ಹೆಚ್ಚಿನ ಹಣ: ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಪತ್ರ

7

ಹೆಚ್ಚಿನ ಹಣ: ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಪತ್ರ

Published:
Updated:

ಬೆಂಗಳೂರು: ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಹಣ ನೀಡುವಂತೆ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ರೈಲುಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ರೈಲ್ವೆ ಸಚಿವರಾದ ದಿನೇಶ್ ತ್ರಿವೇದಿ, ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದಾರೆ.ಸಚಿವರು ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗದಗ- ವಾಡಿ, ಶ್ರೀನಿವಾಸಪುರ- ಮದನಪಲ್ಲಿ, ಬೆಂಗಳೂರು- ಕೆಂಗೇರಿ-ಕನಕಪುರ-ಚಾಮರಾಜನಗರ ಮಾರ್ಗದ ಯೋಜನೆಗಳನ್ನು ಪ್ರಕಟಿಸಿದ್ದು, ಕೂಡಲೇ ಅವುಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಈಚೆಗೆ ಚರ್ಚೆ ನಡೆಸಿದಾಗ ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳಿಗೆ 2,493 ಎಕರೆ ಭೂಮಿಯ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಈ ಪೈಕಿ 2,293 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ನೀಡಲಾಗಿದೆ. ಉಳಿದ 200 ಎಕರೆ ಭೂಮಿಯನ್ನು ಇದೇ 15ರ ಒಳಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಗದಗ-ವಾಡಿ, ಶ್ರೀನಿವಾಸಪುರ-ಮದನಪಲ್ಲಿ ಮಾರ್ಗದ ರೈಲ್ವೆ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಬೇಕು. ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ರೈಲ್ವೆ ಬೋಗಿ ಕಾರ್ಖಾನೆಗೆ ಬೇಕಾಗಿರುವ ಒಂದು ಸಾವಿರ ಎಕರೆ ಭೂಮಿಯನ್ನು ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಬಳಿ ಗುರುತಿಸಲಾಗಿದೆ. ಒಮ್ಮೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಾಗವನ್ನು ಅಂತಿಮಗೊಳಿಸಿದರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry