ಗುರುವಾರ , ಅಕ್ಟೋಬರ್ 17, 2019
22 °C

ಹೆಚ್ಚುತ್ತಿರುವ ಕುಡುಕರ ಸಂಖ್ಯೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟದಿಂದ ವಾರ್ಷಿಕವಾಗಿ 10 ಸಾವಿರ ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಹರಿದುಬರುತ್ತಿದೆ. ಆದರೆ 1.70 ಕೋಟಿ ಜನ ಮದ್ಯಪಾನಕ್ಕೆ ದಾಸರಾಗಿದ್ದಾರೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ.

ಶೇ 80ರಷ್ಟು ಪುರುಷರು ಮದ್ಯಪಾನ ಮಾಡುತ್ತಿದ್ದಾರೆ. ಈ ಚಟ ಹೆಚ್ಚಿದರೆ, ವಾರ್ಷಿಕ ಶೇ 15ರಷ್ಟು ಹೊಸ ಯುವ ಪೀಳಿಗೆ ಮದ್ಯಪಾನ ಮಾಡುವ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಪರಿಣಾಮ ಪ್ರತಿ ತಿಂಗಳು ಐದು ಕೋಟಿ ಲೀಟರ್ ಮದ್ಯ ಮಾರಾಟವಾದರೆ, ವಹಿವಾಟಿನಲ್ಲಿ ಪ್ರತಿ ವರ್ಷ ಶೇ 15ರಷ್ಟು ಬೆಳವಣಿಗೆಯಾಗುತ್ತಿದೆ.

ನಗರದಲ್ಲಿ ಬುಧವಾರ ಆರಂಭವಾದ ಮದ್ಯಪಾನದ ವಿರುದ್ಧ ಧರ್ಮಾಧಿಕಾರಿಗಳ ದುಂಡು ಮೇಜಿನ ಪರಿಷತ್ತಿನಲ್ಲಿ ಅಬಕಾರಿ ಜಂಟಿ ಆಯುಕ್ತ ಸಣ್ಣ ಬತ್ತಪ್ಪ, ಈ ಅಂಶಗಳನ್ನು ಬಹಿರಂಗಪಡಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 25 ಕೋಟಿ ಲೀಟರ್ ಮದ್ಯಸಾರ (ಆಲ್ಕೊ ಹಾಲ್) ತಯಾರಿಸಲಾಗುತ್ತಿದೆ. ಇದರಲ್ಲಿ ಐದು ಕೋಟಿ ಲೀಟರ್ ಇಂಧನದಲ್ಲಿ ಮಿಶ್ರಣ ಮಾಡಲು ಮೀಸಲಿಡಲಾಗುತ್ತದೆ. ಕೇರಳ, ಗೋವಾ ಹಾಗೂ ಆಂಧ್ರಗಳಿಗೂ ರಾಜ್ಯದಿಂದಲೇ ಆಲ್ಕೊಹಾಲ್ ಪೂರೈಸಲಾಗುತ್ತದೆ ಎಂದರು.

ಸಾರಾಯಿ ನಿಷೇಧಿಸುವ ಮುನ್ನ ರಾಜ್ಯದಲ್ಲಿ 12 ಲಕ್ಷ ಪೆಟ್ಟಿಗೆ ಮದ್ಯದ ಬಾಕ್ಸ್‌ಗಳು ಮಾರಾಟವಾದರೆ, ಅವುಗಳ ಸಂಖ್ಯೆ ಇದೀಗ 44 ಲಕ್ಷ ದಾಟಿದೆ. ತಾಜಾ ಹಣ್ಣಿನ ರಸದಿಂದ ತಯಾರಿಸುವ ವೈನ್‌ನಲ್ಲಿ ಶೇ 13  ಬ್ರಾಂದಿ-ವಿಸ್ಕಿಯಲ್ಲಿ ಶೇ 43, ಬಿಯರ್‌ನಲ್ಲಿ  ಶೇ 4ರಿಂದ 8ರಷ್ಟು ಆಲ್ಕೊಹಾಲ್ ಮಿಶ್ರಣ ಮಾಡಲಾಗುತ್ತದೆ  ಎಂದರು.

ಒಟ್ಟಾರೆ 36 ಸಾವಿರ ಕೋಟಿ ವಾರ್ಷಿಕ ವಹಿವಾಟು ನಡೆಯುತ್ತಿರುವ ಉದ್ಯಮದಲ್ಲಿ 15 ಲಕ್ಷ ಜನ ತೊಡಗಿಕೊಂಡಿದ್ದಾರೆ. 1992ರಿಂದ ಇದುವರೆಗೆ ಯಾವುದೇ ಹೊಸ ಮದ್ಯದಂಗಡಿಗಳಿಗೆ ಅವಕಾಶ ಕೊಟ್ಟಿಲ್ಲ. ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಗುರುತಿಸಲಾಗಿದ್ದ 4,800 ಕಳ್ಳಬಟ್ಟಿ ತಯಾರಿಕಾ ಕೇಂದ್ರಗಳ ಪೈಕಿ ಇದೀಗ ಅವು 60ರಿಂದ 70ಕ್ಕೆ ಇಳಿದಿವೆ. ಇನ್ನು ನಾಲ್ಕೈದು ತಿಂಗಳಲ್ಲಿ ಕರ್ನಾಟಕವು ಕಳ್ಳಬಟ್ಟಿ ಮುಕ್ತ ರಾಜ್ಯವಾಗಲಿದೆ ಎಂದರು.

ಮದ್ಯಪಾನ ನಿಷೇಧಿಸಿದರೆ ಬೇರೆ ಮೂಲಗಳಿಂದ ಆದಾಯ ಕ್ರೋಡೀಕರಿಸಬಹುದು. ಆದರೆ, 1.70 ಕೋಟಿ ಜನರನ್ನು ಈ ಚಟದಿಂದ ಮುಕ್ತಗೊಳಿಸಲು ಸಾಧ್ಯವೇ? ಎಂಬುದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದರು.

Post Comments (+)