ಮಂಗಳವಾರ, ನವೆಂಬರ್ 19, 2019
22 °C

`ಹೆಚ್ಚಿನ ವಿಕೆಟ್ ಪಡೆಯಲು ಯತ್ನಿಸುತ್ತೇನೆ'

Published:
Updated:

ಬೆಂಗಳೂರು: `ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತೋರಿದ ಬೌಲಿಂಗ್ ತೃಪ್ತಿ ನೀಡಿದೆ. ಮತ್ತೆ `ಪರ್ಪಲ್' ಕ್ಯಾಪ್ ಮರಳಿ ದೊರೆತದ್ದರಿಂದ ಖುಷಿಯಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಇನ್ನಷ್ಟು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಆರ್. ವಿನಯ್ ಕುಮಾರ್ ಹೇಳಿದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಏಳು ವಿಕೆಟ್‌ಗಳಿಂದ ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ಎದುರು ಗೆಲುವು ಪಡೆದಿತ್ತು. ಮೊದಲು ಬ್ಯಾಟ್ ಮಾಡಿ ರಾಯಲ್ಸ್ ನೀಡಿದ್ದ 118 ರನ್‌ಗಳ ಗುರಿಯನ್ನು ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ 17.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿತ್ತು. ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದ `ದಾವಣೆಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ವಿನಯ್ ಪಂದ್ಯ ಶ್ರೇಷ್ಠ ಗೌರವ ಪಡೆದಿದ್ದರು.`ರವಿ ರಾಂಪಾಲ್, ಆರ್.ಪಿ. ಸಿಂಗ್ ಹಾಗೂ ಇನ್ನಿತರ ಬೌಲರ್‌ಗಳೊಂದಿಗೆ ಬೌಲಿಂಗ್ ಮಾಡಿದ್ದು ಖುಷಿ ನೀಡಿದೆ. ನಾವು ಕಠಿಣ ಬೌಲಿಂಗ್ ಮಾಡಿ ರಾಯಲ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದೆವು. ಗೇಲ್ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟ ರೀತಿ ಖುಷಿ ನೀಡಿದೆ' ಎಂದೂ ವಿನಯ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ನೆಟ್‌ನಲ್ಲಿ ತುಂಬಾ ಹೊತ್ತು ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದೆ. ಅದಕ್ಕೆ ಪ್ರತಿಫಲ ಲಭಿಸಿದೆ. ಒತ್ತಡದ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದನ್ನು ಐಪಿಎಲ್‌ನಿಂದ ಕಲಿತುಕೊಂಡಿದ್ದೇನೆ.`ಪರ್ಪಲ್' ಕ್ಯಾಪ್ ಕಾಯಂ ಆಗಿ ನನ್ನಲ್ಲಿ ಉಳಿಯಬೇಕಾದರೆ, ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯ' ಎಂದು ವಿನಯ್ ನುಡಿದರು.ಗೆಲುವಿನ ದಾಖಲೆ ಸುಧಾರಿಸಿಕೊಳ್ಳುತ್ತೇವೆ: `ಹಿಂದಿನ ಪಂದ್ಯಗಳಲ್ಲಿ ಸತತ ಗೆಲುವು ಪಡೆದು ಈ ಋತುವಿನಲ್ಲಿ ಉತ್ತಮ ದಾಖಲೆ ಹೊಂದಿದ್ದೆವು. ಆದರೆ, ರಾಯಲ್ ಚಾಲೆಂಜರ್ಸ್ ಎದುರು ಸೋಲು ಕಂಡಿದ್ದು ನಿರಾಸೆ ಮೂಡಿಸಿದೆ. ಆದರೆ, ಮತ್ತೆ ಗೆಲುವಿನ ಹಾದಿಗೆ ಮರಳುವ ವಿಶ್ವಾಸವಿದೆ' ಎಂದು ರಾಯಲ್ಸ್ ತಂಡದ ನಾಯಕ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದರು.ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಸೋಲು ಎದುರಾದ ಬಗ್ಗೆ ಪ್ರತಿಕ್ರಿಯಿಸಿದ ದ್ರಾವಿಡ್, `ನಾನು ಹಾಗೂ ಸ್ಟುವರ್ಟ್ ಬಿನ್ನಿ ನಡುವಿನ ಜೊತೆಯಾಟ ಮುರಿದು ಬಿದ್ದ ನಂತರ ಮುಂದೆ ವೇಗವಾಗಿ ರನ್‌ಗಳು ಬರಲಿಲ್ಲ. ಕೊನೆಯ ಐದು ಓವರ್‌ಳಲ್ಲಿ 50 ರನ್‌ಗಳನ್ನಾದರೂ ಗಳಿಸಬೇಕಿತ್ತು' ಎಂದೂ ಅವರು ಅಭಿಪ್ರಾಯ ಪಟ್ಟರು.

ಪ್ರತಿಕ್ರಿಯಿಸಿ (+)