ಹೆಚ್ಚುತ್ತಿರುವ ಅಸಹಿಷ್ಣುತೆ, ಗಂಡಾಂತರಕಾರಿ ಬೆಳವಣಿಗೆ

7

ಹೆಚ್ಚುತ್ತಿರುವ ಅಸಹಿಷ್ಣುತೆ, ಗಂಡಾಂತರಕಾರಿ ಬೆಳವಣಿಗೆ

Published:
Updated:

ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಸಿ.ಎನ್. ರಾಮಚಂದ್ರನ್‌ ಬರೆದ ಲೇಖನ (‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ?’, ಪ್ರಜಾವಾಣಿ ಸೆ. 19)  ಸಕಾಲಿಕ­ವಾಗಿದೆ. ಈ ವಿಷಯಕ್ಕೆ ಸಂಬಂಧಿ­ಸಿದಂತೆ ಸಂವಿಧಾನದಲ್ಲಿ ಅಡಕವಾಗಿರುವ ವಿಷಯಗಳನ್ನು ಪ್ರಸ್ತಾಪಿಸಿ­ರುವುದು ಓದುಗರ ಅರಿ­ವನ್ನು ವಿಸ್ತರಿಸುತ್ತದೆ. ಇಂತಹ ಮೌಲಿಕ ಲೇಖನ ಪ್ರಕಟಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಧನ್ಯವಾದಗಳು.ಇತ್ತೀಚಿನ ಎರಡು–ಮೂರು ದಶಕಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ನಮ್ಮ ಸಮಾಜದ ಅಸಹಿಷ್ಣುತೆ ವೃದ್ಧಿಸುತ್ತಿರುವುದರ ಸಂಕೇತ­ವಾಗಿದೆ. ಇದೊಂದು ಗಂಡಾಂತರಕಾರಿ ಬೆಳ­ವಣಿಗೆಯೇ ಸರಿ. ಕಲೆ, ಸಾಹಿತ್ಯ, ಮಾಧ್ಯಮಗಳು ಮುಂತಾದುವುಗಳ ಮೇಲೆ ನೈತಿಕ ಪೊಲೀಸ್‌ಗಿರಿಯ ಪ್ರಹಾರಗಳು ಜರುಗುತ್ತಲೇ ಇವೆ. ಎಲ್ಲ ಧರ್ಮಗಳ ಮೂಲಭೂತವಾದಿಗಳು, ಮತಾಂಧರು ಹಾಗೂ ಇತರ ಸಂಕುಚಿತ ದೃಷ್ಟಿ­ಕೋನದ ಶಕ್ತಿಗಳು ಈ ವಿಷಯದಲ್ಲಿ ಪೈಪೋಟಿಗೆ ಇಳಿದಂತೆ ಭಾಸವಾಗುತ್ತಿವೆ! ಇಂತಹವರು ಅಲ್ಪ­ಸಂಖ್ಯಾತರು. ಆದರೆ ಬಹುಸಂಖ್ಯಾತರ ಮೌನ ಇಂತಹವರಿಗೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ಅಭಿವ್ಯಕ್ತಿ ಹರಣದ ಎರಡು ಪ್ರಕರಣಗಳನ್ನು ಗಮನಿ ಸೋಣ. ಪ್ರಖ್ಯಾತ ಲೇಖಕ, ಜನಪದ ವಿದ್ವಾಂಸ ಎ.ಕೆ. ರಾಮಾನುಜನ್‌ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಸಿದ್ಧ ಪ್ರಬಂಧ­ವಿದೆ. ಅದು ದೆಹಲಿ ವಿಶ್ವವಿದ್ಯಾಲಯದ ಪಠ್ಯದಲ್ಲಿ ಅಡಕ­ವಾಗಿತ್ತು.ಸುಮಾರು ಎರಡು ವರ್ಷಗಳ ಹಿಂದೆ, ನಮ್ಮ ಪ್ರಧಾನಿಯ ಮಗಳು ಈ ಪ್ರಬಂಧದ ಬಗೆಗೆ ಪಾಠ ಮಾಡುತ್ತಿ­ದ್ದಾಗ, ಹಿಂದೂತ್ವದ ವಿದ್ಯಾರ್ಥಿ ಸಂಘಟನೆಯೊಂದರ ಕೆಲವು ಸದಸ್ಯರು ತರಗತಿಯ ಒಳಗೆ ನುಗ್ಗಿ ದಾಂದಲೆ ಮಾಡಿದರು. ಕೆಲವು ಪೀಠೋಪಕರ ಣಗಳನ್ನು ಧ್ವಂಸ ಮಾಡಿದರು. ಈ ಕರಾಳ ಘಟನೆ ಜರುಗುವ ಮುನ್ನವೇ ಈ ಪ್ರಬಂಧ ಹಿಂದೂತ್ವ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ನಿರಂತರ ಒತ್ತಡವನ್ನು ಈ ತರಹದ ಶಕ್ತಿಗಳು ಪ್ರಯೋಗಿಸಿದವು. ಇದಕ್ಕೆ ಮಣಿದು ದೆಹಲಿ ವಿಶ್ವವಿದ್ಯಾಲಯ ಈ ಪ್ರಬಂಧವನ್ನು ಪಠ್ಯದಿಂದ ವಾಪಸು ತೆಗೆದು ಕೊಂಡಿತು! ಈ ಕ್ರಮವನ್ನು ವಿರೋಧಿಸಿ ಕರ್ನಾಟಕದ ರಾಜಧಾನಿ ಬೆಂಗಳೂರು ಅಥವಾ ಇತರ ಸ್ಥಳಗಳಲ್ಲಿ ಯಾವ ಪ್ರತಿಭಟನೆಯ ಕಾರ್ಯಕ್ರಮವೂ ಜರುಗಲಿಲ್ಲ (ನನಗೆ ನೆನಪಿರುವಂತೆ).ಪ್ರಸ್ತುತ ‘ಢುಂಡಿ’ ಕಾದಂಬರಿ (ಯೋಗೇಶ್‌ ಮಾಸ್ಟರ್ ವಿರಚಿತ) ಸುದ್ದಿಯಲ್ಲಿದೆ. ಇದರ ವಿತರಣೆಗೆ ನ್ಯಾಯಾಲಯ ನಿರ್ಬಂಧ ಹೇರಿದೆ. ಕಾದಂಬರಿ ಲೋಕಾರ್ಪಣೆಗೊಂಡ ಎರಡು, ಮೂರು ದಿನಗಳಲ್ಲೇ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು ಎಂಬ ಕಾರಣವನ್ನು ಮೂಂದೊಡ್ಡಿ ಕೆಲವು ಶಕ್ತಿಗಳು ಪೊಲೀಸರ ಬಳಿ ದೂರನ್ನು ದಾಖಲಿಸಿದವು. ನಂತರದ ಬೆಳವಣಿಗೆಗಳು ತಿಳಿದೇ ಇರುವುದರಿಂದ ಪ್ರಸ್ತಾಪಿಸುವ ಅಗತ್ಯವಿಲ್ಲ. ಆದರೆ ಈ ವಿಷಯದಲ್ಲೂ ಯಾವ ಪ್ರತಿಭಟನೆಯ ಕಾರ್ಯಕ್ರಮ ವ್ಯಾಪಕ ನೆಲೆಯಲ್ಲಿ ಜರುಗದೇ ಇರುವುದು ಅಚ್ಚರಿಯ ಸಂಗತಿ.ಕೆಲವು ಬರಹಗಾರರು ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಪ್ರಕರಣಗಳ ಬಗೆಗೆ ಸತತವಾಗಿ ತಮ್ಮ ವಿರೋಧದ ದನಿಯನ್ನು ಎತ್ತುತ್ತ ಬಂದಿದ್ದಾರೆ. ಆದರೆ ಪ್ರಗತಿಪರ ಲೇಖಕರು ಎಂದು ಗುರುತಿಸಲ್ಪಡುವ ಅನೇಕರು ಮೌನವಾಗಿಯೇ ಇರುತ್ತಾರೆ! ಇದೇನು ಜಾಣ ಕುರುಡೋ ಅಥವಾ ಕಿವುಡುತನವೋ ತಿಳಿದಿಲ್ಲ. ಇಂತಹವರಲ್ಲಿ ಕೆಲವರು ಅಕಾಡೆಮಿ ಸ್ಥಾನಗಳಿಗೆ, ವಿದೇಶದಲ್ಲಿ ಜರುಗುವ (ಕನ್ನಡ ಕೂಟಗಳು ನಡೆಸುವ) ಕಾರ್ಯಕ್ರಮಗಳಿಗೆ ಹಾಗೂ ಇತರ ಸೌಲಭ್ಯಗಳಿಗಾಗಿ ಸರ್ಕಾರದ ಮುಂದೆ ಹಲ್ಲುಗಿಂಜಿ ನಿಲ್ಲುತ್ತಾರೆ. ಪಕ್ಕದ ಹಳ್ಳಿ, ಹೋಬಳಿ, ತಾಲ್ಲೂಕಿನಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗೋ ಅಥವಾ ಮುಖ್ಯ ಅತಿಥಿಗಳಾಗೋ ಭಾಗವಹಿಸಲು ಹಿಂದೇಟು ಹಾಕುವ ಇಂತಹ ಮಂದಿ ವಿದೇಶದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ! ಇಂತಹವರು ಸಮಷ್ಟಿಯ ಹಿತದಲ್ಲಿ ಜರುಗುವ ಚಳವಳಿಗಳಲ್ಲಿ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಾರೆ!!ಅಲ್ಲದೇ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ’ದಂತಹ ಪ್ರಕರಣಗಳಿಗೆ ನಮ್ಮಲ್ಲಿನ ಕೆಲವು ಸಾಹಿತಿಗಳು, ಬರಹಗಾರರು ಸ್ಪಂದಿಸುತ್ತಿದ್ದಾರೆ. ಈ ಸ್ಪಂದನ ಒಂದು ವಿಸ್ತೃತ ನೆಲೆಯ ಚಳವಳಿಯ ರೂಪ ಪಡೆದರೆ ಇಂತಹ ಪ್ರಕರಣಗಳು ಕಡಿಮೆಯಾಗಬಹುದು. ಹಾಗಾಗಲಿ ಎಂದು ಹಾರೈಸೋಣ.....

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry