ಹೆಚ್ಚಿನ ಸ್ಥಾನಗಳಲ್ಲಿ ಜಯ: ಪರಮೇಶ್ವರ್ ವಿಶ್ವಾಸ

7

ಹೆಚ್ಚಿನ ಸ್ಥಾನಗಳಲ್ಲಿ ಜಯ: ಪರಮೇಶ್ವರ್ ವಿಶ್ವಾಸ

Published:
Updated:
ಹೆಚ್ಚಿನ ಸ್ಥಾನಗಳಲ್ಲಿ ಜಯ: ಪರಮೇಶ್ವರ್ ವಿಶ್ವಾಸ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 27 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸುವಂತಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.ಬೆಂಗಳೂರು ಮಹಾನಗರ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ದಿನೇಶ್ ಗುಂಡೂರಾವ್ ಮತ್ತು ಎಸ್.ಟಿ. ಸೋಮಶೇಖರ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿ ಜೆಡಿಎಸ್ ನೆಲೆ ಕಳೆದುಕೊಂಡಿದೆ. ಭ್ರಷ್ಟಾಚಾರದ ಕಾರಣ ಬಿಜೆಪಿಗೆ ಮುಖ ಉಳಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲವಾಗಿದೆ~ ಎಂದು ವ್ಯಂಗ್ಯವಾಡಿದರು.ಇತ್ತೀಚೆಗೆ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಾಂಧಿನಗರ ವಾರ್ಡ್‌ಗೆ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಿಂದ ಪಕ್ಷಕ್ಕೆ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದರು.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, `ನಾಡಿನ ಪ್ರಜ್ಞಾವಂತ ಜನತೆ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದಿಂದ ಜನ ಕಂಗೆಟ್ಟಿದ್ದಾರೆ. ನಮ್ಮ ಪಕ್ಷ ಕೆಟ್ಟ ಗಳಿಗೆಯಲ್ಲಿ ಸೋಲು ಕಂಡಿರಬಹುದು. ಆದರೆ ಈಗ ಒಳ್ಳೆಯ ಕಾಲ ಬಂದಿದೆ~ ಎಂದು ಹೇಳಿದರು.ರಾಜ್ಯದ ಸಾಲ ಹೆಚ್ಚಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಈ ಸರ್ಕಾರ ಜನತೆಯ ಮೇಲೆ 1.13 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹೊರಿಸಿದೆ. ಇಷ್ಟು ದೊಡ್ಡ ಮೊತ್ತದ ಸಾಲ ಮಾಡಿ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ ಎಂದರು.ಅಧಿಕಾರ ಸ್ವೀಕರಿಸಿ ಮಾತನಾಡಿದ ದಿನೇಶ್ ಮತ್ತು ಸೋಮಶೇಖರ್, `ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ~ ಎಂದು ಘೋಷಿಸಿದರು. ಮುಖಂಡರಾದ ಮೋಟಮ್ಮ, ಎನ್.ಎ. ಹ್ಯಾರಿಸ್, ರಾಮಲಿಂಗಾರೆಡ್ಡಿ, ಎಂ.ವಿ. ರಾಜಶೇಖರನ್, ಬಿ.ಎಲ್. ಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry