ಹೆಚ್ಚುತ್ತಿರುವ ಡೆಂಗೆ ಜ್ವರ ಸಾರ್ವಜನಿಕರ ಆತಂಕ

ಬುಧವಾರ, ಜೂಲೈ 17, 2019
30 °C

ಹೆಚ್ಚುತ್ತಿರುವ ಡೆಂಗೆ ಜ್ವರ ಸಾರ್ವಜನಿಕರ ಆತಂಕ

Published:
Updated:

ಕನಕಪುರ: `ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಅಣೇದೊಡ್ಡಿಯಲ್ಲಿ ಡೆಂಗೆ ಜ್ವರ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ' ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕಳೆದ 1 ತಿಂಗಳಿಂದ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಸಾಕಷ್ಟು ಮಂದಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಪ್ರದೀಪ್ ಮತ್ತು ಗುರುವಯ್ಯ, ಚಿಕ್ಕತಾಯಮ್ಮ ಎಂಬುವವರಿಗೆ ಡೆಂಗೆ ಇರುವುದು ಪತ್ತೆಯಾಗಿದೆ. ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡ ಪ್ರಾರಂಭದಲ್ಲಿಯೇ ತಾಲ್ಲೂಕು ವೈದ್ಯಾಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿ ಇ.ಒ. ಅವರಿಗೆ  ದೂರು ನೀಡಿ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತು.ಆದರೆ ಈವರೆಗೂ ತಾಲ್ಲೂಕು ವೈದ್ಯಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಾಥಮಿಕ ಹಂತದ ಆರೋಗ್ಯ ಸೇವೆ ಕಲ್ಪಿಸುವ ಗೋಜಿಗೂ ಹೋಗದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಒಂದು ಮನೆಯಲ್ಲಿ ಒಬ್ಬರಿಗೆ ಜ್ವರ ಬಂದರೆ ನಂತರ ಆ ಕುಟುಂಬದವರಿಗೆಲ್ಲಾ ಜ್ವರ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ' ಎಂದರು.ಗ್ರಾಮದಲ್ಲಿ ಸಾಮೂಹಿಕವಾಗಿ ಕಾಣಿಸಿಕೊಳ್ಳುತ್ತಿರುವ ಜ್ವರದ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆಯವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಗ್ರಾಮದ ಮುಖಂಡ ಮತ್ತು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವನಂಜಪ್ಪ ಆರೋಪಿಸಿದ್ದಾರೆ.`ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ದೂರು ನೀಡಲಾಗಿದೆ. ವೈದ್ಯರ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಆರೋಗ್ಯ ಶಿಬಿರ ನಡೆಸಿ ಖಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ' ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry