ಶನಿವಾರ, ಜನವರಿ 18, 2020
21 °C

ಹೆಚ್ಚಿನವರು ಕಂಡಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಎಂಥ, ಶೂಟ್‌ ಮಾಡ್ಬೇಕಾ?’ ಸಾಮಾಜಿಕ ಜಾಲತಾಣಗಳಲ್ಲಿ ವಾರದಿಂದೀಚೆಗೆ ಹೆಚ್ಚು ಚಾಲ್ತಿಯಲ್ಲಿ ಇರುವ ಸಾಲಿದು. ‘ಸಿಂಪಲ್ಲಾಗ್ ಒಂದ್‌ ಲವ್‌ಸ್ಟೋರಿ’ಯನ್ನ ಗೆಲ್ಲಿಸಿದ ಯುವಸಮೂಹ ಈಗ ಅದೇ ಚಿತ್ರತಂಡದ ಹೊಸ ಪ್ರಯೋಗದ ಮೋಡಿಗೊಳಗಾಗಿ ಮತ್ತೆ ಮತ್ತೆ ಯೂಟ್ಯೂಬ್ ಒಳಗೆ ಇಣುಕುತ್ತಿದೆ.

‘ಎಂಥ, ಶೂಟ್‌ ಮಾಡ್ಬೇಕಾ?’ ಎಂಬ ಡೈಲಾಗು ಅವರ ದೈನಂದಿನ ಬದುಕಿನ ಭಾಗವೇ ಆಗುತ್ತಿದೆ! ಇಂಥದ್ದೊಂದು ಕ್ರೇಜ್ ಹುಟ್ಟುಹಾಕಿರುವುದು ‘ಉಳಿದವರು ಕಂಡಂತೆ’ ಚಿತ್ರದ ಟ್ರೇಲರ್‌. ‘ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ಯ ಹೀರೊ ರಕ್ಷಿತ್‌ ಶೆಟ್ಟಿ ಅಭಿನಯದ ಜೊತೆ ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿಯನ್ನೂ ಧರಿಸಿರುವ ‘ಉಳಿದವರು ಕಂಡಂತೆ’ ಚಿತ್ರದ ಟ್ರೇಲರ್‌ ಬಿಡುಗಡೆಯಾದ ಒಂದು ವಾರದಲ್ಲಿಯೇ ಯೂಟ್ಯೂಬ್‌ನಲ್ಲಿ ಲಕ್ಷ ವೀಕ್ಷಕರ ಸಂಖ್ಯೆ ದಾಟಿದೆ.

ಕನ್ನಡ ಚಿತ್ರರಂಗದ ಪಾಲಿಗೆ ಇದೊಂದು ದಾಖಲೆ ಕೂಡ. ಅದಕ್ಕೆ ಕಾರಣವಾಗಿರುವುದು ಟ್ರೇಲರ್‌ನಲ್ಲಿ ಮುದ ನೀಡುವ ಸಂಭಾಷಣೆಯ ಜೊತೆಗಿರುವ ಕುತೂಹಲ ಹುಟ್ಟಿಸುವ ದೃಶ್ಯ ತುಣುಕುಗಳು. ಟ್ರೇಲರ್‌ನಲ್ಲಿ ಮಾತ್ರವಲ್ಲ, ಇಡೀ ಚಿತ್ರದಲ್ಲಿಯೂ ಇಂಥದ್ದೇ ವಿಶಿಷ್ಟ ಅನುಭವ ನೀಡುತ್ತೇವೆ ಎನ್ನುತ್ತಿದೆ ಚಿತ್ರತಂಡ.ಬೆಂಗಳೂರು, ಮಂಡ್ಯ, ಮೈಸೂರು, ಕೆಲವೊಮ್ಮೆ ಉತ್ತರ ಕರ್ನಾಟಕದ ಭೂಗತ ಜಗತ್ತನ್ನು ತೋರಿಸುತ್ತಿದ್ದ ಚಿತ್ರರಂಗವನ್ನು ರಕ್ಷಿತ್‌ ಶೆಟ್ಟಿ ಉಡುಪಿಗೆ ಕೊಂಡೊಯ್ದಿದ್ದಾರೆ. ಸುಮಾರು ಎರಡು ವರ್ಷದ ಹಿಂದೆಯೇ ಕತೆ ಹೆಣೆದಿದ್ದ ರಕ್ಷಿತ್‌, ತಂಡ ಕಟ್ಟಿಕೊಂಡು ಚಿತ್ರೀಕರಣಕ್ಕೆ ಪೂರಕವಾದ ಸ್ಥಳಗಳನ್ನು ಹುಡುಕಿಕೊಂಡು ಮೂರು ತಿಂಗಳು ಸುತ್ತಾಡಿದ್ದಾರೆ. ಸಿನಿಮಾಗಳನ್ನು ನೋಡಿಯೇ ನಿರ್ದೇಶನದ ಕಲೆ ಕಲಿತ ರಕ್ಷಿತ್‌, ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವನ್ನು ಇಲ್ಲಿ ಬಳಸಿಕೊಂಡಿದ್ದಾರಂತೆ.

ಕಥನದ ಹಿನ್ನೆಲೆಯಲ್ಲಿರುವುದು 90ರ ದಶಕದ ಭೂಗತ ಜಗತ್ತಿನ ಕಥನ. ಜೊತೆಗೊಂದು ಪ್ರೇಮದ ಎಳೆಯೂ ಇದೆ. ಘಟನೆಯೊಂದರ ಎಳೆ ಹಿಡಿದು ತನಿಖಾ ವರದಿಗೆ ಬರುವ ಪತ್ರಕರ್ತೆಗೆ ಒಂದಕ್ಕೊಂದು ಬೆಸೆದ ಕೊಂಡಿಗಳು ಎದುರಾಗುತ್ತಾ ಹೋಗುತ್ತವೆ. ರಕ್ಷಿತ್‌ ರಾ ಲುಕ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಶೋರ್‌ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಯುತಕುಮಾರ್‌ ಹುಲಿ ವೇಷಧಾರಿಯಾಗಿ, ತಾರಾ ಮಗನನ್ನು ಕಳೆದುಕೊಂಡು ದುಃಖಿಸುವ ತಾಯಿಯಾಗಿ ನಟಿಸಿದ್ದಾರೆ.

‘ಸಿಂಪಲ್ಲಾಗ್‌....’ ಮಾತಿನ ಮಂಟಪ ಕಟ್ಟಿತ್ತು. ಆದರಿಲ್ಲಿ, ಸಂಭಾಷಣೆಗಿಂತ ದೃಶ್ಯಗಳೇ ಹೆಚ್ಚು ಮಾತನಾಡುತ್ತವೆಯಂತೆ. ಉಡುಪಿ, ಕುಂದಾಪುರ, ಮಂಡ್ಯ ಮತ್ತು ಬೆಂಗಳೂರು ಹೀಗೆ ಬೇರೆ ಬೇರೆ ಪ್ರಾಂತ್ಯಗಳ ಕನ್ನಡ ಒಂದೆಡೆ ಸೇರಿಕೊಳ್ಳುತ್ತವೆ. ಜೊತೆಗೆ ತುಳು ಭಾಷೆಯೂ ಇದೆ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.ಚಿತ್ರೀಕರಣ ನಡೆಸಿದ ಬಳಿಕ ಮಾತುಗಳನ್ನು ಡಬ್ಬಿಂಗ್‌ ಮೂಲಕ ಅಳವಡಿಸುವುದು ಸಾಮಾನ್ಯ. ‘ಉಳಿದವರು ಕಂಡಂತೆ’ ಚಿತ್ರತಂಡ ಡಬ್ಬಿಂಗ್‌ ನಡೆಸುತ್ತಿಲ್ಲ. ಚಿತ್ರೀಕರಣ ನಡೆಸುವಾಗಿನ ಸಂಭಾಷಣೆಗಳನ್ನೇ ಬಳಸಿಕೊಳ್ಳುತ್ತಿದೆ.ಉಳಿದವರಿಗೆ ಬಹುಪರಾಕ್‌!

‘ಉಳಿದವರು ಕಂಡಂತೆ’ ಚಿತ್ರದ ಜೊತೆಗೆ ಇದೇ ಚಿತ್ರತಂಡದ ‘ಬಹುಪರಾಕ್‌’ ಕೂಡ ಸಿದ್ಧವಾಗಿದೆ. ‘ಉಳಿದವರು...’ ಚಿತ್ರಕ್ಕೆ ಬಂಡವಾಳ ಹೂಡಿರುವ ಸುನಿ, ಶ್ರೀನಗರ ಕಿಟ್ಟಿ ನಾಯಕರಾಗಿರುವ ‘ಬಹುಪರಾಕ್‌’ಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ವ್ಯಕ್ತಿಯೊಬ್ಬನ ಬಾಲ್ಯ, ಯೌವನ, ಮಧ್ಯವಯಸ್ಸು ಮತ್ತು ಮುಪ್ಪಿನ ವಯೋಮಾನದ ಕಥನಗಳ ಸೂಕ್ಷ್ಮ ಚಿತ್ರಣ ಬಹುಪರಾಕ್‌.

ಆಗಾಗ್ಗೆ ತಪ್ಪು ಮಾಡುವ ಮತ್ತೆ ಸರಿದಾರಿಗೆ ಮರಳುವ ನಾಯಕನ ಬದುಕಿನ ವಿವಿಧ ಮಜಲುಗಳನ್ನು ರಂಜನೆ, ಭಾವುಕತೆ, ರೋಚಕತೆಗಳನ್ನು ಬೆರೆಸಿ ಕಟ್ಟಿಕೊಡುತ್ತಿದ್ದಾರಂತೆ ಸುನಿ. ಈ ಎಲ್ಲಾ ವಯೋಮಾನದ ಕಥನ ಒಟ್ಟಿಗೇ ಸಾಗಿ ಅಂತ್ಯದಲ್ಲಿ ಬೆಸೆದುಕೊಳ್ಳುತ್ತದೆ ಎನ್ನುತ್ತಾರೆ ಅವರು.ಈ ಎರಡೂ ಚಿತ್ರಗಳು ತೆರೆಕಾಣಲು ಸಿದ್ಧವಾಗಿವೆ. ‘ನಿನ್ನಂದಲೇ’, ‘ಬ್ರಹ್ಮ’ ಮುಂತಾದ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಸ್ವಲ್ಪ ತಡವಾಗಿ ಬರುವುದು ಸುನಿ ಲೆಕ್ಕಾಚಾರ. ‘ಉಳಿದವರು ಕಂಡಂತೆ’ಯನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಅವರು ಒಂದು ತಿಂಗಳ ಬಳಿಕ ‘ಬಹುಪರಾಕ್’ ಹೇಳಲು ಚಿಂತನೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)