ಗುರುವಾರ , ಅಕ್ಟೋಬರ್ 17, 2019
21 °C

ಹೆಚ್ಚಾದ ಅಕ್ರಮ ಮದ್ಯದ ಹಾವಳಿ

Published:
Updated:

ಬೆಂಗಳೂರು:  ನೆಲಮಂಗಲ ತಾಲ್ಲೂಕಿನಲ್ಲಿ ಥರ್ಡ್ಸ್ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದ ಹಾವಳಿ ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ 2011-12 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಪಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ. ಎನ್.ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು, 2006ರಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಕಳ್ಳಬಟ್ಟಿ ಸಾರಾಯಿ ದುರಂತಕ್ಕೆ ಮೂಲ ಕಾರಣವಾಗಿದ್ದ ಈ ವ್ಯಕ್ತಿ ಇದೀಗ ತೋಟಗಳಲ್ಲಿ ಅಕ್ರಮ ಮದ್ಯ ತಯಾರಿಸಿ ತಾಲ್ಲೂಕಿನಾದ್ಯಂತ ಸರಬರಾಜು ಮಾಡಿ, ಕೈಗೆಟುಕುವ ಬೆಲೆಗೆ ಥರ್ಡ್ಸ್ ಮದ್ಯವನ್ನು ಚಿಲ್ಲರೆ ಹಾಗೂ ದಿನಸಿ ಅಂಗಡಿಗಳ ಮೂಲಕ ಮಾರಾಟ ಮಾಡುವ ಜಾಲವನ್ನೇ ಹುಟ್ಟು ಹಾಕಿದ್ದಾನೆ ಎಂದು ದೂರಿದರು.ಆದರೆ, ಈ ವ್ಯಕ್ತಿ ಇದುವರೆಗೆ ಕಾನೂನಿನ ಕೈಗೆ ದೊರೆಯದೇ ಇರುವುದು ಅಚ್ಚರಿ ತಂದಿದೆ. ಈ ದಂಧೆಯ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಸ್ಥಳೀಯ ಪೊಲೀಸರು ಏಕೆ ಮೌನ ವಹಿಸಿದ್ದಾರೆ? ಎಂದು ಪ್ರಶ್ನಿಸಿದರು. ಕೃಷ್ಣಪ್ಪ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಈ ಬಗ್ಗೆ ಅಬಕಾರಿ ಇಲಾಖೆಯಿಂದ ವಿವರಣೆ ಪಡೆಯಲು ಅಪೇಕ್ಷಿಸಿದರಾದರೂ, ಇಲಾಖೆಯ ಉಪ ಆಯುಕ್ತರು ಸಭೆಗೆ ಗೈರು ಹಾಜರಾಗಿದ್ದರಿಂದ ಕೆಂಡಾಮಂಡಲವಾಗಿ ಸಭೆಗೆ ಬಾರದಿದ್ದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಸೂಚಿಸಿದರು.`ಸದಸ್ಯರ ಆರೋಪವನ್ನು ಲಘುವಾಗಿ ಪರಿಗಣಿಸಲಾಗದು. ಇದರಲ್ಲಿ ಸರ್ಕಾರಕ್ಕೆ ಉಂಟಾಗುತ್ತಿರುವ ಆದಾಯದ ಸೋರಿಕೆ ಅಥವಾ ತೆರಿಗೆ ವಂಚನೆಗಿಂತಲೂ ಅಮಾಯಕ ಜನರ ಆರೋಗ್ಯ ಮುಖ್ಯ. ಈ ಹಿನ್ನೆಲೆಯಲ್ಲಿ ಕೂಡಲೇ ವಿಚಾರಣೆ ನಡೆಸುವ ಮೂಲಕ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು~ ಎಂದು ಸಚಿವರು ಜಿಲ್ಲಾಧಿಕಾರಿ ಆರ್. ಕೆ. ರಾಜು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಿ. ಪ್ರಕಾಶ್ ಅವರಿಗೆ ನಿರ್ದೇಶನ ನೀಡಿದರು.ವೈನ್ ಸ್ಟೋರ್‌ಗಳು ಬಾರ್‌ಗಳಾಗಿ ಪರಿವರ್ತನೆ: ಮದ್ಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಜೆ. ನರಸಿಂಹಸ್ವಾಮಿ, ವೈನ್ ಸ್ಟೋರ್‌ಗಳಲ್ಲಿ ಕೇವಲ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ, ಹಲವೆಡೆ ವೈನ್ ಸ್ಟೋರ್‌ಗಳು ಬಾರ್‌ಗಳಾಗಿ ಪರಿವರ್ತಿತವಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇದಕ್ಕೆ ಸ್ಪಂದಿಸಿದ ಸಚಿವ ಬಚ್ಚೇಗೌಡ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಬಕಾರಿ ಇಲಾಖೆಯ ಉಪ ಆಯುಕ್ತರು ಪ್ರತಿ ತಿಂಗಳು ಸಭೆ ನಡೆಸಿ ಈ ಅಕ್ರಮ ಕೊನೆಗಾಣಿಸಲು ಕ್ರಮ ಕೈಗೊಳ್ಳಬೇಕು ಎಂದರು.ಮರದ ಅಡಿ ಜೂಜಾಟ!: ನೆಲಮಂಗಲ ತಾಲ್ಲೂಕಿನ ನೆಲಮಂಗಲ, ದಾಬಸ್‌ಪೇಟೆ ಹಾಗೂ ತ್ಯಾಮಗೊಂಡ್ಲು ಪ್ರದೇಶಗಳಲ್ಲಿ ಮರಗಳಡಿ ಗುಂಪು ಗುಂಪಾಗಿ ಜೂಜಾಟ ಆಡುವವರ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯ ಕೆ.ಸಿ. ವೇಣುಗೋಪಾಲ್ ಒತ್ತಾಯಿಸಿದರು. ಈ ಬಗ್ಗೆ ಗಮನಹರಿಸಿ ಜೂಜುಕೋರರನ್ನು ಬಂಧಿಸಲು ಕ್ರಮ ಜರುಗಿಸುವಂತೆ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದರು.ಆರೋಗ್ಯ ಇಲಾಖೆ ಖಾಲಿ! ಶಾಸಕ ಎಂ.ವಿ. ನಾಗರಾಜು ಮಾತನಾಡಿ, ಎಲ್ಲರಿಗೂ ಆರೋಗ್ಯ ರಕ್ಷಣೆ ಒದಗಿಸಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವವೇ ಮಾಯವಾಗಿ ಅನಾರೋಗ್ಯಕ್ಕೆ ಆಮಂತ್ರಣ ನೀಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮೋರೆಡ್ಡಿ, ಜಿಲ್ಲೆಯಲ್ಲಿ ಕೇವಲ ವೈದ್ಯರ ಕೊರತೆ ಮಾತ್ರವಲ್ಲದೆ, ಸಿಬ್ಬಂದಿ ಕೊರತೆಯೂ ಇದೆ. ಇಲಾಖೆಯಲ್ಲಿ ಮಂಜೂರಾಗಿರುವ `ಡಿ~ ಗುಂಪಿನ 128 ಹುದ್ದೆಗಳ ಪೈಕಿ ಕೇವಲ 28 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ನೂರು ಹುದ್ದೆಗಳು ಖಾಲಿ ಇವೆ ಎಂದು ಸಭೆಯ ಗಮನಸೆಳೆದರು.ಜಿಲ್ಲಾ ಆರೋಗ್ಯಾಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, `ಸಮಸ್ಯೆಗಳಿಗೆ ಸಬೂಬು ಹೇಳುವ ಬದಲು ಬಗೆಹರಿಸುವ ಬಗ್ಗೆ ಚಿಂತಿಸಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ಹೊರಗುತ್ತಿಗೆ ಆಧಾರದ ಮೇರೆಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು~ ಎಂದು ಸೂಚಿಸಿದರು.ನೆಲಮಂಗಲ ಶಾಸಕ ಎಂ.ವಿ. ನಾಗರಾಜು, ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತಿರುವರಂಗ ವಿ. ನಾರಾಯಣಸ್ವಾಮಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕಲ್ಪನಾ ಆನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ  ಪಾಲ್ಗೊಂಡಿದ್ದರು.

Post Comments (+)