ಹೆಚ್ಚುತ್ತಿರುವ ಡೆಂಗೆಜ್ವರ ಪ್ರಕರಣ: ನಗರದ 5,169 ಮನೆಗಳಲ್ಲಿ ಲಾರ್ವ ಪತ್ತೆ!

ಮಂಗಳವಾರ, ಜೂಲೈ 23, 2019
27 °C

ಹೆಚ್ಚುತ್ತಿರುವ ಡೆಂಗೆಜ್ವರ ಪ್ರಕರಣ: ನಗರದ 5,169 ಮನೆಗಳಲ್ಲಿ ಲಾರ್ವ ಪತ್ತೆ!

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗೆ ನಿಯಂತ್ರಣಕ್ಕೆ ಸಮರೋಪಾದಿಯ ಕ್ರಮ ಕೈಗೊಳ್ಳಲಾಗಿದ್ದು, ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಒಂದು ವಾರದ  ಅವಧಿಯಲ್ಲಿ 30,048 ಮನೆಗಳಿಗೆ ಭೇಟಿ ನೀಡಿದ್ದು, 5,169 ಮನೆಗಳಲ್ಲಿ ಲಾರ್ವ ಪತ್ತೆಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡೆಂಗೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕರೆಯಲಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ 75 ಸಾವಿರ ಮನೆಗಳ ಸಮೀಕ್ಷೆ ಹಮ್ಮಿಕೊಂಡಿದ್ದು, ಅದರಲ್ಲಿ 30 ಸಾವಿರ ಪೂರೈಸಲಾಗಿದೆ. ಉಳಿದ ಮನೆಗಳ ಸಮೀಕ್ಷೆಯನ್ನು 10 ದಿನದ ಒಳಗೆ ಪೂರ್ಣಗೊಳಿಸಲಾಗುವುದು. ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುಮಿತ್ರಾದೇವಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 227 ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 82 ಪ್ರಕರಣ ಪಾಸಿಟಿವ್ ಬಂದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 116 ಶಂಕಿತ ಪ್ರಕರಣ ವರದಿಯಾಗಿತ್ತು. ಅದರಲ್ಲಿ 34 ಪಾಸಿಟಿವ್ ಬಂದಿದೆ ಎಂದು ವಿವರ ನೀಡಿದರು.

ಡೆಂಗೆ ಕುರಿತ ಮಾಹಿತಿ, ವಹಿಸಬೇಕಾದ ಮುಂಜಾಗ್ರತೆ ಕುರಿತು ನಿತ್ಯವೂ ಎರಡು ಸ್ಥಳಗಳಲ್ಲಿ ಸಿ.ಡಿ. ಮೂಲಕ ಪ್ರದರ್ಶನ ನೀಡಲಾಗುತ್ತಿದೆ. ಹರಿಹರ, ದಾವಣಗೆರೆಯಲ್ಲಿ ಸಿ.ಡಿ. ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಅದನ್ನು ಉಳಿದ ತಾಲ್ಲೂಕುಗಳಿಗೂ ವಿಸ್ತರಿಸಲಾಗುತ್ತಿದೆ ಎಂದರು. 

ಯೋಜಿತ ಕಾರ್ಯಕ್ಕೆ ತಾಕೀತು: ಇದಕ್ಕೂ ಮೊದಲು ಎಲ್ಲ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ ಅಧಿಕಾರಿಗಳ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಡೆಂಗೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಮುನ್ನೆಚ್ಚರಿಕೆ, ಜಾಗೃತಿ ಜಾಥಾ, ಕರಪತ್ರ ಮುದ್ರಿಸುವುದು, ಪೋಸ್ಟರ್ ಅಂಟಿಸುವುದು, ಮನೆಮನೆಗೆ ತೆರಳಿ ಅರಿವು ಮೂಡಿಸುವುದು, ನೀರು ಸಂಗ್ರಹ, ಬಳಕೆ ಕುರಿತು ತಿಳಿವಳಿಕೆ ಮೂಡಿಸುವ ಬಗ್ಗೆ ಯೋಜನೆ ರೂಪಿಸಬೇಕು. ಅದಕ್ಕೆ ತಗುಲುವ ವೆಚ್ಚವನ್ನು ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಜಾಗೃತಿ ಕಾರ್ಯಕ್ರಮಗಳಿಗೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ಅಗತ್ಯವಿರುವ ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕು. ಸ್ವಚ್ಛತೆ ಹಾಳುಮಾಡುವ ಹೋಟೆಲ್, ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಹೆಚ್ಚಿರುವ ಹಂದಿಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪ್ರತಿ ಶಾಲೆಗಳಲ್ಲೂ ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಡೆಂಗೆ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ರಾಜಶೇಖರ್‌ಅವರಿಗೆ ಸೂಚಿಸಿದರು.

ಹೆಚ್ಚುವರಿ ಎಸ್‌ಪಿ ಬಿ.ಟಿ. ಚವಾಣ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಾಸುದೇವ್, ಜಿಲ್ಲಾ ಮಲೇರಿಯಾ ಅಧಿಕಾರಿ ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry