`ಹೆಚ್ಚಿದ ವಿಕೃತಿ; ಕುಸಿದ ಮೌಲ್ಯಗಳು'

7

`ಹೆಚ್ಚಿದ ವಿಕೃತಿ; ಕುಸಿದ ಮೌಲ್ಯಗಳು'

Published:
Updated:
`ಹೆಚ್ಚಿದ ವಿಕೃತಿ; ಕುಸಿದ ಮೌಲ್ಯಗಳು'

ಬೆಂಗಳೂರು: `ಶ್ರವಣ ದೋಷವಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಸ್ವಾವಲಂಬಿಗಳಾಗಿ ರೂಪಿಸುವ ಅಗತ್ಯವಿದೆ' ಎಂದು ಮಾಜಿ ಸಚಿವೆ ರಾಣಿ ಸತೀಶ್ ಅಭಿಪ್ರಾಯಪಟ್ಟರು.`ಫೌಂಡೇಶನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್' ಸಂಸ್ಥೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಗುರುವಾರ 2013ರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶ್ರವಣ ದೋಷವಿರುವ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.`ಕೆಲವರು ದೇಹದ ಅಂಗಾಂಗಗಳು ಸರಿ ಇದ್ದರೂ ಬುದ್ಧಿಮಾಂದ್ಯರಂತೆ ನಟಿಸುತ್ತಾರೆ. ಆದರೆ ನಿಜವಾಗಿ ದೋಷ ಹೊಂದಿರುವವರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಶ್ಲಾಘನೀಯ. ಇಂತಹವರಿಗೆ ಹೆಚ್ಚಿನ ನೆರವು ನೀಡಬೇಕಿದೆ' ಎಂದರು. `ಸಮಾಜದಲ್ಲಿ ವಿಕೃತಿ ಹೆಚ್ಚುತ್ತಿರುವ ಕಾರಣ ಮೌಲ್ಯಗಳು ಕುಸಿಯುತ್ತಿವೆ. ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದ್ದು, ಮೌಲ್ಯ ಮರು ಸ್ಥಾಪಿಸುವ ಶಿಕ್ಷಣ ನೀಡಬೇಕಿದೆ' ಎಂದು ತಿಳಿಸಿದರು.ಚಲನಚಿತ್ರ ನಟಿ ರೂಪಾ ಅಯ್ಯರ್ ಮಾತನಾಡಿ, `ಶ್ರವಣ ದೋಷವಿರುವ ಮಕ್ಕಳು ತಮಗೆ ಸಹಾಯ ಮಾಡುವವರು ಯಾರೂ ಇಲ್ಲ ಎಂದು ಎದೆಗುಂದಬಾರದು. ಬದಲಿಗೆ ತಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕಷ್ಟಪಟ್ಟು ಮೇಲೆ ಬರಬೇಕು' ಎಂದು ಕರೆ ನೀಡಿದರು.`ಶ್ರವಣ ದೋಷವಿರುವ ಮಕ್ಕಳ ಸಾಧನೆ ಎಲ್ಲದಕ್ಕಿಂತ ಮಿಗಿಲಾದುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಗುರಿ. ಏಡ್ಸ್ ಪೀಡಿತ 150ಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದೇನೆ. ಶ್ರವಣ ದೋಷವಿರುವ ಮಕ್ಕಳ ಸೇವೆಗೂ ಸಿದ್ದಳಿದ್ದೇನೆ. ಯಾವುದೇ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಬಹುದು' ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಟಿ.ಎನ್.ರಮೇಶ್ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry