೊಡು ಕೊಳ್ಳುವಿಕೆ ನಡೆಯುವುದು ಮುಖ್ಯ. ಈ ಮೂಲಕ ನಮ್ಮನ್ನು ನಾವು ಕನ್ನಡಿಯೊಳಗೆ ನೋಡಿಕೊಂಡ ರೀತಿಯಲ್ಲಿ ಉತ್ಸವ ನಡೆಯುತ್ತದೆ. ವಿವಿಧ ಕಲಾ ಪ್ರದರ್ಶನಗಳ ಜೊತೆಗೆ ಸ್ಥಳೀಯ ಗ್ರಾಮಗಳ ತಂಡಗಳಿಂದ ನಾಟಕ ಪ್ರದರ್ಶನ ಕೂಡ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.ನೀನಾಸಂನ ಎಚ್.ವಿ. ಚಂದ್ರಶೇಖರ್ ಹಾಜರಿದ್ದರು. ಆರಂಭದಲ್ಲಿ ಬಳ್ಳಿಬೈಲು ಗ್ರಾಮದ ಕುಣಬಿ ಜನಾಂಗದವರಿಂದ ಕುಣಬಿ ನೃತ್ಯ ಪ್ರದರ್ಶನ ನಡೆಯಿತು. ನಂತರ ಚಂದನ್‌ಬಾಬು ಮತ್ತು ಶೌರಿಕಾಶಿ ಅವರಿಂದ ಲಘು ಸಂಗೀತ, ತೇಜಸ್ವಿ ಮಹಿಳಾ ಮಂಡಳಿಯಿಂದಸುಗಮ ಸಂಗೀತ, ಹೆಬ್ಬೈಲು ಗ್ರಾಮದ ನಮ್ಕಂಪ್ನಿ ತಂಡದಿಂದ ‘ಬಣ್ಣದ ಗುಬ್ಯಾರು ಮಳೆರಾಜ’ ನಾಟಕ ಮಹದೇವ ಹಡಪದ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.